ಕಟಪಾಡಿ: ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಟಪಾಡಿ ಎಸ್‌ವಿಎಸ್ ಶಾಲೆಯಲ್ಲಿ ತೆರೆಯಲಾಗಿ ರುವ ಪುನರ್‌ವಸತಿ ಕೇಂದ್ರಕ್ಕೆ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಊರಿಗೆ ಕಳುಹಿಸಲು ಒತ್ತಾಯ
ಈ ವೇಳೆ ಹೊರಜಿಲ್ಲೆಯ ಕೂಲಿ ಕಾರ್ಮಿಕರು ತಮ್ಮನ್ನು ಊರಿಗೆ ಕಳುಹಿಸುವಂತೆ ಒತ್ತಾಯಿಸಿದರು. ಅವರನ್ನು ಸಮಾಧಾನಪಡಿಸಿದ ಅಧಿಕಾರಿ ಪ್ರಭು ಅವರು, ಜಿಲ್ಲೆಗಳಿಗೆ ತೆರಳಲು ಅವಕಾಶವಿಲ್ಲ. ಇಲ್ಲೇ ವ್ಯವಸ್ಥೆ ಕಲ್ಪಿಸಲಾಗುವುದು. ತಹಶೀಲ್ದಾರರು ವ್ಯವಸ್ಥೆ ಮಾಡಲಿದ್ದಾರೆ ಎಂದು ಮನವೊಲಿಸಿದರು.
ಜತೆಗೆ ಕೇಂದ್ರದ ಸುವ್ಯವಸ್ಥೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೇಳಿದರು.
ಈ ಸಂದರ್ಭ ಕಾಪು ತಾಲೂಕು ತಹಶೀಲ್ದಾರ್ ಮಹಮ್ಮದ್ ಇಸಾಕ್, ಎಸ್‌ವಿಎಸ್ ಶಾಲಾ ಸಂಚಾಲಕ ಕೆ. ಸತ್ಯೇಂದ್ರ ಪೈ, ಪುನರ್ ವಸತಿ ಕೇಂದ್ರದ ಅಧಿಕಾರಿಗಳಾದ ಕಟಪಾಡಿ ಗ್ರಾ.ಪಂ. ಪಿ.ಡಿ.ಒ. ಕೆ.ಎನ್. ಇನಾಯತ್ ಉಲ್ಲಾ ಬೇಗ್, ಗ್ರಾಮ ಲೆಕ್ಕಿಗ ಡೇನಿಯಲ್ ಡೊಮಿನಿಕ್ ಡಿ’ಸೋಜಾ, ಮೇಲ್ವಿಚಾರಣಾಧಿಕಾರಿ ಡಾ| ಚಂದ್ರಶೇಖರ್ ಸಾಲಿಮಠ, ಪ್ರಮುಖರಾದ ಶ್ರೀಕರ ಅಂಚನ್, ರಾಘವೇಂದ್ರ ರಾವ್, ಕೆ. ಉಮೇಶ್ ರಾವ್, ಮಹೇಶ್ ಅಂಚನ್, ರವಿ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.