Advertisement
ಹೊಂದಾಣಿಕೆ ಮತ್ತು ಪರಸ್ಪರ ಸಹಕಾರಿ ಮನೋಭಾವನೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಇದರಿಂದ ಅವಿಭಕ್ತ ಕುಟುಂಬಗಳ ಸಂಖ್ಯೆ ಕ್ಷೀಣಿಸುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಹೊಂದಾಣಿಕೆಯ ಅವಶ್ಯಕತೆ ಇದೆ.
Related Articles
Advertisement
ಇತರರೊಡನೆ ಮುಕ್ತ ಮನಸ್ಸಿನಿಂದ ಆಸಕ್ತಿಯಿಂದ ಯಾವುದೇ ಚಂಚಲತೆ ಇಲ್ಲದೆ ಸಂಭಾಷಿಸಿದರೆ ಹೊಂದಾಣಿಕೆ ತಾನಾಗಿಯೇ ಮೂಡುವುದು. ಆಡಳಿತ ಕ್ಷೇತ್ರದಲ್ಲಂತೂ ಹೊಂದಾಣಿಕೆಯ ಕೊರತೆಯಿಂದ ಇಲಾಖೆಯಲ್ಲಿನ ಸಹದ್ಯೋಗಿಗಳು ಪರಸ್ಪರ ವಿಶ್ವಾಸದಿಂದ ವ್ಯವಹರಿಸುವುದಿಲ್ಲ. ಇದರಿಂದ ಕಾರ್ಯಕ್ಷಮತೆ ಕುಂಠಿತವಾಗುತ್ತದೆ. ಇನ್ನು ಇಲಾಖೆಗಳ ನಡುವಿನ ಹೊಂದಾಣಿಕೆಯ ಕೊರತೆ ನಾವು ರಸ್ತೆ ಕಾಮಗಾರಿಯಲ್ಲೇ ಕಾಣಬಹುದು. ಇಂದು ಡಾಂಬರೀಕರಿಸಿದ ರಸ್ತೆಗೆ ಮರುದಿನವೇ ಜಲಮಂಡಲಿಯು ರಸ್ತೆ ಅಗೆಯುವ ಕಾರ್ಯವನ್ನು ಕೈಗೆತ್ತಿಕೊಂಡಿರುತ್ತದೆ.
ಹೊಂದಾಣಿಕೆಯನ್ನು ಕಾಣದ ಜೀವಸಂಕುಲಗಳು ಪ್ರಕೃತಿಯಲ್ಲಿ ಕಾಲಕ್ರಮೇಣ ನಶಿಸುತ್ತದೆ. ಇದು ಪ್ರಕೃತಿ ನಿಯಮ. ಆದ್ದರಿಂದ ಪ್ರಾಣಿಗಳು ನಿತ್ಯ ಹೊಂದಾಣಿಕೆಯಲ್ಲೇ ಬದುಕುತ್ತವೆ. ಇರುವೆಗಳು ಸೈನಿಕರಂತೆ ಪರಸ್ಪರ ಹೊಂದಾಣಿಕೆಯಿಂದ ಒಟ್ಟಿಗೆ ಆಹಾರ ಸಂಗ್ರಹಣೆಗೆ ಹೊರಡುತ್ತದೆ. ಪ್ರಾಣಿಗಳೆಲ್ಲವೂ ಗುಂಪು ಗುಂಪಾಗೆ ಸಹಚರಿಸುತ್ತವೆ. ಗುಂಪಿನಿಂದ ಬೇರ್ಪಟ್ಟ ಜಿಂಕೆ, ಮಂದೆಯನ್ನು ತೊರೆದ ಕುರಿ ಹುಲಿ ಸಿಂಹಗಳ ಬಾಯಿಗೆ ಸುಲಭವಾಗಿ ಆಹಾರವಾಗುದನ್ನು ನಾವು ಕಾಣಬಹುದು.
ಹೀಗೆ ಪ್ರಾಣಿಗಳಿಗಿರುವ ಹೊಂದಾಣಿಕೆ , ಅದರ ಮಹತ್ವದ ಅರಿವು ಪ್ರಾಣಿ ಕುಲದಲ್ಲೇ ಶ್ರೇಷ್ಠನಾದ ಮಾನವನಲ್ಲಿ ಮರೆಯಾಗುತ್ತಿರುವುದು ವಿಪರ್ಯಾಸ ಹಾಗೂ ವಿಷಾದನೀಯ. ಆದ್ದರಿಂದ ಪರಸ್ಪರ ಹೊಂದಾಣಿಕೆಯನ್ನು ಮೈಗೂಡಿಸಿಕೊಂಡು ಸಹಬಾಳ್ವೆಯಿಂದ ಬಾಳಿದಲ್ಲಿ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಿ, ದ್ವೇಷ ಅಸೂಯೆ ಕ್ಷಯಿಸುತ್ತದೆ. ನಮ್ಮ ಬಾಳು ಹಾಗೂ ಬದುಕು ಬಂಗಾರವಾಗುತ್ತದೆ.ಆದರಿಂದ ಹೊಂದಾಣಿಕೆಯಿಂದ ಬಾಳೋಣ …ಬೆಳೆಯೋಣ….
-ಚೇತನ ಭಾರ್ಗವ
ಬೆಂಗಳೂರು