Advertisement

ಜಾಗೃತಿಗೆ ಹೋರ್ಡಿಂಗ್‌ ಅಳವಡಿಕೆ

05:27 AM Jul 11, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಗರ ಹಾಗೂ ರಾಜ್ಯದ ಪ್ರಮುಖ ಪ್ರದೇಶಗಳಲ್ಲಿ ಜಾಹೀರಾತು ಅಳವಡಿಸಲು ಅನುಮತಿ ಕೋರಿ ಹೈಕೋರ್ಟ್‌ಗೆ ಸರ್ಕಾರ  ಮಧ್ಯಂತರ ಅರ್ಜಿ ಸಲ್ಲಿಸಿದೆ. ರಾಜ್ಯಾದ್ಯಂತ ಜಾಹೀರಾತು ಹೋರ್ಡಿಂಗ್ಸ್‌ ಅಳವಡಿಸಲು ನಿರ್ಬಂಧ ಹೇರಿ ಹೈಕೋರ್ಟ್‌ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ನಗರಾಭಿವೃದಿ ಇಲಾಖೆಯ ಅಧೀನ ಕಾರ್ಯದರ್ಶಿ (ಬಿಬಿಎಂಪಿ)  ಎನ್‌.ಕೆ. ಲಕ್ಷ್ಮೀಸಾಗರ್‌ ಈ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

Advertisement

ಶುಕ್ರವಾರ ಸರ್ಕಾರದ ಈ ಮಧ್ಯಂತರ ಅರ್ಜಿ ವಿಚಾರಣೆ ಬಂದಾಗ, ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ್‌ ಕೆ. ನಾವದಗಿ ಮಧ್ಯಂತರ ಅರ್ಜಿಯ ಔಚಿತ್ಯವನ್ನು ನ್ಯಾಯಪೀಠಕ್ಕೆ  ವಿವರಿಸಿದರು. ವಾದ ಕೇಳಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಜಾಹೀರಾತು ಹೋರ್ಡಿಂಗ್ಸ್‌ ಅಲ್ಲಿ ಯಾವ ಬಗೆಯ ಪರಿಕರಗಳನ್ನು ಬಳಸಲಾಗುತ್ತದೆ? ಯಾವ್ಯಾವ ಜಾಗದಲ್ಲಿ ಎಷ್ಟು ಅಳತೆಯ ಹೋರ್ಡಿಂಗ್ಸ್‌ ಅಳವಡಿಸಲಾಗುತ್ತದೆ? ಖರ್ಚು- ವೆಚ್ಚ, ಖಾಸಗಿ ಸಹಭಾಗಿತ್ವ ಸೇರಿದಂತೆ ಮಾಹಿತಿ ನೀಡಲು ವಕೀಲರಿಗೆ ಸೂಚಿಸಿ, ಮಂಗಳವಾರಕ್ಕೆ ವಿಚಾರಣೆ ಮುಂದೂಡಿತು.

ಅರ್ಜಿಯಲ್ಲಿ ಏನಿದೆ?: 2020ರ ಜುಲೈ 4ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಕೋವಿಡ್‌ 19 ಸೋಂಕು ಹರಡುವುದನ್ನು ತಡೆಗಟ್ಟಲು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ  ಸಂಬಂಧ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ. ಅದಕ್ಕಾಗಿ ಬೆಂಗಳೂರು ಸೇರಿದ ರಾಜ್ಯದ ಇತರ ಪ್ರಮುಖ ಭಾಗಗಳಲ್ಲಿ ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳ ವತಿಯಿಂದ ಜಾಹೀರಾರು ಫ‌ಲಕ ಅಳವಡಿಸಬೇಕು ಎಂದು ಆ ಸಭೆಯಲ್ಲಿ  ತೀರ್ಮಾನಿಸಲಾಗಿದೆ.

ಆದರೆ, ಹೋರ್ಡಿಂಗ್ಸ್‌ ಅಳವಡಿಸಲು ಹೈಕೋರ್ಟ್‌ ನಿರ್ಬಂಧ ಹೇರಿದೆ. ಹೈಕೋರ್ಟ್‌ ನಿರ್ದೇಶನ ಮೇರೆಗೆ ಫ‌ಲಕ ಅಳವಡಿಸದಿರಲು ಬಿಬಿಎಂಪಿ ಸೇರಿ ಇತರೆ ಸ್ಥಳೀಯ ಸಂಸ್ಥೆಗಳು ಸಹ ನಿರ್ಣಯ ಕೈಗೊಂಡಿವೆ. ಆದರೆ,  ಸದ್ಯದ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಕೋರೊನಾ ಜಾಗೃತಿ ಮೂಡಿಸಲು ಜಾಹೀರಾತು ಬಹುಬೇಗ ಜನರನ್ನು ತಲುಪುವ ಮಾಧ್ಯಮವಾಗಿದೆ. ಹೀಗಾಗಿ ಅನುಮತಿ ನೀಡಬೇಕು ಎಂದು ಮಧ್ಯಂತರ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next