ಕೋಲ್ಕತ : ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಹಾಗೂ ಟಿಎಂಸಿ ಪರಮೋಚ್ಚ ನಾಯಕಿ ಮಮತಾ ಬ್ಯಾನರ್ಜಿ ಅವರ ರಾಜಕೀಯ ಅಭ್ಯದಯಕ್ಕಾಗಿ ಹೆಚ್ಚುವರಿ ಟಿಎಂಸಿ ಪಡೆಯನ್ನು ರೂಪಿಸುವ ಮಾಸ್ಟರ್ ಪ್ಲಾನ್ ಗಾಗಿ ಕಾರ್ಯನಿರತರಾಗಿರುವ, ಚುನಾವಣಾ ರಣತಂತ್ರ ರೂಪಕ, ಪ್ರಶಾಂತ್ ಕಿಶೋರ್ ಅವರು ರಾಜ್ಯದಲ್ಲಿ ಐದು ಲಕ್ಷ ಯುವಕರನ್ನು ರಾಜಕೀಯ ರಂಗಕ್ಕೆ ತರುವುದಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ.
“ರಾಜಕಾರಣದಲ್ಲಿ ಯುವಕರು’ ಎಂಬ ಅಭಿಯಾನವನ್ನು ಹಮ್ಮಿಕೊಂಡಿರುವ ಪ್ರಶಾಂತ್ ಕಿಶೋರ್, ದಿನ ನಿತ್ಯ ಕನಿಷ್ಠ ಐದು ಸಾವಿರ ಯುವಕರನ್ನು ರಾಜಕೀಯ ಕ್ಷೇತ್ರಕ್ಕೆ ತಂದು ನೋಂದಾಯಿಸುವ ಅವಿರತ ಯತ್ನ ನಡೆಸುತ್ತಿದ್ದಾರೆ.
2021ರಲ್ಲಿ ನಡೆಯುವ ಪಶ್ಚಿಮ ಬಂಗಾಲ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿ ಬರುವ ರಾಜಕೀಯ ತಂತ್ರಗಾರಿಕೆಯನ್ನು ಪ್ರಶಾಂತ್ ಕಿಶೋರ್ ನಡೆಸುತ್ತಿದ್ದಾರೆ. ಈ ಉದ್ದೇಶಕ್ಕಾಗಿಯೇ ಅವರನ್ನು ಮಮತಾ ಬ್ಯಾನರ್ಜಿ ಗೊತ್ತುಪಡಿಸಿಕೊಂಡಿದ್ದಾರೆ.
ಐದು ಲಕ್ಷ ಯುವಕರನ್ನು ರಾಜಕೀಯ ರಂಗಕ್ಕೆ ತರುವುದು ಮತ್ತು ಮುಂದಿನ ಹದಿನೈದು ತಿಂಗಳೊಳಗೆ ಅವರಿಗೆ ಸೂಕ್ತ ತರಬೇತಿ ನೀಡುವುದು ಪ್ರಶಾಂತ್ ಕಿಶೋರ್ ಅವರ ಆರಂಭಿಕ ಗುರಿಯಾಗಿದೆ ಎಂದು ವರದಿಗಳು ತಿಳಿಸಿವೆ.