ಹೇ ಹುಡುಗಿ, ನಿನ್ನನ್ನು ಮೊದಲಸಲ ನೋಡಿದಾಗ, ಮುಂದೆ ನೀ ನನಗೆ ಇಷ್ಟು ಹತ್ತಿರ ಆಗುತ್ತೀಯ ಎಂಬ ಅಂದಾಜೂ ನನಗಿರಲಿಲ್ಲ. ಸ್ನೇಹದ ನೌಕೆಯಲ್ಲಿ ಆರಂಭವಾದ ನಮ್ಮಿಬ್ಬರ ಪಯಣ, ಇದೀಗ “ಪ್ರೀತಿ’ ಎಂಬ ದಡಕ್ಕೆ ಬಂದು ನಿಂತಿದೆ. ನೀನೇ ಮುಂದಾಗಿ ಪ್ರೀತಿಯ ಪ್ರಸ್ತಾಪ ಮಾಡಿದೆಯಲ್ಲ, ಅವತ್ತು ನಿನ್ನನ್ನು ಒಂದಿಷ್ಟು ಆಟ ಆಡಿಸಬೇಕು ಅನ್ನಿಸಿತು. ಹಾಗೆಂದೇ- “ನನಗೆ ಅಂಥಾ ಫೀಲಿಂಗ್ಸ್ ಇಲ್ಲ. ಮುಂದೆ ನೋಡೋಣ’ ಎಂದು ಹೇಳಿ ಹೋಗಿಬಿಟ್ಟಿದ್ದೆ.
ನಾ ಹೇಳಿದ್ದು ನಿಜವಲ್ಲ ಎಂದು ನಿನಗೂ ಗೊತ್ತಿತ್ತು ಅನಿಸ್ತದೆ. ಹಾಗಾಗಿಯೇ ನೀನು ನಿರ್ಲಿಪ್ತಳಾಗಿ “ಸರಿ’, ಅಂದಿದ್ದೆ. ನಿಜ ಹೇಳಬೇಕೆಂದರೆ, ನಿನ್ನನ್ನು ಮೊದಲ ಬಾರಿ ಕಂಡಾಗಲೇ, ದೇವತೆ ಏನಾದರೂ ಅಡ್ರೆಸ್ ಮಿಸ್ಸಾಗಿ ಭೂಲೋಕಕ್ಕೆ ಬಂದುಬಿಟ್ಟಳಾ? ಅಂದುಕೊಂಡಿದ್ದೆ. ನಕ್ಷತ್ರಗಳನ್ನು ಮೀರಿಸುವಂಥ ಅ ನಿನ್ನ ಚೆಲುವಿಗೆ ಯಾರೇ ಆದರೂ ಸೋಲಲೇಬೇಕು, ಹಾಗೆ ಕಾಣಿಸಿದ್ದೆ ನೀನು.
ಆದರೆ, ಹೀಗೆಲ್ಲಾ ಹುಡುಗಿಯರ ಮುಂದೆ ಮುಕ್ತವಾಗಿ ಹೇಳುವಂಥ ಧೈರ್ಯ, ಹುಡುಗರಿಗೆ ಇಲ್ಲವಲ್ಲ..! ಈ ಕಾರಣದಿಂದ, ನಾನೂ ಸುಮ್ಮನೇ ಉಳಿದುಬಿಟ್ಟೆ… ಎಲ್ಲಾ ಪ್ರೇಮಿಗಳಂತೆ ನಾನೂ ನೂರಾರು ಕನಸು ಕಂಡಿರುವೆ. ಅವನ್ನೆಲ್ಲಾ ಈ ಪತ್ರದಲ್ಲಿ ಹೇಳುತ್ತಿರುವೆ. ಕೊಂಚ ಹೆಚ್ಚೆನಿಸಿದರೆ ಅಡ್ಜೆಸ್ಟ್ ಮಾಡ್ಕೋ. ನಿನ್ನೊಂದಿಗೆ ಕಾಫಿ ಡೇಯ ಕಪ್ಪುಗಳಿಗೆ ಮುತ್ತಿಕ್ಕುತ್ತ, ಕಣ್ಣಲ್ಲಿ ಕಣೂಡಿಸುವಾಸೆ. ತೀಡುವ ತಂಗಾಳಿಯೊಂದಿಗೆ ಕಿರುಬೆರಳ ಹಿಡಿದು, ಕಡಲ ತೀರದಲ್ಲಿ ನಡೆಯುವಾಸೆ. ಮಾಗಿ ಚಳಿಯಲ್ಲಿ ಜಗವ ಮರೆತು, ಕೊಡಚಾದ್ರಿ ಬೆಟ್ಟವ ಏರಿ ಕೂರುವಾಸೆ.
ಬೈಕಿನಲ್ಲಿ ನಿನ್ನೊಂದಿಗೆ ಊರೆಲ್ಲಾ ಸುತ್ತುವಾಸೆ. ಹೀಗೇ… ಆಸೆಗಳೇನೋ ನೂರಾರು ಇವೆ. ಆದರೆ, ಅದ್ಯಾಕೋ ಕಾಣೆ; ನಿನ್ನ ಎದುರು ನಿಂತರೆ, ಮಾತಾಡುವುದೇ ಮರೆತುಹೋಗುತ್ತದೆ. ಇನ್ನು ನಿನ್ನನ್ನು ಕಾಯಿಸಲ್ಲ.. ಈ ಸಂಕಷ್ಟದ ದಿನಗಳು ಮುಗಿದ ನಂತರ, ಎಂದಿನಂತೆ ನಮ್ಮ ಅಡ್ಡಾದಲ್ಲಿ ಭೇಟಿಯಾ ಗುವ. ಎದೆಗೂಡಲ್ಲಿ ಬಚ್ಚಿಟ್ಟು ಬಟವಾಡೆ ಗೊಂಡ ನೂರಾರು ಮಾತುಗಳೊಂದಿಗೆ, ಆಂತರ್ಯದಲ್ಲಿ ಹುದುಗಿಟ್ಟ ಹತ್ತಾರು ಬಾವಗಳೊಂದಿಗೆ ಅಂದು ಎದುರಾಗುವೆ. ಇಂತಿ ನಿನ್ನವ.
* ಸುಮ್ಮನೆ ರೂಪೇಶ್