ಮುಂಬಯಿ: ಈ ವರ್ಷದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದಾಗಿರುವ ʼಆದಿಪುರುಷ್ʼ ಚಿತ್ರದ ಅಧಿಕೃತ ಟ್ರೇಲರ್ ರಿಲೀಸ್ ಆಗಿದೆ.
ಕಳಪೆ ವಿಎಫ್ ಎಕ್ಸ್, ಪೋಸ್ಟರ್ ವಿವಾದದಿಂದ ಒಂದಷ್ಟು ಸದ್ದು ಮಾಡಿದ್ದ ಪ್ರಭಾಸ್ ಅವರ ʼಆದಿಪುರುಷ್ʼ ಚಿತ್ರಕ್ಕೆ ಓಂ ರಾವುತ್ ಅವರ ನಿರ್ದೇಶನವಿದೆ. “ಟಿ-ಸೀರಿಸ್ʼ ಸಂಸ್ಥೆ ನಿರ್ಮಾಣ ಮಾಡಿದ್ದು, ವಾಲ್ಮೀಕಿ ಬರೆದ ರಾಮಾಯಣದ ಅಂಶಗಳನ್ನು ಆಧರಿಸಿ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ.
ರಾಘವ ( ಪ್ರಭಾಸ್) ತನ್ನ ಪ್ರೀತಿಯ ಜಾನಕಿ ( ಕೃತಿ ಸನೊನ್) ಗಾಗಿ ರಾವಣನ (ಸೈಫ್ ಆಲಿ ಖಾನ್) ಅಹಂಕಾರವನ್ನು ತೊಡೆದು ಹಾಕಲು ಯುದ್ದದ ಹಾದಿಯಲ್ಲಿ ಸಾಗುವ ರೀತಿಯನ್ನು ಅದ್ಭುತವಾಗಿ ತೋರಿಸಲಾಗಿದೆ. ಬಿಜಿಎಂ ಹಾಗೂ ಛಾಯಗ್ರಹಣ ಎರಡು ಅಂಶಗಳು ಟ್ರೇಲರ್ ನಲ್ಲಿ ಗಮನ ಸೆಳೆಯುತ್ತದೆ. ʼಜೈ ಶ್ರೀರಾಮ್ʼ ಘೋಷಣೆಯೊಂದಿಗೆ ದುಷ್ಟರ ಸಂಹಾರಕ್ಕೆ ಹೊರಡುವ ರಾಘವನ ಸೈನ್ಯದ ದೃಶ್ಯ ಗಮನ ಸೆಳೆಯುತ್ತದೆ.
ಜಾನಕಿಗಾಗಿ ಎಂತಾಹ ಸಾಹಸವನ್ನಾದರೂ ಮಾಡಬಲ್ಲೆ ಎನ್ನುವ ರಾಘವ ಒಂದೆಡೆಯಾದರೆ, ದುಷ್ಟನ ಅಹಂ ಮುರಿದು ತನ್ನಗಾಗಿ ರಾಘವ ಬರುತ್ತಾನೆ ಎನ್ನುವ ಕಾಯುವಿಕೆಯ ಜಾನಕಿ ಇಲ್ಲಿ ಕಾಣುತ್ತಾರೆ. ಲಕ್ಷ್ಮಣ ( ಸನ್ನಿ ಸಿಂಗ್) ಭಗವಾನ್ ಹನುಮಾನ್ ಪಾತ್ರದಲ್ಲಿ ದೇವದತ್ತ ನಾಗೆ ಕಾಣಿಸಿಕೊಂಡಿದ್ದಾರೆ.
ಟೀಸರ್ ನಲ್ಲಾದ ಎಡವಟ್ಟನ್ನು ಚಿತ್ರತಂಡ ಇಲ್ಲಿ ಕವರ್ ಮಾಡಿಕೊಂಡಿದೆ. ಮುಖ್ಯವಾಗಿ ವಿಎಫ್ ಎಕ್ಸ್ ಗೆ ಹೆಚ್ಚಿನ ಮಹತ್ವ ಕೊಟ್ಟಿದೆ. ರಾವಣನ ಮುಖವನ್ನು ಟೀಸರ್ ನಲ್ಲಿ ತೋರಿಸಿಯೇ ಇಲ್ಲ. ಆ ಮೂಲಕ ಟೀಸರ್ ನಲ್ಲಾದ ಮುಜುಗರವನ್ನು ಟ್ರೇಲರ್ ನಲ್ಲಿ ತಪ್ಪಿಸಿದ್ದಾರೆ.
ಇದೇ ಜೂ.16 ರಂದು 3ಡಿಯಲ್ಲಿ ವಿಶ್ವಾದಂತ್ಯ ಸಿನಿಮಾ ತೆರೆಗೆ ಬರಲಿದೆ.