ಮೈಸೂರು : ಚುನಾವಣೆಯಲ್ಲಿ ಗೆಲ್ಲಲಾಗದಂತಹ ಸ್ಥಿತಿಯಲ್ಲಿರುವ ಕುಮಾರಸ್ವಾಮಿ 3 ವರ್ಷ ಸುಮ್ಮನಿದ್ದು ಈಗ ಈ ರೀತಿ ಹೇಳಿರೋದು ಸರಿಯಲ್ಲ ಎಂದು ಸಚಿವ ಎಸ್. ಟಿ. ಸೋಮಶೇಖರ್ ಅವರು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಗಂಭೀರ ಆರೋಪಕ್ಕೆ ಕಿಡಿ ಕಾರಿದ್ದಾರೆ.
”ಸಮ್ಮಿಶ್ರ ಸರ್ಕಾರ ಕೆಡೆವಿದ ಶಾಸಕರು ಮುಂಬೈನಲ್ಲಿದ್ದಾಗ ಮೋಜು ಮಸ್ತಿಗಾಗಿ ಸ್ಯಾಂಟ್ರೋ ರವಿ ಹುಡುಗಿಯರನ್ನು ಸಪ್ಲೈ ಮಾಡಿದ್ದ” ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿ, ಕುಣಿಯಲಾರದವಳು ನೆಲ ಡೊಂಕು ಎಂದಳಂತೆ ಎಂದು ಕಿಡಿ ಕಾರಿದರು.
ಕುಮಾರಸ್ವಾಮಿಗೆ ಸರಿಯಾಗಿ ಸರ್ಕಾರ ನಡೆಸಲು ಆಗಲಿಲ್ಲ. ಇವರು ಫೈವ್ ಸ್ಟಾರ್ ಹೋಟೆಲ್ ನಲ್ಲಿ ಕುಳಿತು ಆಡಳಿತ ನಡೆಸುತ್ತಿದ್ದರಿಂದ ನಾವೆಲ್ಲರೂ ಬೇಸತ್ತು ಹೋದೆವು. ಇವರು ಸರಿಯಾಗಿ ಸರ್ಕಾರ ನಡೆಸಿದ್ದರೇ 5 ವರ್ಷ ಇವರೇ ಸಿಎಂ ಆಗಿರುತ್ತಿದ್ದರು.ಅವರ ತಪ್ಪು ಮುಚ್ಚಿ ಹಾಕಿಕೊಳ್ಳಲು ಈ ರೀತಿಯ ಆರೋಪ ಮಾಡಿದ್ದಾರೆ. ಈ ಬಗ್ಗೆ ದೂರು ಕೊಡಲಿ, ತನಿಖೆಯಾಗಲಿ ಎಂದು ಕುಮಾರಸ್ವಾಮಿಗೆ ಸವಾಲು ಹಾಕಿದರು.
ನಾವು ಅಪ್ಪ ಅಮ್ಮನಿಗೆ ಹುಟ್ಟಿದವರು ರಾಜಕೀಯ ಮಾಡಿಕೊಂಡು ಬಂದಿದ್ದೇವೆ. ನಮ್ಮಪ್ಪ ಚೀಫ್ ಮಿನಿಸ್ಟರ್ ಅಲ್ಲ, ನಮ್ಮಪ್ಪ ಪ್ರಧಾನಿಯಲ್ಲ.ನಮ್ಮಪ್ಪ ಆರ್ಡಿನರಿ ವೆಟರ್ನರಿ ಸ್ಟಾಕ್ ಇನ್ಸ್‌ಪೆಕ್ಟರ್. ಸ್ಟಾಕ್ ಇನ್ಸ್‌ಪೆಕ್ಟರ್ ಮಗ ಈ ರಾಜ್ಯದ ಸಹಕಾರ ಮಂತ್ರಿ ಆಗಬೇಕಾದರೆ ನನ್ನ ತಂದೆತಾಯಿ ಸುಸಂಸ್ಕೃತ ಪಾಠ ಕಲಿಸಿದ್ದಾರೆ.ರಾಜ್ಯದ ಜನರಿಗೆ ಸೇವೆ ಸಲ್ಲಿಸಲು ನಮ್ಮ ಪಕ್ಷ ಅವಕಾಶ ಮಾಡಿಕೊಟ್ಟಿದೆ. ಮಾತನಾಡುವಾಗ ನಾವು ಅನ್ನ ತಿಂತೇವೆ.ಅನ್ನ ತಿನ್ನುವ ಬಾಯಲ್ಲಿ ದ್ವೇಷ ರಾಜಕಕಾರಣ ಮಾಡೋದು ಸರಿಯಲ್ಲ. ದ್ವೇಷ ರಾಜಕಾರಣ ಮಾಡುವುದಾದರೆ ಚುನಾವಣೆಯಲ್ಲಿ ಎದುರಿಸಲಿ ಎಂದು ಕಿಡಿ ಕಾರಿದರು.
