ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಹಾಲುಮತ ಮಹಾಸಭಾ ಕಾರ್ಯಕರ್ತರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಾಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಹಾಸಭಾ ಅಧ್ಯಕ್ಷ ರುದ್ರಣ್ಣ ಗುಳಗುಳಿ, “”ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬುದು ಕುರುಬ ಸಮುದಾಯದ ಏಕೈಕ ಬೇಡಿಕೆಯಾಗಿದೆ. ಕಳೆದ ನವೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಬೃಹತ್ ಕುರುಬರ ಸಮಾವೇಶದಲ್ಲಿ ಈ ವಿಚಾರವಾಗಿ ಒಮ್ಮತದ ನಿರ್ಣಯವನ್ನೂ ಅಂಗೀಕರಿಸಲಾಗಿದೆ,” ಎಂದು ಹೇಳಿದರು.
“ಕುರುಬ ಸಮುದಾಯವು ನಾಯಕ ಸೇರಿದಂತೆ ಪರಿಶಿಷ್ಟ ಪಂಗಡದಲ್ಲಿ ಬರುವ ಇತರೆ ಸಮುದಾಯಗಳಷ್ಟೇ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಅಲ್ಲದೆ, ನಮ್ಮ ಸಮುದಾಯವನ್ನು ಪ.ಪಂಗಡಕ್ಕೆ ಸೇರಿಸಲು ಬೇಕಾದ ಎಲ್ಲಾ ಸಕಾರಣಗಳೂ ಇವೆ. ಹಾಗಾಗಿ ರಾಜ್ಯ ಸರ್ಕಾರ ಈ ಸಂಬಂಧ ಕೂಡಲೇ ದಿಟ್ಟ ನಿರ್ಧಾರ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.
“ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕು ಎಂಬ ಶಿಫಾರಸು ಇಂದು ನಿನ್ನೆಯದಲ್ಲ, ದಶಕಗಳಿಂದಲೂ ಇದೆ. ಆದರೆ, ಸರ್ಕಾರ ಇದುವರೆಗೂ ಬೇಡಿಕೆ ಈಡೇರಿಸಿಲ್ಲ. ಇದೇ ಧೋರಣೆ ಮುಂದುವರಿದರೆ ನಮಗೆ ಸಿಗಬೇಕಾದ ಮೀಸಲಾತಿ ಸೌಲಭ್ಯಗಳಿಗಾಗಿ ಬೀದಿಗಿಳಿದು ತೀವ್ರ ಸ್ವರೂಪದ ಹೋರಾಟಗಳನ್ನು ಮಾಡಬೇಕಾಗುತ್ತದೆ,” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯದರ್ಶಿ ಮುತ್ತುರಾಜ್ ಸೇರಿದಂತೆ ಪದಾಧಿಕಾರಿಗಳು, ಸಮುದಾಯದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.