ಬೆಂಗಳೂರು: ರಾಜ್ಯದ ಖಾಸಗಿ ವೃತ್ತಿಪರ ಕಾಲೇಜುಗಳು ಮಾತ್ರವಲ್ಲದೆ ಡೀಮ್ಡ್ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳು ಕಾನೂನು ಬಾಹಿರವಾಗಿ ಹೆಚ್ಚುವರಿ ಶುಲ್ಕ ಪಡೆಯುವ ಕಾಲೇಜುಗಳ ವಿರುದಟಛಿ ಕ್ರಮ ತೆಗೆದುಕೊಳ್ಳುವ ಅಧಿಕಾರ ಸಮಿತಿಗೆ ಇಲ್ಲ ಎಂದು ವೃತ್ತಿಪರ ಕಾಲೇಜುಗಳ ಶುಲ್ಕ ನಿಯಂತ್ರಣ ಸಮಿತಿಯ ಅಧ್ಯಕ್ಷ ನಿವೃತ್ತ ನ್ಯಾ.ಡಿ.ವಿ.ಶೈಲೇಂದ್ರ ಕುಮಾರ್ ಸ್ಪಷ್ಟಪಡಿಸಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡೀಮ್ಡ್ ಮತ್ತು ಖಾಸಗಿ ವಿವಿಗಳ ಶುಲ್ಕ ನಿಯಂತ್ರಣಕ್ಕೆ ಸರ್ಕಾರದಿಂದ ಪ್ರತ್ಯೇಕ ಸಮಿತಿ ರಚನೆ ಮಾಡಲಾಗುತ್ತದೆ. ಆದರೂ, ಆ ಎರಡು ವಿವಿಗಳ ಶುಲ್ಕ ನಿಯಂತ್ರಣ ಅಧಿಕಾರ ನಮ್ಮ ಸಮಿತಿಗೂ ಇದೆ. ಪ್ರಸಕ್ತ ಸಾಲಿನ ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ನೀಡದ 15 ಡೀಮ್ಡ್ ಹಾಗೂ ಖಾಸಗಿ ವಿವಿಗಳಿಗೆ ನೋಟಿಸ್ ಕೂಡ ನೀಡಿದ್ದೇವೆ ಎಂದರು.
ಪ್ರಸಕ್ತ ಸಾಲಿನ ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಖಾಸಗಿ ಕಾಲೇಜಿನ ಆಡಳಿತ ಮಂಡಳಿಯವರು ಶೇ.200ರಿಂದ ಶೇ.300ರಷ್ಟು ಶುಲ್ಕ ಹೆಚ್ಚಳಕ್ಕೆ ಮನವಿ ಮಾಡಿದ್ದರು. ಕಾನೂನಿನಲ್ಲಿ ಅವಕಾಶ ಇರುವಂತೆ ಶೇ.8ರಷ್ಟು ಶುಲ್ಕ ಹೆಚ್ಚಳಕ್ಕೆ ಅನುವು ಮಾಡಿಕೊಟ್ಟಿದ್ದೇವೆ. ಲೆಕ್ಕಪತ್ರ ಸೇರಿ ಕಾಲೇಜಿನ ನಿಖರವಾದ ಮಾಹಿತಿ ನೀಡಿದ ಆಡಳಿತ ಮಂಡಳಿಗಳಿಗೆ ಹಿಂದಿನ ವರ್ಷದ ಶುಲ್ಕವನ್ನೇ ಮುಂದುವರಿಸುವಂತೆಯೂ ನಿರ್ದೇಶನ ನೀಡಿದ್ದೇವೆ ಎಂದು ಹೇಳಿದರು.
ರಾಜ್ಯದ 200 ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 163 ಕಾಲೇಜು ಎಲ್ಲ ದಾಖಲೆ ನೀಡಿದ್ದು, 37 ಕಾಲೇಜು ದಾಖಲೆ ನೀಡಿಲ್ಲ. 66 ವೈದ್ಯಕೀಯ, ದಂತವೈದ್ಯಕೀಯ ಕಾಲೇಜುಗಳಲ್ಲಿ 59 ಕಾಲೇಜು ದಾಖಲೆ ಒದಗಿಸಿದ್ದು, 7 ಕಾಲೇಜುಗಳು ದಾಖಲೆ ನೀಡಿಲ್ಲ. ಹಾಗೆಯೇ ಫಾರ್ಮಸಿ, ಆಯುರ್ವೇದ, ಯುನಾನಿ, ನ್ಯಾಚುರೋಪಥಿ, ಯೋಗ ವಿಜ್ಞಾನ ಮತ್ತು ಹೋಮಿಯೋಪಥಿ ಕಾಲೇಜುಗಳಲ್ಲಿ 38 ಕಾಲೇಜುಗಳು ಲೆಕ್ಕಪತ್ರದ ಮಾಹಿತಿ ನೀಡಿಲ್ಲ ಎಂದರು.
ಬೇಡಿಕೆ ಕುಸಿತ: ಎಂಜಿನಿಯರಿಂಗ್ ಸೇರಿ ಎಂಬಿಎ ಮತ್ತು ಎಂಸಿಎ ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆ ಇರುವ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳಕ್ಕೆ ಒತ್ತಡ ಇರಲಿಲ್ಲ. ಸಮಿತಿಯಿಂದ ನಿಗದಿ ಮಾಡಿದಷ್ಟು ಶುಲ್ಕ ಅನುಷ್ಠಾನಕ್ಕೆ ಹಲವು ಕಾಲೇಜು ಆಡಳಿತ ಮಂಡಳಿಗಳು ಒಪ್ಪಿವೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರಿನ ಕೆಲವು ಕಾಲೇಜು ಹೊರತುಪಡಿಸಿ ರಾಜ್ಯದ ಬಹುತೇಕ ವೃತ್ತಿಪರ ಕಾಲೇಜಿನಲ್ಲಿ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಹೇಳಿದರು.
ನೋಟಿಸ್ ನೀಡಲಾಗಿದೆ: ಪ್ರವೇಶ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ನಿವೃತ್ತ ನ್ಯಾ.ಬಿ.ಮನೋಹರ್ ಮಾತನಾಡಿ, ಹೆಚ್ಚುವರಿ ಶುಲ್ಕ ವಸೂಲಿ ಸಂಬಂಧ ಎರಡು ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಅದರಂತೆ ಆ ಎರಡು ಕಾಲೇಜಿಗೆ ನೋಟಿಸ್ ನೀಡಲಾಗಿದೆ. ಉತ್ತರ ಬಂದ ನಂತರ ಪರಿಶೀಲಿಸಿ, ಮುಂದಿನ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದರು.