ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ| ಚಿನ್ನದಾತುರ ಕಿಂತ ಹೆಣ್ಣು ಗಂಡೊಲವು|| ಮನ್ನಣೆಯ ದಾಹವೀ ಯೆಲ್ಲಕಂ ತೀಕ್ಷ್ಣತಮ| ತಿನ್ನುವುದದಾತ್ಮವನೆ- ಮಂಕುತಿಮ್ಮ|| ಆಹಾರ, ಚಿನ್ನ, ಕಾಮನೆಗಿಂತ ಮನ್ನಣೆಯ ದಾಹ ತೀಕ್ಷ್ಣವಾಗಿರುತ್ತದೆ ಎಂದು ಮಂಕುತಿಮ್ಮನ ಕಗ್ಗದಲ್ಲಿ ಡಿ.ವಿ. ಗುಂಡಪ್ಪನವರು ಹೇಳುತ್ತಾರೆ. ಮನ್ನಣೆ ಎಂದರೆ ಮನ್ನಣೆಗಾಗಿಯೇ ಮನ್ನಣೆಯಲ್ಲ.
ಕೀರ್ತಿಗಾಗಿ ಮನ್ನಣೆ. ಕೀರ್ತಿ, ಮನ್ನಣೆ, ಹುದ್ದೆ (ಸ್ಥಾನ ಮಾನ) ಬೆಸೆದುಕೊಂಡಿರುತ್ತದೆ. ಸ್ಥಾನಮಾನವಿದ್ದರೆ ಕೀರ್ತಿ, ಮನ್ನಣೆ ಎಲ್ಲವೂ… ಉಳಿದೆಲ್ಲ ಸುಖಗಳನ್ನು ಪಡೆಯಲೋಸುಗ ಹಣಕ್ಕೆ ಬೆಲೆಯಲ್ಲವೆ? ಇಲ್ಲವಾದರೆ ಹಣ ಹೆಣಕ್ಕೆ ಸಮಾನವಲ್ಲವೆ? ಇಂತಹ ಅಪೂರ್ವ ನುಡಿಮುತ್ತುಗಳನ್ನು ಸುಭಾಷಿತಕಾರರು, ತತ್ವಶಾಸ್ತ್ರಕೋವಿದರು ಹೇಳುತ್ತಲೇ ಬಂದಿದ್ದಾರೆ. ನಿಸರ್ಗದಲ್ಲಿ ಕಂಡುಬರುವುದನ್ನೇ ಹೆಕ್ಕಿ ಹೆಕ್ಕಿ ಹೇಳಿರುವುದರಿಂದ ಇದು ಸಾಮಾನ್ಯ ವಿಷಯವಾದರೂ ನಾವು ಇವುಗಳನ್ನು ಓದುವಾಗ ಹುಬ್ಬೇರಿಸುತ್ತೇವೆ. ನಿಸರ್ಗದ ವಿಷಯವೆಂದರೆ ಜನಸಮೂಹದ ಗುಣ ಹಿಂದೆಯೂ ಹೀಗೆಯೇ ಇತ್ತು, ಇಂದೂ ಮುಂದೆಯೂ ಹೀಗೆಯೇ ಇರುತ್ತದೆ. ಇದಕ್ಕೆ ಭಿನ್ನವಾಗಿ ಯಾರಿರುತ್ತಾರೋ ಅಲ್ಲಿ ಗೌರವ ಮೂಡುತ್ತದೆ. ಆದರೆ ಈ ಸಂಖ್ಯೆ ಬಲು ಕ್ಷೀಣ. ಶ್ರೀಕೃಷ್ಣನೇ ಗೀತೆಯಲ್ಲಿ ಹೇಳಿದ್ದಾನಲ್ಲಾ ಸಾವಿರದಲ್ಲಿ ಒಬ್ಬ ಪ್ರಯತ್ನಿಸುತ್ತಾನೆ, ಅದರಲ್ಲಿಯೂ ಕೆಲವರಿಗಷ್ಟೆ ಸಾಧನೆ ಸಾಧ್ಯವಾಗುತ್ತದೆ ಎಂಬಂತೆ…
ಇನ್ನಷ್ಟು ವರ್ಷ ಕಾಲ 35ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿರಬಹುದಾದ ಅದಮಾರು ಮಠದ ಹಿರಿಯ ಯತಿ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಅದನ್ನು ಸ್ವಯಂ ಆಗಿ ಯತಿಶಿಷ್ಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ ಬಿಟ್ಟುಕೊಡಬೇಕಾದರೆ ವ್ಯಕ್ತಿತ್ವ ಎಷ್ಟು ದೊಡ್ಡದಿರಬೇಕು?
