ಅಡೆನ್: ನೂತನವಾಗಿ ರಚನೆಯಾದ ಸಂಪುಟದ ಸಚಿವರುಗಳಿದ್ದ ವಿಮಾನ ಬಂದಿಳಿದ ತಕ್ಷಣ ಬಾಂಬ್ ಸ್ಪೋಟವಾಗಿ 26 ಮಂದಿ ಸಾವನ್ನಪ್ಪಿ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಬುಧವಾರ ಯೆಮೆನ್ ನಲ್ಲಿ ನಡೆದಿದೆ.
ಯೆಮೆನ್ ನ ಅಡೆನ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸಚಿವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ‘ಹುತಿ’ ಬಂಡುಕೋರರು ಈ ಕೃತ್ಯ ಎಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರಂಭದಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್ ನಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದು, ಹೊಗೆ ತುಂಬಿಕೊಂಡಿತ್ತು. ರಕ್ಷಣಾ ಕಾರ್ಯಕ್ಕೆಂದು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದಾಗ ಮತ್ತೊಂದು ಸ್ಪೋಟವಾಗಿದೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ.
ಇದನ್ನೂ ಓದಿ:ಹೊಸ ವರ್ಷಾಚರಣೆಗೆ ನಿರ್ಬಂಧ: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆ.144 ನಿಷೇಧಾಜ್ಞೆ ಜಾರಿ
ಯೆಮನ್‌ನ ಪ್ರಧಾನಿ ಮೊಯೀನ್ ಅಬ್ದುಲ್‌ಮಲಿಕ್ ಸಯೀದ್ ಈ ಕುರಿತು ಮಾತನಾಡಿದ್ದು, ಇದೊಂದು ಹೇಡಿತನ ಕೃತ್ಯವಾಗಿದೆ. ಹಿಂಸಾಚಾರವನ್ನು ಒಪ್ಪುವುದಿಲ್ಲ. ಭಯೋತ್ಪಾದಕ ದಾಳಿ ಯೆಮೆನ್ ಮತ್ತು ಅದರ ಜನರ ವಿರುದ್ಧ ನಡೆಸಿದ ಯುದ್ಧದ ಒಂದು ಭಾಗವಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಸ್ಫೋಟದ ಹಿಂದಿನ ಕೈವಾಡದ ಕುರಿತು ಶೀಘ್ರ ಬಹಿರಂಗವಾಗಲಿದೆ. ಹಾಗೆಯೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದರು.