ಬೆಂಗಳೂರು: ಚುನಾವಣ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದಾಖಲಾಗಿರುವ ಪ್ರಕರಣವೊಂದರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರಾಗುವುದನ್ನು ತಪ್ಪಿಸಿಕೊಳ್ಳುತ್ತಿರುವ ಮಾಜಿ ಸಚಿವ ಬಿ. ಶ್ರೀರಾಮುಲು ನಡೆಗೆ ಕಿಡಿಕಾರಿದ ಹೈಕೋರ್ಟ್, ವಿಚಾರಣ ನ್ಯಾಯಾಲಯದ ಮುಂದೆ ಹಾಜರಾಗದಿದ್ದರೆ ಬಂಧನದ ಆದೇಶ ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಮತ್ತು ಚಿತ್ರದುರ್ಗದ 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಶ್ರೀರಾಮುಲು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ನಿಗದಿಯಾಗಿರುವ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾ| ಕೃಷ್ಣ ಎಸ್.ದೀಕ್ಷಿತ್ ಶುಕ್ರವಾರ ವಿಚಾರಣೆ ನಡೆಸಿದರು.
ಈ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣದ ವಿವರಣೆಯನ್ನು ನ್ಯಾಯಪೀಠಕ್ಕೆ ನೀಡಿದರು. ಆಗ ಈ ಪ್ರಕರಣ ಯಾವಾಗ ದಾಖಲಾಯಿತು ಮತ್ತು ನಿಮ್ಮ ಕಕ್ಷಿದಾರರು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರಾಗಿದ್ದಾರೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತು. 2023ರ ಎ. 29ರಂದು ಖಾಸಗಿ ದೂರು ದಾಖಲಾಗಿದೆ.
ಅದುವರೆಗೆ ಕೋರ್ಟ್‌ಗೆ ಹಾಜರಾಗಿಲ್ಲ ಎಂದರು. ಹಾಗಾದರೆ ವಿಚಾರಣ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿಲ್ಲವೇ ಎಂದು ನ್ಯಾಯಪೀಠ ಮರುಪ್ರಶ್ನಿಸಿದಾಗ, ಜಾರಿಗೊಳಿಸಿದೆ ಎಂದು ವಕೀಲರು ಉತ್ತರಿಸಿದರು. ಆಗ ಎಷ್ಟು ಸಮನ್ಸ್ ಜಾರಿಯಾಗಿದೆ ಎಂದು ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಲ್ಲಿ ನ್ಯಾಯಪೀಠ ಕೇಳಿದ್ದು, ನಾಲ್ಕು ಬಾರಿ ಎಂದು ಅವರು ತಿಳಿಸಿದರು.
ಅದಕ್ಕೆ ಸಿಟ್ಟಾದ ನ್ಯಾಯಪೀಠ, ಮುಂದಿನ ವಿಚಾರಣ ದಿನಾಂಕ ಯಾವಾಗ ಇದೆ ಎಂದು ಅರ್ಜಿದಾರರಿಗೆ ತಿಳಿಸಿ. ಅಂದು ಹಾಜರಾಗದಿದ್ದರೆ ಬಂಧನದ ಆದೇಶ ಹೊರಡಿಸಲಾಗುವುದು ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಮುಂದೂಡಿತು.