ಇವರ ತಂದೆ ಹಾಗೂ ತಾತ ಚೆಂಡೆ-ಮದ್ದಳೆ ವಾದಕರಾಗಿದ್ದ ಕಾರಣ, ವಂಶ ಪಾರಂಪರಿಕವಾಗಿ ಇವರಿಗೂ ಯಕ್ಷಗಾನ ಹಿಮ್ಮೇಳದಲ್ಲಿ ಆಸಕ್ತಿ ಮೂಡಿತ್ತು. 1968 ಮಾರ್ಚ್ 23 ರಂದು ಜನಿಸಿದ ಇವರು 13ನೇ ವಯಸ್ಸಿನಲ್ಲಿ ತಂದೆಯಿಂದಲೇ ಚೆಂಡೆ-ಮದ್ದಳೆಯ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಬಳಿಕ ಯಕ್ಷಗಾನದ ಮೇರು ಶಿಖರ ಪ್ರಾಯರಲ್ಲಿ ಒಬ್ಬರಾದ ದಿ.ನೆಡ್ಲೆ ನರಸಿಂಹ ಭಟ್ಟರಲ್ಲಿ ಶಿಷ್ಯತ್ವವನ್ನು ಪಡೆದರು. 15 ನೇ ವಯಸ್ಸಿನಲ್ಲಿ ಸುರತ್ಕಲ್ ಮೇಳದ ಮೂಲಕ ತಿರುಗಾಟ ಆರಂಭಿಸಿ, ನಂತರ ಕಟೀಲು, ಪುತ್ತೂರು, ಕದ್ರಿ ಹಾಗೂಧರ್ಮಸ್ಥಳ ಮೇಳಗಳಲ್ಲಿ ಸುಮಾರು 30 ಕ್ಕೂ ಹೆಚ್ಚು ವರ್ಷಗಳ ಕಾಲ ತಿರುಗಾಟ ನಡೆಸಿದ ಅನುಭವ ಗಣೇಶ್ ರಾವ್‌ರವರದ್ದು.
Advertisement
22 ವರ್ಷಗಳಿಂದ ಧರ್ಮಸ್ಥಳ ಮೇಳದ ಪ್ರಧಾನ ಮದ್ದಳೆಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಧರ್ಮಸ್ಥಳ ಮೇಳದಲ್ಲಿ ಚಿಪ್ಪಾರು ಕೃಷ್ಣಯ್ಯ ಬಲ್ಲಾರರ ಸ್ಥಾನವನ್ನು ಸಮರ್ಥವಾಗಿ ತುಂಬಿದ್ದರು. ಒಂದು ಯಕ್ಷಗಾನವು ಪರಿಣಾಮಕಾರಿಯಾಗಿ ಮೂಡಿ ಬರಬೇಕಾದರೆ ಪಾತ್ರಧಾರಿಗಳ ಅಭಿನಯ, ನೃತ್ಯ, ಭಾಗವತಿಕೆ ಎಷ್ಟು ಮುಖ್ಯವೋ, ಸಮರ್ಥ ಚೆಂಡೆ-ಮದ್ದಳೆಗಳ ಹಿಮ್ಮೇಳವೂ ಸಹಾ ಅಷ್ಟೇ ಪ್ರಮುಖವಾದುದು. ಗಣೇಶ್ ರಾವ್‌ರವರ ಚೆಂಡೆ ಹಾಗೂ ಮದ್ದಳೆ ವಾದನದ ಸೊಬಗು ಕಲಾವಿದರಿಗಷ್ಟೇ ಅಲ್ಲದೆ, ಪ್ರೇಕ್ಷಕರಿಗೂ ಮುದ ನೀಡುತ್ತಿತ್ತು. ರಾಗ, ತಾಳಗಳ ಸ್ವಷ್ಟವಾದ ಜ್ಞಾನ, ತಾಳ-ಲಯಗಳಲ್ಲಿ ಅಪ್ರತಿಮ ಹಿಡಿತ, ರಾಗಕ್ಕೆ ತಕ್ಕದಾಗಿ ಚೆಂಡೆ-ಮದ್ದಳೆಯನ್ನು ನುಡಿಸುವ ಕಲೆ ಇವೆಲ್ಲ ಗಣೇಶ್ ರಾವ್‌ರವರಿಗೆ ಖ್ಯಾತಿಯನ್ನು ತಂದುಕೊಟ್ಟವು.