Advertisement

ಟೋಯಿಂಗ್‌ ಸಿಬ್ಬಂದಿಗೆ ಎಡಿಸಿಪಿ ತರಾಟೆ

01:05 AM Jul 02, 2019 | Lakshmi GovindaRaj |

ಬೆಂಗಳೂರು: ನಿಷೇಧಿತ ಪ್ರದೇಶಗಳಲ್ಲಿ ನಿಂತಿದ್ದ ವಾಹನಗಳನ್ನು ಟೋಯಿಂಗ್‌ ಮಾಡುವ ಏಜೆನ್ಸಿ ಸಿಬ್ಬಂದಿ ವಿರುದ್ಧ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌ ಸೋಮವಾರ ಅಶೋಕನಗರ ಮೈದಾನದಲ್ಲಿ ಟೋಯಿಂಗ್‌ ಮಾಡುವ ಏಜೆನ್ಸಿಗಳ ಪ್ರತಿನಿಧಿಗಳ ಪರೇಡ್‌ ನಡೆಸಿ ನಿಯಮ ಉಲ್ಲಂಘನೆ ಮಾಡದಂತೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಟೋಯಿಂಗ್‌ ವಾಹನ ಸಿಬ್ಬಂದಿಯೇ ನಿಯಮಗಳನ್ನು ಉಲ್ಲಂಘಿಸುವುದು, ಟೋಯಿಂಗ್‌ ಮಾಡಿದ ವಾಹನಗಳಿಗೆ ಹಾನಿ ಆದರೂ ವಾಹನ ಮಾಲೀಕರ ವಿರುದ್ಧವೇ ಅಸಡ್ಡೆಯಿಂದ ವರ್ತಿಸುತ್ತಿರುವ ಬಗ್ಗೆ ನೂರಾರು ಮಂದಿ ವಾಹನ ಸವಾರರರಿಂದ ನೇರವಾಗಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ದೂರುಗಳು ಬರುತ್ತಿದ್ದವು.

ಈ ಹಿನ್ನೆಲೆಯಲ್ಲಿ ಸೋಮವಾರ ಸಂಚಾರ ವಿಭಾಗಗಳ ಎಲ್ಲ ಪೊಲೀಸ್‌ ಠಾಣೆಯ ಸಿಬ್ಬಂದಿ ಹಾಗೂ ಟೋಯಿಂಗ್‌ ಏಜೆನ್ಸಿ ಸಿಬ್ಬಂದಿ ಪರೇಡ್‌ ನಡೆಸಿದ್ದು, ಕೆಲ ಟೋಯಿಂಗ್‌ ವಾಹನಗಳನ್ನು ಖುದ್ದು ಪರಿಶೀಲಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೋಯಿಂಗ್‌ ಮಾಡುವ ಯುವಕರ ಪೂರ್ವಾಪರ ಪರಿಶೀಲಿಸಿ, ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಅವರ ವಿವರ ನೊಂದಾಯಿಸಬೇಕು. ಸಮವಸ್ತ್ರ ಧರಿಸಬೇಕು. ಪ್ರಮುಖವಾಗಿ ಸಾರ್ವಜನಿಕರ ಜತೆ ಸಿಬ್ಬಂದಿ ಸರಿಯಾಗಿ ವರ್ತಿಸಬೇಕು. ಈ ಎಲ್ಲ ನಿಯಮಗಳನ್ನು ಪಾಲಿಸದಿದ್ದರೆ ಕೂಡಲೇ ಟೆಂಡರ್‌ ರದ್ದು ಪಡಿಸಲಾಗುವುದು.

ಯಾವುದೇ ವಾಹನವನ್ನು ಟೋಯಿಂಗ್‌ ಮಾಡುವ ಮೊದಲು ಆ ವಾಹನದ ಸಂಖ್ಯೆಯನ್ನು ಮೂರು ಬಾರಿ ಧ್ವನಿವರ್ಧಕದ ಮೂಲಕ ವಾಹನದ ಮಾಲೀಕರಿಗೆ ಎಚ್ಚರಿಕೆ ಕೊಡಬೇಕು. ಮೈಕ್‌ನಲ್ಲಿ ಕೂಗಿದಾಗ ವಾಹನ ಮಾಲೀಕರು ಓಡಿ ಬಂದರೆ ಅಥವಾ ವಾಹನಗಳನ್ನು ಟೋಯಿಂಗ್‌ ಮಾಡುವಂತಿಲ್ಲ.

