Advertisement
ಅವಿಶ್ವಾಸ ಗೊತ್ತುವಳಿಗೆ ಪ್ರಧಾನಿ ಮೋದಿ ಅವರ ಭಾಷಣ ಮುಕ್ತಾಯವಾಗುತ್ತಿರುವಂತೆಯೇ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅಮಾನತು ಗೊತ್ತುವಳಿಯನ್ನು ಮಂಡಿಸಿದರು. ಕಲಾಪದ ಸಂದರ್ಭದಲ್ಲಿ ಅಡ್ಡಿಪಡಿಸುವುದು ಅಧೀರ್ ಅವರಿಗೆ ಅಭ್ಯಾಸವಾಗಿ ಹೋಗಿದೆ. ಇದು ದುರದೃಷ್ಟಕರ. ಅವರು ಕಾಂಗ್ರೆಸ್‌ನ ಹಿರಿಯ ನಾಯಕರು. ಪದೇ ಪದೆ ಎಚ್ಚರಿಕೆಯ ಹೊರತಾಗಿಯೂ ಅವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು. ವಿಪಕ್ಷಗಳ ಅನುಪಸ್ಥಿತಿಯಲ್ಲಿ ಗೊತ್ತುವಳಿಯನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು. ಅನಂತರ ಸ್ಪೀಕರ್ ಓಂ ಬಿರ್ಲಾ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು.
ಇದೊಂದು ನಂಬಲು ಅಸಾಧ್ಯವಾಗಿರುವ ಮತ್ತು ಪ್ರಜಾಪ್ರಭುತ್ವ ವಿರೋಧಿ ಕ್ರಮ. ಮೋದಿ ಅವರ ವಿರುದ್ಧ ಮಾತನಾಡಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್‌ನ ಮುಖ್ಯ ಸಚೇತಕ ಮಾಣಿಕಂ ಠಾಗೋರ್ ಆರೋಪಿಸಿದ್ದಾರೆ. ಅನುಚಿತ ವರ್ತನೆ ತೋರಿದ್ದಕ್ಕಾಗಿ ಬಿಜೆಪಿ ಸಂಸದ ವಿರೇಂದ್ರ ಸಿಂಗ್ ಅವರಿಗೆ ಕೂಡ ಎಚ್ಚರಿಕೆ ನೀಡಲಾಗಿತ್ತು. ಅವರು ಸ್ಪೀಕರ್ ಕ್ಷಮೆ ಯಾಚಿಸಿದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ. ಪ್ರಧಾನಿ ಹೇಳಿಕೆ, ಮಣಿಪುರದವರಿಗೆ ನ್ಯಾಯ: ಗೌರವ್
ಲೋಕಸಭೆಯಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕು. ಜತೆಗೆ ಈಶಾನ್ಯ ರಾಜ್ಯದ ಜನರಿಗೆ ನ್ಯಾಯ ಒದಗಿಸುವುದು ವಿಪಕ್ಷಗಳ ಆದ್ಯತೆಯಾಗಿತ್ತು ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಹೇಳಿದ್ದಾರೆ. ಸಂಸತ್‌ನ ಆವರಣದಲ್ಲಿ ಮಾತನಾಡಿದ ಅವರು, ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಈ ಎರಡು ಉದ್ದೇಶಗಳನ್ನು ಹೊಂದಿದ್ದವು ಎಂದು ಪ್ರತಿಪಾದಿಸಿದರು. ಹಲವು ದಿನಗಳ ಅನಂತರ ಕಷ್ಟಪಟ್ಟು ಪ್ರಧಾನಿ ಮೋದಿಯವರು ಹಾಲಿ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಅವರು ತಮ್ಮ ಹೊಣೆಗಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಗೊಗೊಯ್ ದೂರಿದ್ದಾರೆ. ಇಷ್ಟು ದಿನಗಳ ವರೆಗೆ ಹಿಂಸಾಚಾರದ ಬಗ್ಗೆ ಮೌನ ವಹಿಸಿದ್ದೇಕೆ, ಅಲ್ಲಿಗೆ ಭೇಟಿ ನೀಡದೆ ಹಠ ಸಾಧಿಸಿದ್ದೇಕೆ, ಶಾಂತಿ ಸ್ಥಾಪನೆಗೆ ಪ್ರಧಾನಿ ಏಕೆ ಮನವಿ ಮಾಡಿಕೊಳ್ಳಲಿಲ್ಲ, ಆ ರಾಜ್ಯದ ಮುಖ್ಯಮಂತ್ರಿಯನ್ನೇಕೆ ಉಚ್ಚಾಟಿಸಿಲ್ಲ ಎಂದು ತರುಣ್ ಸರಣಿ ಪ್ರಶ್ನೆಗಳನ್ನು ಹಾಕಿದ್ದಾರೆ.