ಅಮಿತ್ ಶಾ ನಮ್ಮ ದೇಶದ ಚಾಣಕ್ಯ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲೆಂದು ಅವರು ಶ್ರಮ ಪಡುತ್ತಿದ್ದಾರೆ. ಜೆಡಿಎಸ್ ನವರಿಗೆ ಅಮಿತ್ ಶಾ ಕಂಡರೆ ಭಯ. ಹಾಗಾಗಿ ಕುಮಾರಸ್ವಾಮಿ ಈ ರೀತಿಯ ಆರೋಪಗಳನ್ನು ಮಾಡಿದ್ದಾರೆ ಎಂದರು.
ವಿಧಾನಸೌಧದಲ್ಲಿ 10 ಲಕ್ಷ ಹಣ ಪತ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಣ ಪತ್ತೆಯಾದ ಬೆನ್ನಲ್ಲೇ ವಿಧಾನಸೌಧವನ್ನು ಮಾಲ್ ಹಾಗು ಮಾರ್ಕೆಟ್ ಗೆ ಹೋಲಿಕೆ ಮಾಡಿರುವವರ ವಿರುದ್ಧ ವಾಗ್ದಾಳಿ ನಡೆಸಿ, ವಿಧಾನಸೌಧ ಕೆಂಗಲ್ ಹನುಮಂತಯ್ಯನವರು ಕಟ್ಟಿರುವ ಸೌಧ.ವಿಧಾನಸೌಧ ಎಂದರೇ ಅದು ವಿಧಾನಸೌಧವೇ. ವಿಧಾನಸೌಧ ಇಡೀ ರಾಜ್ಯದ ಜನರನ್ನು ರಕ್ಷಣೆ ಮಾಡುತ್ತಿರುವ ಶಕ್ತಿ ಸೌಧವಾಗಿದೆ. ಶಕ್ತಿ ಸೌಧವನ್ನು ಮಾಲ್ ಹಾಗು ಮಾರ್ಕೆಟ್ ಗೆ ಹೋಲಿಕೆ ಮಾಡಿದ್ದು ಸರಿಯಲ್ಲ.ನಾನು ಎಲ್ಲ ಪಕ್ಷಗಳ ಸರ್ಕಾರವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ 25 ಲಕ್ಷ ಹಣ ಸಿಕ್ಕಿರಲಿಲ್ಲವೇ? ಆ ಬಳಿಕ ಏನು ಮಾಡಿದ್ರೀ, ತನಿಖೆಗೆ ಆದೇಶಿಸಿದಂತೆ ಮಾಡಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಿದ್ರಿ.ವಿಧಾನಸೌಧವನ್ನು ಶಾಪಿಂಗ್ ಮಾಲ್ ಗೆ ಹೋಲಿಸಿರುವವರನ್ನು ರಾಜ್ಯದ ಜನತೆ ಶಾಸಕರೆಂದು ಒಪ್ಪಿಕೊಳ್ಳಲು ಸಾಧ್ಯವೇ? ವಿಧಾನಸೌಧವನ್ನು ಮಾಲ್ ಗೆ ಹೋಲಿಸಿರುವವರಿಗೆ ಬುದ್ದಿ ಕಮ್ಮಿ ಎಂದು ತಿರುಗೇಟು ನೀಡಿದರು.