Advertisement
ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಗುಂಡ್ಯ-ಶಿರಾಡಿಯಿಂದ ಬಿ.ಸಿ.ರೋಡ್ ವರೆಗಿನ ಸುಮಾರು 63 ಕಿಮೀ. ದೂರದ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವ ಮೂಲಕ ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸುವ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಂಡಿದೆ. ಸುಮಾರು 1,260 ಕೋಟಿ ರೂ. ವೆಚ್ಚದ ಈ ಹೆದ್ದಾರಿ ವಿಸ್ತರಣಾ ಯೋಜನೆ ಗುತ್ತಿಗೆಯನ್ನು ಪ್ರತಿಷ್ಠಿತ ಎಲ್ ಅಂಡ್ ಟಿ ಕಂಪನಿಗೆ ವಹಿಸಲಾಗಿದೆ. ಎರಡೂವರೆ ವರ್ಷಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಿರುವ ಈ ಅಡ್ಡಹೊಳೆ-ಬಿ.ಸಿ.ರೋಡ್ ಚತುಷ್ಪಥ ಹೆದ್ದಾರಿ ನಿರ್ಮಾಣ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೇನು ಕಾಮಗಾರಿಗೆ ಚಾಲನೆ ದೊರೆಯಬೇಕಿದೆ.
Related Articles
Advertisement
ಅರಣ್ಯ ಇಲಾಖೆ ಪ್ರಕಾರ, ಈ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಗುಂಡ್ಯದಿಂದ ಬಿ.ಸಿ.ರೋಡ್‌ವರೆಗೆ ಈಗಿರುವ ಹೆದ್ದಾರಿಯ ಇಕ್ಕೆಲಗಳಲ್ಲಿ ಹೆಚ್ಚಿನ ಸಂಖ್ಯೆ ಮರಗಳನ್ನು ಕಡಿದುರುಳಿಸಬೇಕಾಗುತ್ತದೆ. ಹೆದ್ದಾರಿ ವಿಸ್ತರಣೆ ಜತೆಗೆ ಸರ್ವೀಸ್ ರಸ್ತೆ ಹಾಗೂ ಹೆಚ್ಚಿನ ಸಂಖ್ಯೆಯ ಸೇತುವೆಗಳನ್ನು ಕೂಡ ನಿರ್ಮಿಸಬೇಕಾಗಿರುವುದರಿಂದ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಅರಣ್ಯ ಸಂಪತ್ತು ನಾಶವಾಗುವುದರಲ್ಲಿ ಅನುಮಾನವಿಲ್ಲ. ಈ ಹಿನ್ನೆಲೆಯಲ್ಲಿ ರಸ್ತೆ ನಿರ್ಮಾಣಕ್ಕೆ ಕಡಿಯಬೇಕಾಗಿರುವ ಮರಗಳ ಗಣತಿ ಕಾರ್ಯಕ್ಕೆ ಕಳೆದ ವಾರ ಚಾಲನೆ ನೀಡಲಾಗಿದೆ. ಈ ಗಣತಿ ಕಾರ್ಯ ಮುಗಿದ ಬಳಿಕ, ವರದಿ ಸಿದ್ಧಪಡಿಸಿ ಮರಗಳನ್ನು ಕಡಿಯುವ ಕೆಲಸ ಪ್ರಾರಂಭವಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ಆದರೆ, ಈ ಚತುಷ್ಪಥ ರಸ್ತೆ ನಿರ್ಮಾಣ ಯೋಜನೆಗೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗತೊಡಗಿದೆ. “ಅಡ್ಡಹೊಳೆ-ಬಿ.ಸಿ. ರೋಡ್‌ವರೆಗಿನ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿದರೆ, ನೇತ್ರಾವತಿ ನದಿ ಭವಿಷ್ಯದಲ್ಲಿ ಕಣ್ಮರೆಯಾಗುವ ಆತಂಕವಿದೆ. ಏಕೆಂದರೆ, ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿಯುವ ಕೆಂಪುಹೊಳೆ, ಕಾಡುಮನೆ ಹೊಳೆ, ಎತ್ತಿನ ಹೊಳೆ, ಅಡ್ಡಹೊಳೆ ಸೇರಿದಂತೆ ನೇತ್ರಾವತಿಯನ್ನು ಸಂಪರ್ಕಿಸುವ ಏಳು ಉಪ ನದಿಗಳಿಗೆ ಈ ಹೆದ್ದಾರಿ ನಿರ್ಮಾಣದಿಂದ ಅಪಾಯವಿದೆ. ಹೀಗಾಗಿ, ಸಾವಿರಾರು ಸಂಖ್ಯೆ ಮರಗಳನ್ನು ನಾಶಪಡಿಸುವ ಜತೆಗೆ ಪಶ್ಚಿಮ ಘಟ್ಟದ ತಪ್ಪಲಿನ ಜೀವ-ಜಲಕ್ಕೆ ಧಕ್ಕೆಯುಂಟು ಮಾಡುವ ಈ ಯೋಜನೆ ಕೈಬಿಡಬೇಕು’ ಎನ್ನುವುದು “ಸಹ್ಯಾದ್ರಿ ಸಂಚಯ’ ಪರಿಸರ ಸಂಘಟನೆ ದಿನೇಶ್ ಹೊಳ್ಳ ಅವರ ಒತ್ತಾಯ.”ಎತ್ತಿನ ಹೊಳೆ ಯೋಜನೆ ಹೆಸರಿನಲ್ಲಿ ಈಗಾಗಲೇ ಸುಮಾರು 50 ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿದು ಇಡೀ ಪಶ್ಚಿಮ ಘಟ್ಟದ ಜೀವ ಸಂಪತ್ತು ಅನ್ನು ಅಸ್ತವ್ಯಸ್ತಗೊಳಿಸಲಾಗುತ್ತಿದೆ.
