Advertisement

ಯುವಪೀಳಿಗೆ ಗಾಂಧೀಜಿ ತತ್ವಾದರ್ಶ ಅಳವಡಿಸಿಕೊಳ್ಳಿ

11:37 AM Oct 03, 2018 | Team Udayavani |

ಮೈಸೂರು: ಇಂದಿನ ಯುವಪೀಳಿಗೆ ಮಹಾತ್ಮ ಗಾಂಧೀಜಿ ಅವರ ಜೀವನ, ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು. 

Advertisement

ಜಿಲ್ಲಾಡಳಿತ, ಜಿಲ್ಲಾಪಂಚಾಯತ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮದಲ್ಲಿ ಸ್ವತ್ಛತಾ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.

ಹೋರಾಟ ಅವಿಸ್ಮರಣೀಯ: ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಗಾಂಧೀಜಿ ಅವರು ನಡೆಸಿದ ಅಹಿಂಸಾತ್ಮಕ ಚಳವಳಿ, ಶಾಂತಿಯ ಹೋರಾಟ ಅವಿಸ್ಮರಣೀಯ. ಕೇವಲ ಗಾಂಧೀಜಿ ಅವರ ಹೋರಾಟವಷ್ಟೇ ಅಲ್ಲದೇ, ಅವರ ಜೀವನ ಎಲ್ಲರಿಗೂ ಮಾದರಿಯಾಗಿದೆ. ಜೀವನದಲ್ಲಿ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ಗಾಂಧೀಜಿ ಅವರ ಜೀವನ, ತತ್ವ, ಆದರ್ಶಗಳನ್ನು ಇಂದಿನ ಯುವ ಸಮುದಾಯ ಅಳವಡಿಸಿಕೊಳ್ಳಬೇಕಿದೆ ಎಂದರು. 

ಸರ್ವಧರ್ಮ ಪ್ರಾರ್ಥನೆ: ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಹಿಂದೂ, ಮುಸ್ಲಿಂ, ಕ್ರೆ„ಸ್ತ, ಜೈನ, ಬೌದ್ಧ ಹಾಗೂ ಸಿಖ್‌ ಧರ್ಮಗುರುಗಳು ಒಟ್ಟಾಗಿ ಸರ್ವಧರ್ಮ ಪ್ರಾರ್ಥನೆ ಸಲ್ಲಿಸುವ ಮೂಲಕ ಏಕತೆ ಮೆರೆದರು. ಇದೇ ಸಂದರ್ಭದಲ್ಲಿ ಸ್ವತ್ಛ ಭಾರತ್‌ ಅಭಿಯಾನದಡಿ ಮೈಸೂರು ಮಹಾನಗರ ಪಾಲಿಕೆ ದೇಶದಲ್ಲೇ ಸ್ವತ್ಛ ನಗರ ಎಂಬ ಪ್ರಖ್ಯಾತಿಯನ್ನು ಪಡೆದಿರುವ ನೆನಪಿಗಾಗಿ ವಿಶೇಷ ಅಂಚೆ ಲಕೋಟೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅವರು ಪ್ರಕಟಿಸಿರುವ ವಿಶೇಷ ಸಂಚಿಕೆ ಮತ್ತು ಮಾರ್ಚ್‌ ಆಫ್ ಕರ್ನಾಟಕ ಆಂಗ್ಲ ಮಾಸಿಕ ಪತ್ರಿಕೆಗಳನ್ನು ಸಚಿವ ಜಿ.ಟಿ.ದೇವೇಗೌಡ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗಾಂಧೀಜಿ ಅವರ ಬಾಲ್ಯ, ಕುಟುಂಬ, ಶಿಕ್ಷಣ, ಧಾರ್ಮಿಕ, ಆಧ್ಯಾತ್ಮಿಕ ವಿಚಾರಧಾರೆಗಳು, ಹೋರಾಟಗಳ ಸೇರಿದಂತೆ ಗಾಂಧೀಜಿ ಅವರ ಬದುಕಿನ ಚಿತ್ರಣವನ್ನು ತಿಳಿಸುವ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು.

Advertisement

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಚಿವ ಜಿ.ಟಿ.ದೇವೇಗೌಡ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಗಾಂಧಿಚೌಕದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಶಾಸಕ ತನ್ವೀರ್‌, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌, ಪ್ರಾದೇಶಿಕ ಆಯುಕ್ತ ಕಪಿಲ್‌ ಮೋಹನ್‌, ಪಾಲಿಕೆ ಆಯುಕ್ತ ಕೆ.ಎಚ್‌.ಜಗದೀಶ್‌, ಜಿಪಂ ಅಧ್ಯಕ್ಷ ನಯೀಮಾ ಸುಲ್ತಾನ್‌, ಜಿಪಂ ಸಿಇಒ ಕೆ.ಜ್ಯೋತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ವಿನೋದಚಂದ್ರ, ಸಹಾಯಕ ನಿರ್ದೇಶಕ ರಾಜು ಇನ್ನಿತರರು ಹಾಜರಿದ್ದರು.

ಮನವಿ ಮಾಡಲಾಗಿದೆ: ದಸರಾ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆಗೆ ಶೀಘ್ರವೇ ಮೇಯರ್‌ ಆಯ್ಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು. ಈ ಹಿಂದೆ 1995ರಲ್ಲಿ ಮೇಯರ್‌ ಇಲ್ಲದೇ ದಸರಾ ನಡೆದಿತ್ತು. ಆದರೆ ಈ ಬಾರಿ ಹಾಗೇ ಆಗುವುದಿಲ್ಲ. ದಸರಾ ವೇಳೆಗೆ ಮೇಯರ್‌ ಆಯ್ಕೆ ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮೇಯರ್‌ ಆಯ್ಕೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next