ಶ್ರೀನಿ ಅಭಿನಯದ “ಓಲ್ಡ್ ಮಾಂಕ್’ ಚಿತ್ರತಂಡಕ್ಕೆ ಇದೀಗ ಅದಿತಿ ಪ್ರಭುದೇವ ಹೊಸದಾಗಿ ಎಂಟ್ರಿಯಾಗಿದ್ದಾರೆ. ಹೌದು, ಕಳೆದ ಕೆಲ ತಿಂಗಳಿನಿಂದ “ಒಲ್ಡ್ ಮಾಂಕ್’ ಚಿತ್ರಕ್ಕೆ ನಾಯಕಿಯ ಹುಡುಕಾಟದಲ್ಲಿದ್ದ ಚಿತ್ರತಂಡ, ಇದೀಗ ಚಿತ್ರಕ್ಕೆ ಅದಿತಿ ಪ್ರಭುದೇವ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಶ್ರೀನಿ, “ನಮ್ಮ ಸಿನಿಮಾದ ಹೀರೋಯಿನ್ ಕ್ಯಾರೆಕ್ಟರ್‌ಗಾಗಿ ಹುಡುಕಾಟ ನಡೆಸಿದ್ದೆವು.
ಇದೀಗ ಅದಿತಿ ಹೀರೋಯಿನ್ ಆಗಿ ನಮ್ಮ ಟೀಮ್ ಸೇರಿಕೊಳ್ಳುತ್ತಿದ್ದಾರೆ. ಹೀರೋಯಿನ್ ಪಾತ್ರಕ್ಕೆ ತುಂಬ ಲವಲವಿಕೆಯಿಂದಿರುವ ಮತ್ತು ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನಾಡುವವರು ಬೇಕಾಗಿತ್ತು. ನಮ್ಮ ಸಿನಿಮಾದ ಆ ಕ್ಯಾರೆಕ್ಟರ್‌ಗೆ ಅದಿತಿ ಹೊಂದಾಣಿಕೆಯಾಗುತ್ತಿದ್ದರಿಂದ ಅವರನ್ನೇ ಹೀರೋಯಿನ್ ಆಗಿ ಸೆಲೆಕ್ಟ್ ಮಾಡಿ ಕೊಂಡಿದ್ದೇವೆ. ಅದಿತಿ ಕೂಡ ತುಂಬಾ ಖುಷಿಯಿಂದ ಈ ಕ್ಯಾರೆಕ್ಟರ್ ಒಪ್ಪಿಕೊಂಡಿದ್ದಾರೆ.
ಸಿನಿಮಾದಲ್ಲಿ ಓಲ್ಡ್ ಏಜ್ ಲವರ್ ಹೋಮ್ ನಡೆಸುತ್ತಿರುವ ಹೀರೋಯಿನ್, ಅಲ್ಲಿರುವ ವಯಸ್ಸಾದವರಿಗೆ ತಮ್ಮ ಹಳೆಯ ಗರ್ಲ್ಸ್ ಫ್ರೆಂಡ್ಸ್ ಅಥವಾ ಬಾಯ್ ಫ್ರೆಂಡ್ಸ್‌ನ ಹುಡುಕಿ ಅವರನ್ನು ಮೀಟ್ ಮಾಡಿಸುವ ಕೆಲಸ ಮಾಡುತ್ತಿರುತ್ತಾಳೆ. ಯಾವಾಗಲೂ ಎಲ್ಲರಿಗೂ ಅಚ್ಚುಮೆಚ್ಚಾಗಿರುವ, ಲೈವ್ಲಿಯಾಗಿರುವಂಥ ಪಾತ್ರವದು. ಇದನ್ನು ಅದಿತಿ ತುಂಬ ಚೆನ್ನಾಗಿ ನಿರ್ವಹಿಸುತ್ತಾರೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ಶ್ರೀನಿ.
ಫೆಬ್ರವರಿಯಿಂದ ಅದಿತಿ “ಓಲ್ಡ್ ಮಾಂಕ್’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದು, ಬೆಂಗಳೂರು ಮತ್ತು ಮೈಸೂರು ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ಚಿತ್ರದಲ್ಲಿ ಹಿರಿಯ ನಟ ಕಂ ನಿರ್ದೇಶಕ ಎಸ್. ನಾರಾಯಣ್ ನಾಯಕನ ತಂದೆಯ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರಂತೆ.
ಇನ್ನು “ಓಲ್ಡ್ ಮಾಂಕ್’ ಚಿತ್ರದಲ್ಲಿ ಅಭಿನಯಿಸಲು, ಕಳೆದ ಎರಡು ತಿಂಗಳಿನಿಂದ ಕರ್ನಾಟಕ ರಾಜ್ಯದಾದ್ಯಂತ ಹೊಸ ಪ್ರತಿಭೆಗಳಿಗಾಗಿ ಆಡಿಷನ್ ನಡೆಸಿದ್ದ ಚಿತ್ರತಂಡ, ಚಿತ್ರದ ಬಹುತೇಕ ಪಾತ್ರಗಳಿಗೆ ಸರಿ ಹೊಂದುವಂಥ ಅನೇಕ ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಂಡಿದೆಯಂತೆ. ಅಂದಹಾಗೆ, ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಜುಲೈ ವೇಳೆಗೆ “ಓಲ್ಡ್ ಮಾಂಕ್’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.