ಮೂಡುಬಿದಿರೆ ಸಮೀಪದ ಪುತ್ತಿಗೆಯಲ್ಲಿ 1958ರಲ್ಲಿ ಜನಿಸಿದ ರಾಘವೇಂದ್ರ ಮುಚ್ಚಿಂತಾಯ 1972ರಲ್ಲಿ ಅದಮಾರು ಮಠದ ಶ್ರೀವಿಬುಧೇಶತೀರ್ಥ ಶ್ರೀಪಾದರ ಶಿಷ್ಯರಾಗಿ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರೆನಿಸಿದರು. ಈಗ ಇವರ ಯತಿಧರ್ಮ ಜೀವನಕ್ಕೆ ಭರ್ತಿ 50 ವರ್ಷಗಳಾಗಿವೆ.
ಶ್ರೀಕೃಷ್ಣಮಠದಲ್ಲಿ ಎರಡು ತಿಂಗಳ ಪರ್ಯಾಯ ಪೂಜೆಯನ್ನು ಎರಡು ವರ್ಷಗಳಿಗೆ ವಿಸ್ತರಿಸಿದ ಶ್ರೀವಾದಿರಾಜ ಸ್ವಾಮಿಗಳೇ ಶಿಷ್ಯರಿಗೆ ಪರ್ಯಾಯ ಪೂಜೆಯನ್ನು ಬಿಟ್ಟು ಕೊಟ್ಟ ಮೊದಲಿಗರೂ ಹೌದು. ಅನಂತರ ಇಂತಹ ಅವಕಾಶ ಮೊದಲು ಕಲ್ಪಿಸಿದವರು ಶ್ರೀವಿಬುಧೇಶ ತೀರ್ಥ ಶ್ರೀಪಾದರು. 1956-57, 1972-73ರಲ್ಲಿ ಶ್ರೀವಿಬುಧೇಶತೀರ್ಥರು ಪರ್ಯಾಯ ಪೀಠಾರೋಹಣ ಮಾಡಿದರೆ, 1988-89ರಲ್ಲಿ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರಿಂದ ಪರ್ಯಾಯ ಪೂಜೆಯನ್ನು ನೆರವೇರಿಸಿದರು. 2004-05ರಲ್ಲಿ ಎರಡನೆಯ ಪರ್ಯಾಯ ಪೂಜೆ ನಡೆಸಿದರು. ಮೊದಲ ಪರ್ಯಾಯದಲ್ಲಿ ಗುರುಗಳ ಉಸ್ತುವಾರಿಯಲ್ಲಿ ಭೋಜನಶಾಲೆಯಂತಹ ಬೃಹತ್ ಮೂಲಸೌಕರ್ಯ ಕಲ್ಪಿಸಲಾಯಿತು. ಎರಡನೆಯ ಪರ್ಯಾಯದಲ್ಲಿ ಬೃಹತ್ ಕನಕ ಗೋಪುರ ನಿರ್ಮಾಣ, ಚಿಣ್ಣರ ಸಂತರ್ಪಣೆ ಶಾಲೆಗಳಿಗೆ ವಿಶೇಷ ಪ್ರೋತ್ಸಾಹದಂತಹ ಕಾರ್ಯಕ್ರಮಗಳನ್ನು ನಡೆಸಿದರು. ಇವರದು ಇನ್ನೊಂದು ವಿಶೇಷ ಗುಣವೆಂದರೆ ದಾನವನ್ನು ಗುಪ್ತವಾಗಿ ಮಾಡುವುದು. ಸರಕಾರ, ಸಂಘಸಂಸ್ಥೆಗಳ ಸಂಪತ್ತನ್ನು ಬರಿದು ಮಾಡಿಯೂ ಇತರರಿಗೆ ಕೊಟ್ಟ ಸ್ವಲ್ಪ ಸೌಲಭ್ಯವನ್ನು ತಾವೇ ಕೊಟ್ಟದ್ದು ಎಂಬಂತೆ ಮುಗ್ಧ ಜನತೆ ಎದುರು ಪೋಸು ಕೊಡುವವರು ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುವಾಗ ಗುಪ್ತದಾನಿಗಳು ವಿಶಿಷ್ಟವಾಗಿ ಕಂಡುಬರುತ್ತಾರೆ. “ಈ ಕೈಯಲ್ಲಿ ಕೊಟ್ಟದ್ದು, ಆ ಕೈಗೆ ಗೊತ್ತಾಗಬಾರದು’ ಎಂಬ ಶಾಸ್ತ್ರನುಡಿಯಂತೆ ನಡೆ. ಇವರು ಬಡವರಿಗೆ ಸುಮಾರು 100 ಮನೆ ನಿರ್ಮಿಸಿಕೊಟ್ಟದ್ದು ಎಲ್ಲಿಯೂ ಸುದ್ದಿಯಾಗಲಿಲ್ಲ. ಕುಂಜಾರುಗಿರಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವಾಗ ಅಪಾರ ಮೊತ್ತವನ್ನು ವಿನಿಯೋಗಿಸಿದ್ದು ಸ್ವತಃ ಸ್ವಾಮೀಜಿಯವರೇ. ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು 2020-21ರಲ್ಲಿ ಆ ಅವಕಾಶ ಇದ್ದರೂ ಗುರುಗಳು ನಡೆದಂತೆ ಶಿಷ್ಯ ಶ್ರೀಈಶಪ್ರಿಯತೀರ್ಥ ಶ್ರೀಪಾದರಿಂದ ಪರ್ಯಾಯ ಪೂಜೆ ಆಗುವಂತೆ ಅನುವು ಮಾಡಿಕೊಟ್ಟದ್ದು ವಿಶಾಲ ಮನೋಧೋರಣೆಯ ಪ್ರತೀಕ. ಆಗ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರಿಗೆ ಇನ್ನೇನು 60 ವರ್ಷ ತುಂಬುತ್ತದೆ ಎನ್ನುವಾಗಲೇ ಶಿಷ್ಯರಿಗೆ ಪರ್ಯಾಯ ಪೀಠಾರೋಹಣದ ಮುನ್ಸೂಚನೆ ನೀಡಿದ್ದಷ್ಟೆ ಅಲ್ಲ, ಮಠದ ಎಲ್ಲ ಅಧಿಕಾರವನ್ನು ಬಿಟ್ಟು ಕೊಟ್ಟರು. ಶ್ರೀಈಶಪ್ರಿಯತೀರ್ಥರ ಪ್ರಥಮ ಪರ್ಯಾಯ 2020-21ರಲ್ಲಿ ಮುಗಿಯುತ್ತಿದ್ದಂತೆ ಶ್ರೀವಿಬುಧೇಶತೀರ್ಥ ಶ್ರೀಪಾದರ ಕಾಲಾನಂತರ (2009) ಬಂದ ಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಟ್ಟರು.
