Advertisement

Adityahṛdayam: ಆರೋಗ್ಯವಂತ ಜೀವನಕ್ಕಾಗಿ “ಆದಿತ್ಯ ಹೃದಯ”

03:50 PM Aug 15, 2023 | Team Udayavani |

ಆದಿತ್ಯಸ್ಯ ನಮಸ್ಕಾರಂ ಯೇ ಕರ್ವಂತಿ ದಿನೇ ದಿನೇ ಆಯುಃ ಪ್ರಜ್ಞಾಂ ಬಲಂ ವರ್ಯಂ ತೇಜಸ್ತೇಷಾಂ ಚ ಜಾಯತೇ
ಹಿಂದೂ ಸಂಸ್ಕೃತಿಯಲ್ಲಿ ಪೃಥ್ವೀ, ವಾಯು ಹಾಗೂ ಅಗ್ನಿ ಆದಿ ಪಂಚಭೂತಗಳು ಪ್ರಾಕೃತಿಕ ಸಂಪತ್ತುಗಳಾಗಿವೆ. ಅದರಲ್ಲಿ ಸೂರ್ಯ ಕೂಡ ಒಬ್ಬ. ಸೂರ್ಯ ಜಗತ್ತಿನ ಪ್ರತ್ಯಕ್ಷ ದೇವನಾಗಿದ್ದಾನೆ. ದಿನದ ಆರಂಭ ಮತ್ತು ಅಂತ್ಯ ಸೂರ್ಯನಿಂದಲೇ ಆಗುತ್ತದೆ. ಸೂರ್ಯನಿಲ್ಲದ ಜಗತ್ತನ್ನು ನಾವು ಕಲ್ಪನೆ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಅವನಿಲ್ಲದೇ ಚೇತನ ಜಗತ್ತೂ ಕೂಡ ಒಂದು ಕ್ಷಣ ಜಡವಾಗಿಬಿಡುತ್ತದೆ. ಸೂರ್ಯನ ಕಿರಣಗಳಿಗೆ ಇರುವ ತಾಕತ್ತೇ ಅಂತಾಹದ್ದು. ಜಡವಾಗಿ ಮಲಗಿದ ವಸ್ತು ಕೂಡ ಸೂರ್ಯ ಕಿರಣಗಳ ಪ್ರಭಾವದಿಂದ ಪುಟಿದೇಳುತ್ತದೆ.

Advertisement

ಸೂರ್ಯರಶ್ಮಿಗಳಿಂದ ಸುತ್ತಣ ಪರಿಸರ ಕಂಗೊಳಿಸುತ್ತದೆ. ಹೀಗೆ ಸೂರ್ಯದೇವ ಸಕಲ ಜೀವರಾಶಿಗಳಿಗೂ ಜೀವದಾತನಾಗಿದ್ದಾನೆ. ಹಾಗಾಗಿಯೇ ಋಗ್ವೇದದಲ್ಲಿ ಸೂರ್ಯನನ್ನು “ಸೂರ್ಯ ಆತ್ಮಾ ಜಗತಸ್ತುಷಶ್ಚ” ಅಂದರೆ, ಸೂರ್ಯದೇವ ಈ ಸೃಷ್ಟಿಯ ಸಕಲ ಜೀವರಾಶಿಗಳ ಆತ್ಮನಾಗಿದ್ದಾನೆ ಎನ್ನಲಾಗಿದೆ.

ಅದಿತಿಯ ಮಗನಾದ ಆದಿತ್ಯ, ಜಗದ್ರಕ್ಷಕ. ಅವನ ಕಿರಣಗಳಲ್ಲಿ ವಿಟಮಿನ್‌ ಡಿ ಇರುವುದಿಂದ, ಅದು ಆರೋಗ್ಯ ವರ್ಧಕವೂ ಹೌದು. ಮೊದಲು ಆರೋಗ್ಯವಂತರಾಗಿದ್ದರೆ ತಾನೆ ಏನಾದರೂ ಸಾಧಿಸಲು ಸಾಧ್ಯ. ಕೋಟಿ ಕೋಟಿ ಹಣವಿದ್ದರೂ ಅದನ್ನು ಅನುಭವಿಸಲು ಆರೋಗ್ಯವೇ ಇಲ್ಲ ಎಂದಾದರೆ ಆ ಸಂಪತ್ತು ಇದ್ದೂ ವ್ಯರ್ಥವಲ್ಲವೇ? ಹಾಗಾಗಿ ನಮ್ಮ ಶಾಸ್ತ್ರಗಳಲ್ಲಿ “ಆರೋಗ್ಯಂ ಭಾಸ್ಕರಾದಿಚ್ಚೇತ್‌’ ಎಂದು ಹೇಳಲಾಗಿದೆ. ಹೀಗೆ ಸೂರ್ಯದೇವ ಸಕಲ ಜೀವರಾಶಿಗಳಿಗೂ ಆರೋಗ್ಯಭಾಗ್ಯ ನೀಡಿದ್ದಾನೆ. ಸೂರ್ಯ ಶಕ್ತಿಯ ಮೂಲವಾದ್ದರಿಂದ, ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಸೂರ್ಯನ ಆರಾಧನೆಗೆ ಹೆಚ್ಚು ಮಹತ್ವ ನೀಡಿದ್ದಾರೆ.

ನಮ್ಮ ವೇದ, ಉಪನಿಷತ್ತು, ಪುರಾಣ ಹಾಗೂ ಸ್ತೋತ್ರಗಳಲ್ಲಿ ಸೂರ್ಯನ ಶಕ್ತಿಯ ಕುರಿತು ತುಂಬಾ ಮನೋಜ್ಞವಾಗಿ ವರ್ಣನೆ ಮಾಡಲಾಗಿದೆ. ಅದರಲ್ಲೂ ಆದಿತ್ಯಹೃದಯದಲ್ಲಿ ಸೂರ್ಯನ ವರ್ಣನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ರಾಮಾಯಣ ಯುದ್ದಕಾಂಡದ 105ನೇ ಸರ್ಗವೇ ಈ ಆದಿತ್ಯಹೃದಯ. ಆದಿತ್ಯ ಹೃದಯ ಸ್ತೋತ್ರವು ಸರ್ವಕಾಲಿಕ, ಶಕ್ತಿಶಾಲಿಯಾದ ಸ್ತೋತ್ರವಾಗಿದೆ. ಹಾಗೂ ಸೂರ್ಯನಿಗೆ ಸಮರ್ಪಿತವಾಗಿದೆ. ಜ್ಯೋತಿಷ್ಯದ ಪ್ರಕಾರ ಸೂರ್ಯಬಲ ಇಲ್ಲದ ರಾಶಿಯವರಿಗೆ ಈ ಸ್ತೋತ್ರ ತುಂಬಾ ಪರಿಣಾಮಕಾರಿಯಾದದ್ದು.

ರಾಮಾಯಣದಲ್ಲಿ ಬರುವ ರಾಮ-ರಾವಣರ ಯುದ್ಧ ನಮಗೆಲ್ಲಾ ತಿಳಿದೇ ಇದೇ. ಶೌರ್ಯದಲ್ಲಿ ರಾವಣನೂ ರಾಮನಿಗೆ ಸಮನಾಗಿದ್ದ. ಮೊದಲ ಹಂತದ ಯುದ್ಧದಲ್ಲಿ ಶ್ರೀರಾಮ ರಾವಣನನ್ನು ಸೋಲಿಸುವ ಪ್ರಯತ್ನ ವ್ಯರ್ಥವಾಗುತ್ತದೆ. ತನ್ನ ಶತ್ರು ರಾವಣನನ್ನು ಸೋಲಿಸಲು ಸಾಧ್ಯವಾಗಲಿಲ್ಲವಲ್ಲಾ ಎನ್ನುವ ಕೊರಗು ಶ್ರೀರಾಮನನ್ನು ಕಾಡುತ್ತದೆ. ಇದರಿಂದ ಶ್ರೀರಾಮ ತುಂಬಾ ನಿರಾಸೆಗೊಳ್ಳುತ್ತಾನೆ. ಇದರಿಂದ ನೊಂದ ಶ್ರೀರಾಮ ಘೋರ ತಪಸ್ಸನ್ನು ಮಾಡುತ್ತಾನೆ. ಇದನ್ನು ಕಂಡ ಅಗಸ್ತ್ಯ ಮುನಿಗಳು ರಾಮನನ್ನು ಸಮೀಪಿಸಿ ಅವನನ್ನು ಉತ್ತೇಜಿಸುತ್ತಾರೆ. ಶಕ್ತಿಯ ಮೂಲನಾದ ಸೂರ್ಯದೇವನನ್ನು ಸ್ತುತಿಸಲು ಆಜ್ಞೆ ಮಾಡುತ್ತಾರೆ. ಸ್ವತಃ ಆದಿತ್ಯಹೃದಯವನ್ನು ಶ್ರೀರಾಮನಿಗೆ ಉಪದೇಶ ಮಾಡುತ್ತಾರೆ. ಆದಿತ್ಯ ಹೃದಯದಿಂದ ಸೂರ್ವನನ್ನು ಅನನ್ಯ ಭಕ್ತಿಯಿಂದ ಪೂಜಿಸಿದ ಶ್ರೀರಾಮ, ಅಪಾರ ಶಕ್ತಿಯನ್ನು ಪಡೆದುಕೊಂಡು, ಮತ್ತೆ ಯುದ್ಧಕ್ಕೆ ಸನ್ನದ್ಧನಾಗುತ್ತಾನೆ.

Advertisement

ರಾವಣನನ್ನು ಯುದ್ದದಲ್ಲಿ ಸೋಲಿಸುತ್ತಾನೆ ಎಂದು ರಾಮಾಯಣದಲ್ಲಿ ಹೇಳಲಾಗಿದೆ. ಆದಿತ್ಯ ಹೃದಯಸ್ತೋತ್ರ ಪಠಣದಿಂದ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ. ಶರೀರದಲ್ಲಿ ಶಕ್ತಿ ಸಂಚಯವಾಗುತ್ತದೆ. ಮಾನಸಿಕವಾಗಿ ಗಟ್ಟಿಗರಾಗುತ್ತೇವೆ. ಹಾಗಾಗಿಯೇ ರಾಮನೂ ಕೂಡ ಯುದ್ಧ ಪರ್ವದಲ್ಲಿ ಹೃದಯಸ್ತೋತ್ರವನ್ನು ಪಠಿಸುತ್ತಾನೆ.

ನಮ್ಮ ಪೂರ್ವಜರು ಸ್ತೋತ್ರ, ಮಂತ್ರ ಮತ್ತು ದೇವರಲ್ಲಿ ಮಹಾನ್‌ ಆಸ್ಥೆಯುಳ್ಳವರಾಗಿದ್ದರು. ಶ್ರದ್ಧೆ, ಅನನ್ಯ ಭಕ್ತಿಯಿಂದ ಜಪಿಸಿದ ಮಂತ್ರಗಳು ಅಪಾರ ಶಕ್ತಿಯನ್ನು ನೀಡುತ್ತವೆ ಎನ್ನುವುದಕ್ಕೆ ಹೃದಯಸ್ತೋತ್ರವೇ ಸಾಕ್ಷಿ. ಫ‌ಲಾನುಭವಿ ಶ್ರೀರಾಮನೇ ನಿದರ್ಶನ. ಭಗವದ್ಗೀತೆ ಹಾಗೂ ಹೃದಯಸ್ತೋತ್ರಕ್ಕೂ ಇಲ್ಲಿ ಸಾಮ್ಯತೆಯನ್ನು ನಾವು ಗಮನಿಸಬಹುದು. ಶ್ರೀಕೃಷ್ಣ ಮಹಾಭಾರತ ಪ್ರಾರಂಭವಾಗುವುದಕ್ಕೂ ಮುಂಚೆ ಅರ್ಜುನನಿಗೆ ಗೀತೆಯನ್ನು ಉಪದೇಶ ಮಾಡುತ್ತಾನೆ. ದೇವಾನು ದೇವತೆಗಳೊಂದಿಗೆ ರಾಮ-ರಾವಣರ ಯುದ್ಧವನ್ನು ವೀಕ್ಷಿಸುತ್ತಿದ್ದ ಅಗಸ್ತ್ಯ ಮುನಿಗಳು, ರಾಮಾಯಣದಲ್ಲಿ ಶ್ರೀರಾಮನಿಗೆ ಹೃದಯಸ್ತೋತ್ರವನ್ನು ಉಪದೇಶ ನೀಡುತ್ತಾರೆ. ಆಶ್ಚರ್ಯವೇನೆಂದರೆ ಉಪದೇಶ ಪಡೆದುಕೊಂಡ ಅರ್ಜುನ ಮತ್ತು ಶ್ರೀರಾಮ ಇಬ್ಬರೂ ವಿಜೇತರಾಗುತ್ತಾರೆ.

ಇದರಿಂದ ಗೀತೆ ಮತ್ತು ಹೃದಯಸ್ತೋತ್ರದ ಮಹತ್ವವನ್ನು ನಾವು ಅರಿಯಬಹುದು. ಆದಿತ್ಯಹೃದಯ ಗೀತೆಗಿಂತಲೂ ಗಾತ್ರದಲ್ಲಿ ತುಂಬಾ ಚಿಕ್ಕದಾದರೂ, ಶಕ್ತಿಯಲ್ಲಿ ಹಿರಿದಾಗಿದೆ, ತುಂಬಾ ಪರಿಣಾಮಕಾರಿ ಎನಿಸಿದೆ. ಆದಿತ್ಯಹೃದಯದಲ್ಲಿ 31 ಶ್ಲೋಕಗಳಿದ್ದು ಇದರಲ್ಲಿ 19 ಶ್ಲೋಕಗಳಲ್ಲಿ ಸೂರ್ಯನ ವರ್ಣನೆಯಿದೆ. ಇನ್ನುಳಿದ ಶ್ಲೋಕಗಳಲ್ಲಿ ಸ್ತೋತ್ರದ ಮಹಿಮೆ ಹಾಗೂ ಫ‌ಲಶ್ರುತಿಯನ್ನು ಹೇಳಲಾಗಿದೆ. ಒಟ್ಟು ಸೂರ್ಯನ 108 ನಾಮಗಳನ್ನು ಸ್ತೋತ್ರದಲ್ಲಿ ಉಲ್ಲೇಖಿಸಲಾಗಿದೆ.

ರವಿವಾರ ಪ್ರಶಸ್ತವಾದ ದಿನ
ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಾರದ ಪ್ರತಿಯೊಂದು ದಿನವೂ ಒಂದು ದೇವತೆ ಹಾಗೂ ಒಂದು ಗ್ರಹಕ್ಕೆ ಅರ್ಪಿತವಾಗಿದೆ. ಸೋಮವಾರ ರುದ್ರನಿಗೆ, ಶನಿವಾರ ಶನಿಗೆ, ಮಂಗಳವಾರ ದೇವಿಗೆ ಪ್ರಶಸ್ತ ದಿನವಾದರೆ, ರವಿವಾರ ಸೂರ್ಯದೇವನಿಗೆ ಅರ್ಪಿತವಾಗಿದೆ. ಸೂರ್ಯನಮಸ್ಕಾರ, ಹೃದಯಸ್ತೋತ್ರವನ್ನು ರವಿವಾರ ಸ್ತುತಿಸುವುದರಿಂದ ಆಯುರಾರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ.

ಹೃದಯಸ್ತೋತ್ರದಲ್ಲಿ ಸೂರ್ಯವರ್ಣನೆ
ಭೂಮಿಯಲ್ಲಿ ಬೀಜ ಮೊಳಕೆಯೊಡೆಯದಕ್ಕೂ ಸೂರ್ಯನ ಕಿರಣಗಳು ಬೇಕು. ಸಸ್ಯಗಳ ಆಹಾರ ತಯಾರಿಕೆಗೂ ಸೂರ್ಯನ ಕಿರಣಗಳು ಅಗತ್ಯ. ಸರ್ವಾಧಾರನಾದ ಸೂರ್ಯ, ಬ್ರಹ್ಮ, ವಿಷ್ಣು ಹಾಗೂ ಶಿವ ತ್ರಿಮೂರ್ತಿ ಸ್ವರೂಪಿಯಾಗಿದ್ದು, ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಲಯಕಾರಕನಾಗಿದ್ದಾನೆ. ದೇವಾಸುರ ನಮಸ್ಕೃತಂ ಅಂದರೆ ಸಕಲ ದೇವ, ದಾನವರಿಂದ ಪೂಜಿಸಲ್ಪಡುತ್ತಿದ್ದಾನೆ. ಕಾಲ ಕಾಲಕ್ಕೆ ಭುವಿಯಲ್ಲಿ ಮಳೆ, ಬಿಸಿಲು ಮತ್ತು ಚಳಿಯನ್ನು ಉಂಟು ಮಾಡುವವನೂ, ಋತುಕರ್ತಾ ಪ್ರಭಾಕರಃ. ಅರ್ಥಾತ್‌ ವಸಂತ, ಗ್ರೀಷ್ಮಾದಿ ಆರು ಋತುಗಳ ಹುಟ್ಟಿಗೆ ಕಾರಣನೂ, ದ್ವಾದಶಾತ್ಮನ್ನಮೋಸ್ತುತೇ ಹನ್ನೆರಡು ಮಾಸಗಳಿಗೆ, ನಕ್ಷತ್ರ, ಗ್ರಹ ತಾರೆಗಳಿಗೆ ಅಧಿಪತಿಯೂ, ತೇಜಸಾಮಪಿ ತೇಜಸ್ವೀ. ಅಗ್ನಿಗೂ ತೇಜಸ್ಸನ್ನು ದಯಪಾಲಿಸುವವನಾಗಿದ್ದಾನೆ. ಹೃದಯಸ್ತೋತ್ರದಲ್ಲಿ ಸೂರ್ಯನನ್ನು ಸ್ಕಂಧ ಎನ್ನುವ ಹೆಸರಿನಿಂದಲೂ ಕರೆಯಲಾಗಿದೆ. ಸ್ಕಂದ ಎಂದರೆ ಚಲನಶೀಲ ಎಂದರ್ಥ. ಸಕಲ ಸೃಷ್ಟಿಗೆ ಕಾರಣನಾದ್ದರಿಂದ ಜಗತ್ತಿನ ತಂದೆ ಎಂದೂ ಕೂಡ ಕರೆಯಲಾಗಿದೆ.

