ಕಲಬುರಗಿ: 371ಜೆ ಕಲಂನ ಮುಂಬಡ್ತಿ ನಿಯಮಗಳು ಕಾನೂನು ತಿದ್ದುಪಡಿ ಮಾಡಬೇಕು. ಅವೈಜ್ಞಾನಿಕ ಮುಂಬಡ್ತಿಗಳನ್ನು ಸ್ಥಗಿತ ಮಾಡಬೇಕು ಮತ್ತು ಎಚ್‌ಕೆ ಹೊರತು ಪಡಿಸಿ ಉಳಿದ 24 ಜಿಲ್ಲೆಗಳ ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ಶೇ.8ರಷ್ಟು ಮೀಸಲಾತಿ ಒಗಿಸಲು ಆಗ್ರಹಿಸಿ ಚಿಂತಕರ ವೇದಿಕೆಯ ರಾಜ್ಯಾಧ್ಯಕ್ಷ ಸೈಬಣ್ಣ ಜಮಾದಾರ್ ನೇತೃತ್ವದಲ್ಲಿ ಕೈಗೊಂಡಿದ್ದ 130 ಕಿ.ಮೀ ಪಾದಯಾತ್ರೆ ಸಂಪನ್ನಗೊಂಡಿತ್ತು.
ಬಸವಕಲ್ಯಾಣದ ಗೋರ್ಟಾದಿಂದ (ರಜಾಕಾರರ ಹಾವಳಿಯಲ್ಲಿ ಮಾರಣಹೋಣ ನಡೆದ ಸ್ಥಳ) ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ಮಾಡಿ ತಮ್ಮ ಹಕ್ಕೊತ್ತಾಯಗಳನ್ನು ಅಹಿಂದ ಚಿಂತಕರ ವೇದಿಕೆ ಮಂಡಿಸಿತು.
ಈ ವೇಳೆ ಮಾತನಾಡಿದ ಸೈಬಣ್ಣ ಜಮಾದಾರ್, ಕಲ್ಯಾಣ ಕರ್ನಾಟಕ ಎನ್ನಿಸಿಕೊಂಡು ಅಭಿವೃದ್ಧಿಯ ಮುನ್ನೋಟದ ಕನಸು ಕಾಣುವ ಈ ಭಾಗ ಹೈಕ ಎನ್ನುವ ಹೆಸರಿನಲ್ಲಿ ಹಿಂದಿಳಿದಿತ್ತು. ಅದರ ಉದ್ಧಾರಕ್ಕಾಗಿ 371 ಜೆ ಕಲಂ ಜಾರಿಗೆ ತರಲಾಗಿದೆ. ಆದರೆ, ಅದು ಸಮರ್ಪಕವಾಗಿ ಆಗುತ್ತಿಲ್ಲ ಎನ್ನುವ ನೋವು, ದುಮ್ಮಾನ ಈ ಭಾಗದಲ್ಲಿ ಮಡುಗಟ್ಟಿವೆ. ಈ ನಿಮ್ಮ ನಮ್ಮ ವೇದಿಕೆ ಹಲವಾರು ರಚನಾತ್ಮಕ ಹೋರಾಟಗಳನ್ನು ಮಾಡುತ್ತಲೇ ಬಂದಿದೆ. ಸೆ.17ರ ದಿನದ ಅಂಗವಾಗಿ ಸರಕಾರ ಮತ್ತು ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ದೊಡ್ಡ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಕಲಂ ಅಡಿಯಲ್ಲಿ ಈ ಭಾಗದ ನೌಕರರಿಗೆ ಸಿಗಬೇಕಾಗಿರುವ ಬಡ್ತಿಗಳನ್ನು ನಿಯಮದ ಹೆಸರಲ್ಲಿ ತಡೆಯಲಾಗಿದೆ. ಕಲ್ಯಾಣದಲ್ಲಿರುವ ಎಲ್ಲ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಇದರಿಂದ ನಿರುದ್ಯೋಗಿ ಯುವಕರಿಗೆ ಕೆಲಸವೂ ಸಿಗುತ್ತದೆ. ಆದರೆ, ಇದನ್ನು ಸರಕಾರ ಮಾಡುತ್ತಿಲ್ಲ. ಹಿಂದಿನ ಸರಕಾರ ಮತ್ತು ಇಂದಿನ ಬಿಜೆಪಿ ಸರಕಾರ ಕೇವಲ 371 ಜೆ ಕಲಂ ಹೆಸರಲ್ಲಿ ರಾಜಕಾರಣ ಮಾಡಿಕೊಂಡು ಯುವಕರ ನಿರೀಕ್ಷೆ ಮತ್ತು ಮುಂಬಡ್ತಿಯಿಂದ ನೌಕರರಿಗೂ ಸಮಸ್ಯೆ ಉಂಟು ಮಾಡಿ ಅನ್ಯಾಯ ಮಾಡುತ್ತಿದೆ ಎಂದರು.
ಈ ವೇಳೆಯಲ್ಲಿ ಸಂಜು ಹೊಡಲ್ಕರ್, ರಮೇಶ ಹಡಪದ್, ವಿಜಯ ಜಾಧವ್, ಶ್ರೀನಿವಾಸ ಗುತ್ತೇದಾರ್, ವಿಜಯ ಖಾನಪುರೆ, ಯಶವಂತರಾಯ ಸೂರ್ಯವಂಶಿ, ವಿಠ್ಠಲ ಪೂಜಾರಿ ಸೇರಿದಂತೆ ಅನೇಕರು ಇದ್ದರು.