ಮಂಗಳೂರು: ಯಕ್ಷಗಾನ,ನಾಟಕ ಸೇರಿದಂತೆ ಕಲಾ ಸೇವೆ ಮಾಡಲು ಕಲಾವಿದರಿಗೆ ಮಂಗಳೂರು ಪುರಭವನ ಅಗ್ಗದಲ್ಲಿ ದೊರೆಯುವಂತೆ ಈಗಾಗಲೇಮಾಡಲಾಗಿದ್ದು, ಹೆಚ್ಚುವರಿ ಸೌಲಭ್ಯ ಗಳನ್ನು ಪುರಭವನದಲ್ಲಿ ಒದಗಿಸುವ ನಿಟ್ಟಿನಲ್ಲೂ ಮಂಗಳೂರು ಪಾಲಿಕೆ ವಿಶೇಷ ಒತ್ತು ನೀಡಲಿದೆ ಎಂದು ಮಂಗಳೂರು ಪಾಲಿಕೆ ಮೇಯರ್ ಕವಿತಾ ಸನಿಲ್ ಹೇಳಿದರು.
ಮಂಗಳೂರು ಪುರಭವನದಲ್ಲಿ ಸೋಮವಾರ ನಡೆದ ತುಳು ನಾಟಕ ಕಲಾವಿದರ ಒಕ್ಕೂಟದ 14ನೇ ವಾರ್ಷಿಕ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತುಳು ರಂಗಭೂಮಿಯಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿರುವ ನಾಟಕ ತಂಡಗಳು ಇಂದು ಕರಾವಳಿಯಲ್ಲಿ ವಿಭಿನ್ನ ನೆಲೆಯ ರಂಗ ಸಾಧನೆ ಪ್ರದರ್ಶಿಸಿರುವುದು ಶ್ಲಾಘನೀಯ ಎಂದರು.
ಹಿರಿಯ ನಾಟಕಕಾರ, ನಟ, ನಿರ್ದೇಶಕ, ಸಂಘಟಕ ವಿ.ಜಿ. ಪಾಲ್ ಅವರಿಗೆ 2016-17ನೇ ಸಾಲಿನ ತೌಳವ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಾಟಕಕಾರ, ಸಾಹಿತಿ ಶಿವಾನಂದ ಕರ್ಕೇರ, ನಟ ಕೆ.ಕೆ. ಗಟ್ಟಿ, ನಿರ್ದೇಶಕ ಜಗದೀಶ ಶೆಟ್ಟಿ ಕೆಂಚನಕೆರೆ, ಪ್ರಸಾಧನದ ಗಿರಿಯಪ್ಪ ಇಡ್ಯ, ಸಂಗೀತ ನಿರ್ದೇಶಕ ನಾರಾಯಣ ಬಿ.ಕೆ., ಸ್ತ್ರೀ ಪಾತ್ರಧಾರಿ ಕೆ. ಗಂಗಾಧರ ಶೆಟ್ಟಿ, ರಂಗನಟ ಮೋಹನ ಕೆ. ಬೋಳಾರ್, ರಂಗ ನಟಿ ಕುಮುದಾ ಬಾಕೂìರು ಅವರನ್ನು ಸಮ್ಮಾನಿಸಲಾಯಿತು. ಮಂಗಳೂರು ಪುರಭವನದ ಬಾಡಿಗೆ ದರ ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ಮೇಯರ್ ಕವಿತಾ ಸನಿಲ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಕೀರ್ತಿಶೇಷ ಕಲಾವಿದರಾದ ದಿ| ಮಚ್ಚೇಂದ್ರನಾಥ್ ಪಾಂಡೇಶ್ವರ, ದಿ| ರಾಘವ ಕೆ. ಉಳ್ಳಾಲ, ದಿ| ಎಂ.ಎಸ್. ಇಬ್ರಾಹಿಂ ಹಾಗೂ ದಿ| ಶಾಂತಾರಾಮ ಕಲ್ಲಡ್ಕ ಅವರ ನೆಂಪು ಕಾರ್ಯಕ್ರಮ ನಡೆಯಿತು.
ಭಂಡಾರಿ ಮಹಾಮಂಡಳದ ಅಧ್ಯಕ್ಷ ಸುರೇಶ್ ಭಂಡಾರಿ ಕಡಂದಲೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ. ಸಹಾಯಕ ನಿರ್ದೇಶಕರಾದ ಚಂದ್ರಹಾಸ ರೈ ಬಿ, ಭಂಡಾರಿ ಬಿಲ್ಡರ್ ಮಾಲಕರಾದ ಲಕ್ಷ್ಮೀಶ ಭಂಡಾರಿ, ಬಿಜೆಪಿ ಮಂಗಳೂರು ದಕ್ಷಿಣ ಅಧ್ಯಕ್ಷ ಡಿ.ವೇದವ್ಯಾಸ ಕಾಮತ್, ಬಿರುವೆರ್ ಕುಡ್ಲ ಸ್ಥಾಪಕ ಅಧ್ಯಕ್ಷ ಉದಯ್ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.
ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕುಮಾರ್ ಮಲ್ಲೂರು ಸ್ವಾಗತಿಸಿದರು. ಗೋಕುಲ್ ಕದ್ರಿ, ಪ್ರದೀಪ್ ಆಳ್ವ ಕದ್ರಿ, ಮೋಹನ್ ಕೊಪ್ಪಳ ಕದ್ರಿ ಉಪಸ್ಥಿತರಿದ್ದರು.