ಹುಣಸೂರು: ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವ ಆದಿವಾಸಿ ಭೂಮಿಯನ್ನು ತೆರವುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆದಿವಾಸಿ ಗಿರಿಜನ ಅಭಿವೃದ್ಧಿ ಸಂಘ ಹಾಗೂ ಕಂಪನ ಕೃಷಿ ಕೂಲಿ ಕಾರ್ಮಿಕರ ಯೂನಿಯನ್ ವತಿಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ನಗರಸಭೆ ಆವರಣದಿಂದ ಕಾಲ್ನಡಿಗೆ ಜಾಥಾ ನಡೆಸಿದ ವಿವಿಧ ಹಾಡಿಗಳ ನೂರಾರು ಮಂದಿ ನಮ್ಮ ಭೂಮಿ ನಮಗೆ ಕೊಡಿ, ನಮ್ಮನ್ನು ಬದುಕಲು ಬಿಡಿ, ಭೂಮಿ ಕಬಳಿಸಿರುವ ವಂಚಕರನ್ನು ಜೈಲಿಗಟ್ಟಿ ಎಂದು ಘೋಷಣೆ ಕೂಗಿ ಧರಣಿ ಆರಂಭಿಸಿದರು.
ಕಂಪನ ಕೃಷಿ ಕೂಲಿ ಕಾರ್ಮಿಕರ ಯೂನಿಯನ್‌ನ ಅಧ್ಯಕ್ಷೆ ಮಹದೇವಮ್ಮ ಮಾತನಾಡಿ, ಬಿಳಿಕೆರೆ ಹೋಬಳಿ ತರೀಕಲ್ ಸ.ನಂ.1ರಲ್ಲಿ ಸವರ್ಣೀಯರು ಆದಿವಾಸಿಗಳ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. 15 ಬೋವಿ ಸಮುದಾಯದವರಿಗೆ ತಲಾ 2 ಎಕರೆ ಭೂಮಿ ಮಂಜೂರಾಗಿದ್ದು ಹಲವರು ಅತಿಕ್ರಮಿಸಿದ್ದಾರೆ. ಅದನ್ನು ಬಿಡಿಸಿಕೊಡಬೇಕೆಂದು ಆಗ್ರಹಿಸಿದರು.
ತರೀಕಲ್-ರಂಗಯ್ಯನಕೊಪ್ಪಲು ಕ್ಷೇತ್ರದ ಗ್ರಾಪಂ ಸದಸ್ಯೆ ಜಯಶೀಲಾ, ತರೀಕಲ್ ರಂಗಯ್ಯನಕೊಪ್ಪಲು ಹಾಡಿ ಪಕ್ಕದ ಗಿರಿಜನರ ಜಮೀನು ಒತ್ತುವರಿಯಾಗಿದ್ದು, ಹಲವಾರು ಬಾರಿ ಮನವಿ, ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ವಿವಿಧ ಹಾಡಿ ಮುಖಂಡರಾದ ಕಾಳಯ್ಯ, ಪ್ರೇಮಾ, ಜಯಂತಿ, ಲೀಲಾ, ಕೆಂಪಮ್ಮ, ಎತ್ತಪ್ಪ, ಮಾಕಮ್ಮ, ಶಶಿರಾಜ್ ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಶಾಸಕರ ಭರವಸೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಎಚ್.ಪಿ.ಮಂಜುನಾಥ್, ಮನವಿ ಸ್ವೀಕರಿಸಿ, ಇದೇ ಮೊದಲ ಬಾರಿಗೆ ತರಿಕಲ್ ಗಿರಿಜನರ ಜಮೀನು ಸಮಸ್ಯೆ ತನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ದಸರಾ ನಂತರ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು.