ಮೈಸೂರು: ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಸುತ್ತೂರು ಶ್ರೀಕ್ಷೇತ್ರದಲ್ಲಿ ಮಹಾ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ನಾಡಿನ ವಿವಿಧ ಮೂಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಬಂದಿದ್ದ ಭಕ್ತಾದಿಗಳು ರಥ ಎಳೆಯಲು ಕೈಜೋಡಿಸಿ, ಹಣ್ಣು-ಧವನ ಎಸೆದು, ಜೈಕಾರ ಕೂಗಿ ಭಕ್ತಿಭಾವ ಮೆರೆದರು. ಜಾತ್ರಾ ಮಹೋತ್ಸವಕ್ಕೆ ಬಂದಿರುವ ಸಹಸ್ರ ಸಹಸ್ರ ಮಂದಿ ರಥೋತ್ಸವವನ್ನು ಕಣ್ತುಂಬಿಕೊಂಡರು.
ಬೆಳಗ್ಗೆ 10.15ಕ್ಕೆ ಕತೃಗದ್ದುಗೆಯಿಂದ ಹೊರಟ ರಥೋತ್ಸವ ಸುತ್ತೂರು ಗ್ರಾಮವನ್ನು ಬಳಸಿಕೊಂಡು ಮಧ್ಯಾಹ್ನ 2ಗಂಟೆ ವೇಳೆಗೆ ಸ್ವಸ್ಥಾನ ತಲುಪಿತು. ನಂದೀಧ್ವಜ, ಪೂಜಾ ಕುಣಿತ, ಪಟ ಕುಣಿತ, ಮಂಗಳವಾದ್ಯ, ಮರಗಾಲು ಕುಣಿತ, ವೀರಭದ್ರ ಕುಣಿತ ಮೊದಲಾದ ಕಲಾ ಪ್ರದರ್ಶನಗಳು ರಥೋತ್ಸವಕ್ಕೆ ಇನ್ನಷ್ಟು ಮೆರಗು ನೀಡಿದವು.
ನೂತನ ರಥ ಸಮರ್ಪಣೆ: ತೇಗ, ಹೊನ್ನೆ, ಮತ್ತಿ, ಶ್ರೀಗಂಧದ ಮರಗಳನ್ನು ಬಳಸಿ ನೂತನವಾಗಿ ತಯಾರಿಸಿರುವ ರಥವನ್ನು ರಾಜ್ಯಪಾಲ ವಜೂಭಾಯ್ ವಾಲಾ ಸಮರ್ಪಿಸಿದರು. ಬೆಂಗಳೂರಿನ ಶಿಲ್ಪಿ ಬಸವರಾಜ್ ಬಡಿಗೇರ ಮತ್ತು ಅವರ ಮಕ್ಕಳು ಹಾಗೂ ಅವರ ಕೆಲಸಗಾರರು ಅತ್ಯಾಧುನಿಕ ರೀತಿಯಲ್ಲಿ ರಥ ತಯಾರಿಸಿದ್ದು, ನೂತನ ರಥಕ್ಕೆ ಕಬ್ಬಿಣದ ಅಚ್ಚು ಮತ್ತು ಗಾಲಿ ಹಾಗೂ ಆಧುನಿಕ ತಂತ್ರಜಾnನದ ಬ್ರೇಕ್ ಮತ್ತು ಟರ್ನಿಂಗ್ ಸೌಲಭ್ಯವನ್ನು ತಮಿಳುನಾಡಿನ ತಿರುಚಿನಾಪಳ್ಳಿಯ ಶೇಖರ್, ರಥದ ಕಬ್ಬಿಣದ ಗೋಪುರವನ್ನು ಬಾದಾಮಿಯ ಪ್ರಭು ಸಿದ್ಧಪಡಿಸಿದ್ದಾರೆ.
ಚಿನ್ನದ ಲೇಪನವಿರುವ ಕಲಶ, ಹಿತ್ತಾಳೆ ಡೂಮ್, ನಾಲ್ಕು ದಿಕ್ಕಿನಲ್ಲಿ ಅಳವಡಿಸಿರುವ ಪಂಚಲೋಹ ಮೂರ್ತಿಗಳನ್ನು ಆಂಧ್ರಪ್ರದೇಶದ ಅದೋನಿಯ ಗುಂಡಾಚಾರಿಯವರು ಸಿದ್ಧಪಡಿಸಿದ್ದಾರೆ. ರಥದ ಗೋಪುರಕ್ಕೆ ಅವಶ್ಯವಿರುವ ಬಣ್ಣದ ಬಟ್ಟೆಯ ಬಾವುಟಗಳು, ತೋರಣಗಳನ್ನು ಚೆನ್ನೈನ ಗಜೇಂದ್ರ ಶಾ ಸಿದ್ಧಪಡಿಸಿದ್ದಾರೆ. ಬೃಹತ್ ರಥವನ್ನು ಎಳೆಯಲು ಅವಶ್ಯವಿರುವ ವಿಶೇಷವಾದ ಹಗ್ಗವನ್ನು ಚೆನ್ನೈನ ಆರ್ಯ ಅವರಿಂದ ಪಡೆಯಲಾಗಿದೆ.