ಹೊಸದಿಲ್ಲಿ : ಪಾಕ್ ಸಂಜಾತ, ಭಾರತೀಯ ಪ್ರಜೆ, ಖ್ಯಾತ ಗಾಯಕ, ಅದ್ನಾನ್ ಸಾಮಿ ಅವರ ತಂಡದವರನ್ನು ಈಚೆಗೆ ಕುವೈಟ್ ವಿಮಾನ ನಿಲ್ದಾಣದಲ್ಲಿನ ವಲಸೆ ಅಧಿಕಾರಿಗಳು “ಇಂಡಿಯನ್ ಡಾಗ್ಸ್’ ಎಂದು ಕರೆದಿರುವ ಜನಾಂಗೀಯ ಅವಮಾನದ ಘಟನೆ ವರದಿಯಾಗಿದೆ.
ಅದ್ನಾನ್ ಸಾಮಿ ಅವರು ತನಗೆ ಮತ್ತು ತನ್ನ ತಂಡದವರಿಗೆ ಜನಾಂಗೀಯ ಅವಮಾನದಿಂದಾಗಿರುವ ನೋವು, ದುಃಖವನ್ನು ಟ್ವಿಟರ್‌ನಲ್ಲಿ ತೋಡಿಕೊಂಡಿದ್ದಾರೆ ಮತ್ತು ತನ್ನ ಈ ಪೋಸ್ಟ್ ಅನ್ನು ಅವರು ಕುವೈಟ್‌ನಲ್ಲಿ ಭಾರತೀಯ ದೂತಾವಸಕ್ಕೂ ಟ್ಯಾಗ್ ಮಾಡಿದ್ದಾರೆ. ತಮಗೆ ವಿದೇಶಿ ನೆಲದಲ್ಲಿ ಯಾವುದೇ ಬೆಂಬಲ ಸಿಕ್ಕಿಲ್ಲ ಎಂಬ ಅಳಲನ್ನು ಸಾಮಿ ಪ್ರಕಟಿಸಿದ್ದಾರೆ.
ಗಾಯಕ ಅದ್ನಾನ್ ಸಾಮಿ ಅವರು ತಮ್ಮ ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಈ ರೀತಿಯಾಗಿ ಬರೆದಿದ್ದಾರೆ :
“ನಾವು ನಿಮ್ಮ ನಗರಕ್ಕೆ ಪ್ರೀತಿ ವಾತ್ಸಲ್ಯದಿಂದ ಬಂದಿದ್ದೆವು; ಭಾರತೀಯ ಸಹೋದರರು ನಮ್ಮನ್ನು ಪ್ರೀತಿಯಿಂದ ಆಲಂಗಿಸಿದ್ದಾರೆ. ಆದರೆ ನೀವು (ಕುವೈಟ್ ವಲಸೆ ಅಧಿಕಾರಿಗಳು) ನಮಗೆ ಯಾವುದೇ ಬೆಂಬಲ ನೀಡಿಲ್ಲ; ಬದಲಾಗಿ ನನ್ನ ತಂಡದವರನ್ನು ವಿನಾಕಾರಣವಾಗಿ ಇಂಡಿಯನ್ ಡಾಗ್ಸ್ ಎಂದು ಕರೆದಿದ್ದೀರಿ. ನಾವು ನಿಮ್ಮನ್ನು ಸಂಪರ್ಕಿಸಿದಾಗ ನೀವು ನಮಗಾಗಿ ಏನೂ ಮಾಡಲು ಮುಂದಾಗಲಿಲ್ಲ. ಈ ರೀತಿಯ ಉದ್ಧಟತನವನ್ನು ತೋರುವುದಕ್ಕೆ ಕುವೈಟಿಗರಿಗೆ ಅದೆಷ್ಟು ಧೈರ್ಯ?’
Related Articles
ಅದ್ನಾನ್ ಸಾಮಿ ತಂಡ ಕುವೈಟ್‌ನಲ್ಲಿ ಅನುಭವಿಸಿರುವ ಈ ಜನಾಂಗೀಯ ನಿಂದನೆಯ ಪ್ರಕರಣವನ್ನು ಕೇಂದ್ರ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆ ಆದಷ್ಟು ಬೇಗನೆ ನೀವು ನನ್ನನ್ನು ಸಂಪರ್ಕಿಸಬೇಕೆಂದು ಕೋರುತ್ತೇನೆ ಎಂಬುದಾಗಿ ಅವರು ಸಾಮಿಗೆ ತಿಳಿಸಿದ್ದಾರೆ. ಸುಶ್ಮಾ ತೋರಿರುವ ಸೌಜನ್ಯ ಮತ್ತು ಬೆಂಬಲಕ್ಕೆ ಸಾಮಿ ಕೃತಜ್ಞತೆ ಹೇಳಿದ್ದಾರೆ.
ಇದನ್ನು ಅನುಸರಿಸಿ ಕೇಂದ್ರ ಸಹಾಯಕ ಗೃಹ ಸಚಿವ ಕಿರಣ್ ರಿಜಿಜು ಅವರುಸಾಮಿ ಅವರಿಗೆ ಪತ್ರ ಬರೆದು “ನಾವು ಈ ವಿಷಯವನ್ನು ಪರಿಶೀಲಿಸುತ್ತೇನೆ’ ಎಂಬ ಭರವಸೆ ನೀಡಿದ್ದಾರೆ.