Advertisement

ನಿಲುಗಡೆ ನಿಷೇದ ಪ್ರದೇಶದಲ್ಲಿ ವಾಹನ ನಿಲ್ಲಿಸಿದ್ದಕ್ಕೆ ದಂಡ ಹಾಕಬಹುದು ಎಂದು ಹರಿಶೇಖರನ್‌ ಎಚ್ಚರಿಕೆ ನೀಡಿದರು. ಇದರೊಂದಿಗೆ ಸಂಚಾರ ವಿಭಾಗದ ಇನ್‌ಸ್ಪೆಕ್ಟರ್‌, ಪಿಎಸ್‌ಐ, ಎಎಸ್‌ಐಗಳು ಮಾತ್ರ ದಂಡದ ಮೊತ್ತ ಸಂಗ್ರಹಿಸಬೇಕು. ಒಂದು ವೇಳೆ ಕಾನೂನು ನಿಗದಿಗಿಂತ ಹೆಚ್ಚಿನ ಮೊತ್ತವನ್ನು ಸಂಗ್ರಹಿಸುವುದು, ರಸೀದಿ ನೀಡದಿರುವ ಬಗ್ಗೆ ದೂರುಗಳು ಬಂದಲ್ಲಿ ಅಂತಹ ಅಧಿಕಾರಿಯ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌, ನಗರಾದ್ಯಂತ 44 ಸಂಚಾರ ಪೊಲೀಸ್‌ ಠಾಣೆಗಳಿವೆ. ಟೋಯಿಂಗ್‌ ಮಾಡಲು 86 ವಾಹನಗಳಿವೆ. ಈ ವೇಳೆ ಟೋಯಿಂಗ್‌ ಸಿಬ್ಬಂದಿ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಪರೇಡ್‌ ನಡೆಸಲಾಗಿದ್ದು, ಕಾನೂನು ನಿಯಮ ಪಾಲನೆ ಮಾಡಬೇಕೆಂದು ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.

ಪ್ರಮುಖ ಅಂಶಗಳು: ಟೋಯಿಂಗ್‌ ವಾಹನದ ಉಸ್ತುವಾರಿ ಅಧಿಕಾರಿಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳೇನು? ಟೋಯಿಂಗ್‌ ವಾಹನಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ(ಚಾಲಕ, ವಾಹನ ಎತ್ತುವ ಸಹಾಯಕರು) ಪಾತ್ರ ಮತ್ತು ಹೊಣೆಗಾರಿಕೆ.

ಟೋಯಿಂಗ್‌ ಕಾರ್ಯಾಚರಣೆ ವೇಳೆ(ಉಸ್ತುವಾರಿ ಅಧಿಕಾರಿ ಮತ್ತು ಟೋಯಿಂಗ್‌ ಸಿಬ್ಬಂದಿ) ಶಿಷ್ಟಾಚಾರದ ವರ್ತನೆಗಳು ಬಗ್ಗೆ ಸೂಕ್ತ ನಿರ್ದೇಶನ ಹಾಗೂ ವಿಶೇಷ ಕರ್ತವ್ಯಗಳ ಸಮಯದಲ್ಲಿ ಟೋಯಿಂಗ್‌ ವಾಹನ ಬಳಕೆ,ಟೋಯಿಂಗ್‌ ವಾಹನದಲ್ಲಿ ಇಡಬೇಕಾದ ಸಂಚಾರ ಉಪಕರಣಗಳು ಬಗ್ಗೆ ಮಾಹಿತಿ ಪರೇಡ್‌ನ‌ಲ್ಲಿ ಮಾಹಿತಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next