ಹೃದಯಸ್ತೋತ್ರ ಪಠಣದಿಂದ ಪ್ರಯೋಜನ
ಅಗಸ್ತ್ಯ ಋಷಿಗಳು ಸ್ತೋತ್ರದ ಮಹಿಮೆಯನ್ನು ವರ್ಣಿಸುತ್ತಾ “ಆದಿತ್ಯ ಹೃದಯಂ ಪುಣ್ಯಂ ಸರ್ವ ಶತ್ರು ವಿನಾಶನಮ…’ ಅಂದರೆ, ದಿನನಿತ್ಯ ಈ ಸ್ತೋತ್ರವನ್ನು ಪಠಿಸುವುದರಿಂದ ಅವರ ಶತ್ರುಗಳು ವಿನಾಶ ಹೊಂದುತ್ತಾರೆ. ಚಿಂತೆ, ಶೋಕಾದಿ ಮಾನಸಿಕ ಹಾಗೂ ದೈಹಿಕ ರೋಗಗಳು ನಾಶವಾಗಿ, ಪಾಪಗಳು ಕಳೆದು, ಅಕ್ಷಯ ಫ‌ಲಪ್ರಾಪ್ತಿಯಾಗುತ್ತದೆ. ಅಲ್ಲದೇ ಮಂಗಳ ಕಾರ್ಯಗಳಲ್ಲಿ ಶುಭ ಉಂಟಾಗುತ್ತದೆ ಎಂದು ಹೇಳಿದ್ದಾರೆ. ವಿಶೇಷವಾಗಿ ಕಣ್ಣಿನ ಸಮಸ್ಯೆ ಇರುವವರು, ತಂದೆಯ ಜತೆ ವೈಮನಸ್ಸು ಇರುವವರು ಈ ಸ್ತೋತ್ರವನ್ನು ನಿತ್ಯವೂ ಪಠಿಸುವುದರಿಂದ ಸಮಸ್ಯೆಗಳು ನಾಶವಾಗುತ್ತವೆ ಎಂದು ಉಲ್ಲೇಖಿಸಲಾಗಿದೆ. ಸ್ತೋತ್ರದಲ್ಲಿ ಮುನಿಗಳು “ಏಷಃ’ಎನ್ನುವ ಪದ ಬಳಕೆ ಮಾಡಿರುವುದರಿಂದ ಉಷಕಾಲದಲ್ಲಿ ಸ್ತೋತ್ರಪಠಣ ತುಂಬಾ ಪರಿಣಾಮಕಾರಿ ಎಂದು ಹೇಳಲಾಗಿದೆ.

ಹೀಗೆ ಆದಿತ್ಯಹೃದಯದ ಅನುಷ್ಠಾನದಿಂದ ನಮ್ಮಲ್ಲಿ ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ, ಬದುಕಿನಲ್ಲಿ ನಂಬಿಕೆ ಕ್ರಿಯಾಶೀಲತೆ ಉಂಟಾಗಿ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಬಣ್ಣಿಸಲಾಗಿದೆ. ಗಾಯತ್ರೀ ಮಂತ್ರವು ವೇದದ ಗರ್ಭ. ಆ ಗಾಯತ್ರಿಮಂತ್ರದ ಪ್ರತಿಪಾದ್ಯ ದೇವತೆ ಸೂರ್ಯದೇವನಾಗಿದ್ದಾನೆ. ಮನೆಯನ್ನು ನಿರ್ಮಿಸುವಾಗಲೂ ಕೂಡ ನಾವು ಪೂರ್ವಾಭಿಮುಖವಾಗಿಯೇ ನಿರ್ಮಿಸುತ್ತೇವೆ.

ಕಾರಣವಿಷ್ಟೇ ಸೂರ್ಯ ಹುಟ್ಟುವುದು ಪೂರ್ವದಲ್ಲಿ. ಬೆಳಗಿನ ಜಾವ ಉದಯಿಸಿದ ಸೂರ್ಯನ ಕಿರಣಗಳು ಮೊದಲು ಮನೆಯ ಒಳಗಡೆಯೇ ಬೀಳಲಿ ಎನ್ನುವ ಕಾರಣದಿಂದ. ಮನೆಯ ಒಳಗಡೆಯಿರುವ ತಾಮಸ ಶಕ್ತಿ ಸೂರ್ಯನ ಕಿರಣಗಳಿಂದ ಸ್ವಚ್ಛಗೊಳ್ಳಲಿ ಎನ್ನುವ ಉದ್ದೇಶದಿಂದ. ಅದೇಷ್ಟೋ ಜನ ಸೌಂದರ್ಯೋಪಾಸಕರು ಸೂರ್ಯನ ಕಿರಣಗಳು ಸೋಕಿದರೆ ಎಲ್ಲಿ ಚರ್ಮ ಕಪ್ಪಾಗುತ್ತದೋ ಎನ್ನುವ ಉದ್ದೇಶದಿಂದ ಛತ್ರಿ ಹಿಡಿದು ಸಾಗುತ್ತಾರೆ. ಪ್ರಾಕೃತಿಕ ಸಂಪತ್ತು ಸೂರ್ಯನ ಕಿರಣಗಳಲ್ಲಿ ಔಷಧೀಯ ಗುಣಗಳಿವೆ ಎನ್ನುವುದು ಎಷ್ಟೋ ಜನಕ್ಕೆ ಗೊತ್ತೇ ಇಲ್ಲ.

ಹಿಂದೆ ನಮ್ಮ ಹಿರಿಯರು ಮಾಡುತ್ತಿದ್ದ ಯಾವ ಆಚರಣೆಗಳೂ ಸುಳ್ಳಲ್ಲ. ಆ ಆಚರಣೆಗಳಲ್ಲಿ ಒಂದು ವೈಜ್ಞಾನಿಕತೆ ಅಡಗಿದೆ ಎನ್ನುವುದನ್ನು ನಾವು ಅರಿಯಬೇಕು. ಪ್ರತಿಯೊಂದು ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ. ಆ ಪರಿಹಾರವನ್ನು ನಮ್ಮ ಹಿರಿಯರು ನಮಗೆ ಈಗಾಗಲೇ ತಿಳಿಸಿದ್ದಾರೆ. ಅದನ್ನು ಅನುಸರಿಸುವ ಮೂಲಕ ಆರೋಗ್ಯಯುತ ಬದುಕನ್ನು ಕಂಡುಕೊಳ್ಳಬೇಕು.
ಪ್ರಸ್ತುತ ಆದಿತ್ಯಹೃದಯದ ಮಹತ್ವನ್ನು ಅರಿತ ನಾವು, ದಿನನಿತ್ಯ ಅದನ್ನು ಪಠಿಸುವ ಮೂಲಕ, ಜೀವನದ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆದುಕೊಳ್ಳಬೇಕು.

– ಗವಿಸಿದ್ದೇಶ್‌ ಕೆ. ಕಲ್ಗುಡಿ,
ಶಿಕ್ಷಕರು, ಗಂಗಾವತಿ 

Advertisement

Udayavani is now on Telegram. Click here to join our channel and stay updated with the latest news.

Next