ಇಲ್ಲಿ ಎರಡು ಬಗೆಯ ಅಧಿಕಾರಗಳಿವೆ. ಒಂದು ಮಠಾಧಿಕಾರ, ಇನ್ನೊಂದು ಶಿಕ್ಷಣ ಸಂಸ್ಥೆಗಳ ಅಧಿಕಾರ. ಮಠಾಧಿಕಾರ ಸಾಂಪ್ರದಾಯಿಕರಿಗೆ ಮಹತ್ವದ್ದಾದರೆ, ಶಿಕ್ಷಣ ಸಂಸ್ಥೆಗಳ ಅಧಿಕಾರ ಲೌಕಿಕರಿಗೆ ಮಹತ್ವದ್ದು. ಸಾಂಪ್ರದಾಯಿಕವಿರಲಿ, ಲೌಕಿಕವಿರಲಿ ಅಧಿಕಾರ ಅಧಿಕಾರವೇ. ಎರಡೂ ಬಗೆಯ ಅಧಿಕಾರವನ್ನು ನಿವ್ಯಾìಮೋಹದಿಂದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಕಂಡದ್ದು ಅಪರೂಪದಲ್ಲಿ ಅಪರೂಪದ್ದು. ಸನ್ಯಾಸಧರ್ಮವೆಂದರೆ ಡಿಟ್ಯಾಚ್ಮೆಂಟ್. ಈ ಪ್ರಪಂಚದಲ್ಲಿದ್ದ ಬಳಿಕ ಇದ್ದೂ ಇಲ್ಲದಂತಿರಬೇಕು, ಎಲ್ಲ ವಿಷಯಗಳಲ್ಲಿ ನಿರ್ಲಿಪ್ತವಾಗಿರಬೇಕು, ಕಮಲದ ಎಲೆಯಲ್ಲಿ ನೀರು ಇರುವಂತೆ ಇರಬೇಕು ಎಂದು ಹೇಳುವುದಿದೆ. ಅಟ್ಯಾಚ್ಮೆಂಟ್ ವಿದ್ ಡಿಟ್ಯಾಚ್ಮೆಂಟ್. ಆದರ್ಶ, ತ್ಯಾಗದ ಬಗ್ಗೆ ಭಾಷಣ ಮಾಡಬಹುದು, ಅದನ್ನು ಅನುಸರಿಸುವುದು ಕ್ಲಿಷ್ಟ ಮಾರ್ಗ. ಈ ಕ್ಲಿಷ್ಟ ಮಾರ್ಗವನ್ನು ಸುಲಭದಲ್ಲಿ ದಾಟಿದವರು ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು. ಇಂತಹ ಸಂದರ್ಭದಲ್ಲಿ ಜೀವಯೋಗ್ಯತೆಯನ್ನು ಕಲ್ಪಿಸಿಕೊಳ್ಳಬಹುದು.
ದೊಡ್ಡ ಹುದ್ದೆಯನ್ನೇ ಬಿಟ್ಟುಕೊಟ್ಟವರಿಗೆ ಸನ್ಯಾಸ ದೀಕ್ಷಾ ಸುವರ್ಣ ಮಹೋತ್ಸವದ ಅಭಿನಂದನೆ ಬೇಕೆ? ಶಿಷ್ಯರ ಒತ್ತಾಯಕ್ಕೆ ಕಟ್ಟುಬಿದ್ದು ಜು. 11ರ ಸಂಜೆ 4.30ಕ್ಕೆ ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಸರಳ ಗುರುವಂದನೆ ಸ್ವೀಕರಿಸುತ್ತಿದ್ದಾರೆ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು. ಇದೂ ಸಹ ಅಟ್ಯಾಚ್ಮೆಂಟ್ ವಿದ್ ಡಿಟ್ಯಾಚ್ಮೆಂಟ್ ರೀತಿ, ಇದ್ದೂ ಇಲ್ಲದಂತಿರದ ರೀತಿ.
“ಶಾಸ್ತ್ರಜ್ಞಾನದಲ್ಲಿ, ಅನುಷ್ಠಾನದಲ್ಲಿ ಗುರುಗಳು ನಮಗೆ ಮಾರ್ಗದರ್ಶಕರು. ಬೆಳಗ್ಗೆ 3 ಗಂಟೆಗೆ ಶ್ರೀಕೃಷ್ಣಮಠಕ್ಕೆ ಪೂಜೆಗೆ ಹೋದರೆ ಒಂದು ಗಂಟೆ ಕಾಲ ಪೂಜೆ ಹೊರತುಪಡಿಸಿ ಮೂರೂವರೆ ಗಂಟೆ ಕಾಲ ಜಪಾನುಷ್ಠಾನದಲ್ಲಿರುವುದು ವಿಶೇಷ. ಅವರು ಒಂದು ಮಾತು ಆಡಿದರೆ ಮತ್ತೆ ಹಿಂತೆಗೆಯುವ ಪ್ರಶ್ನೆ ಇಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಅವರೊಬ್ಬ ಅಂತರಂಗ ಸಾಧಕರು’ ಎನ್ನುತ್ತಾರೆ ಗುರುಗಳಿಗೆ ಗುರುವಂದನೆ ಸಲ್ಲಿಸುತ್ತಿರುವ ಪಟ್ಟಶಿಷ್ಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು.
– ಮಟಪಾಡಿ ಕುಮಾರಸ್ವಾಮಿ