ಎತ್ತಿನಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿನ ಬಹುತೇಕ ಜಲ ಮೂಲಗಳು ನಾಶವಾಗುತ್ತಿವೆ. ಇನ್ನು, ಅಡ್ಡಹೊಳೆ-ಬಿ.ಸಿ.ರೋಡ್ ರಸ್ತೆ ನಿರ್ಮಾಣ ಕಾರ್ಯ ಶುರುವಾದರೆ, ನೇತ್ರಾವತಿ ನದಿಗೆ ಪ್ರಮುಖ ಉಪನದಿಯಾಗಿರುವ ಕೆಂಪುಹೊಳೆ ಮತ್ತು ಅಡ್ಡಹೊಳೆ ನದಿಯ ಅಸ್ತಿತ್ವ ಕಳೆದುಕೊಳ್ಳುತ್ತದೆ. ಅಷ್ಟೇಅಲ್ಲ, ಈ ಯೋಜನೆಯಿಂದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮಳೆ ನೀರು ಇಂಗಿಸುವ ನೈಸರ್ಗಿಕ ಹುಲ್ಲಿನ ಹೊದಿಕೆ ಕೂಡ ನಾಶವಾಗುತ್ತದೆ. ಇದರ ಪರಿಣಾಮ, ನೇತ್ರಾವತಿ ನದಿ ಬತ್ತಿ ಹೋಗಿ, ಬೇಸಿಗೆಯಲ್ಲಿ ದಕ್ಷಿಣ ಕನ್ನಡದ ಜನತೆ ನೀರಿಗೆ ಪರದಾಡುವ ಕಾಲ ದೂರವಿಲ್ಲ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ರಸ್ತೆ ವಿಸ್ತರಣೆಯಾಗಬೇಕಾದರೆ ಕಾಡು ಕಡಿಯಲೇಬೇಕು. ಜನರಿಗೆ ಅನುಕೂಲ ಮಾಡಲು ಹೊರಟಾಗ, ಪರಿಸರಕ್ಕೆ ತೊಂದರೆಯಾಗುವುದು ಸಹಜ. ಈ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಂಡಿದ್ದು, ಆ ಪ್ರಕಾರ ರಾಜ್ಯ ಸರ್ಕಾರ ಸೂಕ್ತ ಅನುಕೂಲ ಕಲ್ಪಿಸುತ್ತಿದೆ. ಅಡ್ಡಹೊಳೆ-ಬಿ.ಸಿ.ರೋಡ್ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸುವುದರಿಂದ ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗುತ್ತದೆ. ಇದು ಪಶ್ಚಿಮಘಟ್ಟ ಮಾತ್ರವಲ್ಲ, ಎಲ್ಲೆಲ್ಲಿ ರಾಷ್ಟ್ರೀಯ ಹೆದ್ದಾರಿಯು ಅರಣ್ಯದೊಳಗೆ ಹಾದುಹೋಗಿದೆಯೋ ಅಲ್ಲೆಲ್ಲ ಈ ಸಮಸ್ಯೆ ಎದುರಾಗಿದೆ. ಹೀಗಿರುವಾಗ, ರಸ್ತೆನ್ನು ಅಭಿವೃದ್ಧಿಪಡಿಸಬೇಕಾದರೆ, ಆ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಕಡಿಮೆ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿಯಾಗುವಂತೆ ಕ್ರಮ ತೆಗೆದುಕೊಳ್ಳಲಾಗುವುದು.– ರಮಾನಾಥ ರೈ, ಅರಣ್ಯ ಮತ್ತು ಪರಿಸರ ಸಚಿವ – ಸುರೇಶ್ ಪುದುವೆಟ್ಟು