ಲೋಕಾಪುರ: ಚೌಡಾಪುರ ಗ್ರಾಮದ ಎಸ್‌ಸಿ ಕಾಲೋನಿಗೆ ಕಳೆದ ಹಲವು ತಿಂಗಳಿಂದ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ. ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಲಕ್ಷಾನಟ್ಟಿ ಗ್ರಾಮ ಪಂಚಾಯಿತಿಗೆ ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನೀರು ಕೇಳಿದರೆ ಅಧಿಕಾರಿಗಳು ಮತ್ತು ಜನಪ್ರತಿನಿ ಧಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.
ನೀರಿಗಾಗಿ ಪರದಾಟ: ಬೈಕ್-ಸೈಕಲ್‌ಗಳಲ್ಲಿ ಹಾಗೂ ನಡೆದುಕೊಂಡು ಒಂದು ಕಿಲೋ ಮೀಟರ್ ಕ್ರಮಿಸಿ ನೀರು ತರುವ ಪರಿಸ್ಥಿತಿ ಎದುರಾಗಿದೆ. ಸಮರ್ಪಕ ನೀರು ಪೂರೈಕೆಗಾಗಿ ಹಲವು ಬಾರಿ ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಕುಡಿಯುವ ನೀರಿಗೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಪಂ ಅಧಿಕಾರಿಗಳು ಸಮಸ್ಯೆ ಪರಿಹರಿಸುವಲ್ಲಿ ವಿಫಲರಾಗಿದ್ದಾರೆ.
ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ ಕೊಡುವಂತೆ ಪಿಡಿಒ ಗಮನಕ್ಕೆ ತಂದರೂ ಸರಿಯಾಗಿ ಸ್ಪಂದಿಸುತ್ತಿಲ್ಲ, ಬೇಸಿಗೆ ಸಮಯದಲ್ಲಿ ತುಂಬ ತೊಂದರೆ ಅನುಭವಿಸುವಂತಾಗುತ್ತದೆ. ಕೂಡಲೇ ಸಮಸ್ಯೆ ಪರಿಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ನಮಗೆ ನೀರು ಕೊಡಿ, ಇಲ್ಲದಿದ್ದರೆ ಗ್ರಾಪಂ ಕಚೇರಿ ಮುಚ್ಚಿ: ತೆರಿಗೆ ಮಾತ್ರ ಸಮಯಕ್ಕೆ ಸರಿಯಾಗಿ ವಸೂಲಿ ಮಾಡುತ್ತೀರಿ. ಆದರೆ, ಜನರ ಸಮಸ್ಯೆಗಳಿಗೆ ಪರಿಹಾರ ನೀಡದ ಪಂಚಾಯಿತಿ ಕಚೇರಿ ನಮಗೆ ಬೇಕಾಗಿಲ್ಲ. ಕೂಡಲೇ ನೀರಿನ ವ್ಯವಸ್ಥೆ ಕಲ್ಪಿಸಿ ಇಲ್ಲವಾದಲ್ಲಿ ಈ ಪಂಚಾಯತ್‌ಗೆ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿ ನಮಗೆ ನೀರು ಕೊಡಿ, ಇಲ್ಲದಿದ್ದರೆ ಗ್ರಾಪಂ ಮುಚ್ಚಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಹನಮವ್ವ ದೊಡಮನಿ, ಶಾಮಲವ್ವ. ದೊಡಮನಿ, ಗೀತಾ ದೊಡಮನಿ, ನಾಗವ್ವ ದೊಡಮನಿ, ರಂಗವ್ವಾ ದೊಡಮನಿ, ಯಲ್ಲವ್ವಾ ದೊಡಮನಿ, ಶಾಂತವ್ವ ದೊಡಮನಿ, ಗಂಗವ್ವಾ ಮಾದರ, ಹವಳಪ್ಪ ಯರಗಟ್ಟಿ, ರಮೇಶ ಯರಗಟ್ಟಿ, ರಾಮಣ್ಣ ದೊಡಮನಿ, ಕಾಶಪ್ಪ ದೊಡಮನಿ, ಕೃಷ್ಣಾ ದೊಡಮನಿ, ವೆಂಕಣ್ಣ ದೊಡಮನಿ, ಭೀಮಶಿ ನಾಯಕ, ಶೆಟ್ಟೆಪ್ಪ ಇದ್ದರು.
ಸಮಸ್ಯೆ ಕುರಿತು ನಮ್ಮ ಗಮನಕ್ಕೆ ಬಂದಿದ್ದು, ನೀರು ಸರಬರಾಜು ಮಾಡಲು ಒಂದು ಬೋರ್ ಕೊರೆಯಿಸಲಾಗಿದ್ದು, ಅದಕ್ಕೆ ವಿದ್ಯುತ್ ಟಿಸಿ ಅಳವಡಿಸಲು ಮನವಿ ಮಾಡಲಾಗಿದೆ. ಗ್ರಾಮಸ್ಥರು ಇದಕ್ಕೆ ಸಹಕಾರ ನೀಡಬೇಕು. ಬೇಗ ಈ ಸಮಸ್ಯೆ ನಿವಾರಿಸಲಾಗುವದು. –
ಎಸ್.ವೈ. ನರಸನ್ನವರ ಪಿಡಿಒ, ಲಕ್ಷಾನಟ್ಟಿ.