ಅಥಣಿ: ಕೃಷ್ಣಾ ನದಿ ದಡದ ಗ್ರಾಮಗಳು ಹಿಪ್ಪರಗಿ ಆಣೆಕಟ್ಟಿನ ಹಿನ್ನೀರಿನಿಂದ ಬಾಧಿತವಾಗಿ ಮುಳುಗಡೆಯಾಗುತ್ತವೆ ಅದರಲ್ಲಿ ಸತ್ತಿಗ್ರಾಮ ಕೃಷ್ಣಾ ನದಿಗೆ ಮಹಾಪೂರ ಬಂದಾಗ ನಡುಗಡ್ಡೆಯಾಗಿ ಪರಿವರ್ತನೆಯಾಗುವುದರಿಂದ ಸತ್ತಿ ಗ್ರಾಮವನ್ನು ಸಂಪೂರ್ಣವಾಗಿ ಮುಳುಗಡೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ನೀರಾವರಿ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಲವಾರು ಗ್ರಾಮಗಳು ಇನ್ನು ಭೌಗೋಳಿಕವಾಗಿ ಮುಳುಗಡೆ ಆಗುತ್ತಿದ್ದರೂ ಕೆಲ ಗ್ರಾಮಗಳು ಗಮನಕ್ಕೆ ಬಾರದೇ ಉಳಿದಿದ್ದು, ಅಂತಹ ಗ್ರಾಮಗಳನ್ನು ಪಟ್ಟಿಯಲ್ಲಿ ಸೇರಿಸಲು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಧಿಕಾರಿಗಳು ಈ ಕುರಿತು ಪ್ರಸ್ತಾವನೆ ಸಿದ್ಧಪಡಿಸಲಿದ್ದಾರೆ. ಹಿಪ್ಪರಗಿ ಹಿನ್ನೀರಿನಿಂದ ಬಾಧಿತವಾಗುವ ಹಳ್ಳಿಗಳನ್ನು ಪಟ್ಟಿಯಲ್ಲಿ ಸೇರಿಸುವಂತೆ ಸೂಚಿಸಿದರು.
ಹಿಪ್ಪರಗಿ ಅಣೆಕಟ್ಟಿನ ಹಿನ್ನೀರಿನಿಂದ ಬಾಧಿತವಾಗುವ ಗ್ರಾಮಗಳ ಗ್ರಾಮಸ್ಥರು ಸೂಕ್ತ ಪುನರ್ವಸತಿ ಕೇಂದ್ರ ನಿರ್ಮಿಸಿ, ಸ್ಥಳಾಂತರಿಸಲು ಜನರಲ್ಲಿ ಜಾಗೃತಿ ಮೂಡಿಸುವಂತೆ ಅಧಿ ಕಾರಿಗಳಿಗೆ ಸೂಚನೆ ನೀಡಿದವರು. ನೀರಾವರಿ ಸೌಲಭ್ಯದಿಂದ ವಂಚಿತಗೊಂಡ ಗ್ರಾಮಗಳಿಗೆ ತುಂತುರು ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಕೆರೆ ಹಾಗೂ ಅಗ್ರಾಣಿ ನದಿಗಳ ಬಾಂದಾರಗಳಿಗೆ ನೀರು ತುಂಬಿಸುವ ಯೋಜನೆಗೆ ಪ್ರಸ್ತಾವನೆ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಥಣಿ ಮತಕ್ಷೇತ್ರದಲ್ಲಿ ರೈತರ ಮೂಲ ಸಮಸ್ಯೆಯಾಗಿರುವ ಸವುಳು- ಜವುಳು ಸಮಸ್ಯೆಯಿಂದ ಬಳಲುತ್ತಿರುವ ಗ್ರಾಮಗಳಿಗೆ ಕೊಳವೆ ಮುಖಾಂತರ ಆಧುನಿಕ ತಂತ್ರಜ್ಞಾನ ಅಳವಡಿಸಿ ಈ ಸಮಸ್ಯೆಯನ್ನು ಪರಿಹರಿಸುವ ಪ್ರಸ್ತಾವನೆ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಇಲಾಖೆಗೆ ಸೂಚಿಸಲಾಗಿದೆ. ಈಗಾಗಲೆ ಕರಿ ಮಸೂತಿ, ಹಲ್ಯಾಳ ಹಾಗೂ ಸಾವಳಗಿ ತುಂಗಳ ಏತ ನೀರಾವರಿ ಯೋಜನೆಗಳಿಗೆ ಜೂ.29 ರಿಂದ ಕಾಲುವೆಗಳಿಗೆ ಕೃಷ್ಣಾ ನದಿ ನೀರನ್ನು ಹರಿ ಬಿಡಲಾಗಿದೆ. ಎಲ್ಲ ರೈತರು ನೀರಾವರಿ ಸೌಲಭ್ಯದ ಸದುಪಯೋಗ ಮಾಡಿಕೊಳ್ಳಲು ತಿಳಿಸಿದರು. ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಅನೇಕ ಗ್ರಾಮಗಳಲ್ಲಿರುವ ನೀರಿನ ಕೊರತೆ ಹಾಗೂ ಅನುಕೂಲಗಳ ಕುರಿತು ಚರ್ಚಿಸಲಾಯಿತು. ಈ ವೇಳೆ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತ ಜಿ.ಎಸ್. ಬುರ್ಲಿ, ಸಹಾಯಕ ಕಾರ್ಯಪಾಲಕ ಅಭಿಯಂತ ಅರುಣ ಯಲಗುದ್ರಿ, ಪ್ರವೀಣ ಹುಂಚಿಕಟ್ಟಿ, ಪಿ.ಕೆ. ಶಂಕರ, ಬಿ.ಎಸ್.ಯಾದವಾಡ, ಸತೀಶ ಮಿರ್ಜಿ, ಎಂ.ಬಿ.ಇಮ್ಮಡಿ, ಅಶೋಕ ಅಸ್ಕಿ, ಸತ್ಯಪ್ಪಾ ಬಾಗೇನ್ನವರ, ನಿಂಗಾಪ್ಪ ನಂದೇಶ್ವರ ಸೇರಿದಂತೆ ಅನೇಕರು ಇದ್ದರು.