ಚಿಕ್ಕಬಳ್ಳಾಪುರ: ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸದ ಜೊತೆಗೆ ಅಲ್ಲಿನ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪರಂಪರೆ ಯನ್ನು ಪ್ರತಿಬಿಂಬಿಸುವಲ್ಲಿ ಗ್ಯಾಸೆಟಿಯರ್‌ಗಳು ಪೂರಕ ದಾಖಲೆಗಳಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಗ್ಯಾಸೆಟಿಯರ್ ಇಲಾಖೆ ವತಿಯಿಂದ ಚಿಕ್ಕಬಳ್ಳಾಪುರ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜಿಲ್ಲಾ ಗ್ಯಾಸೆಟಿಯರ್ ರಚಿಸುವ ಸಂಬಂಧ 3 ಜಿಲ್ಲೆಗಳ ಲೇಖಕರಿಗೆ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ರಚನೆ ಮಾಡಲಾಗುತ್ತಿರುವ “ಜಿಲ್ಲಾ ಗ್ಯಾಸೆಟಿಯರ್’ ಜಿಲ್ಲೆಯ ಸಮಗ್ರ ಮಾಹಿತಿ ಯನ್ನೊಳಗೊಂಡ ವಿಸ್ತೃತ ಸಂಪುಟವಾಗಬೇಕು ಎಂದರು.
ವಿಶೇಷ ಕಾಳಜಿ ಅಗತ್ಯ: ಚಿಕ್ಕಬಳ್ಳಾಪುರ ಜಿಲ್ಲೆಯು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ಸಂಪದ್ಭರಿತವಾದ ಜಿಲ್ಲೆಯಾಗಿದೆ. ಇಲ್ಲಿ ನೀರಿಗೆ ಬರ ಇದ್ದರೂ, ಇತಿಹಾಸ ಪ್ರತಿಬಿಂಬಿಸುವ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ವಾಸ್ತುಶಿಲ್ಪಕ್ಕೆ ಕೊರತೆ ಇಲ್ಲ. ಇತರೆ ಜಿಲ್ಲೆಗಳಿಗಿಂತ ಜಿಲ್ಲೆಯ ಗ್ಯಾಸೆಟಿಯರ್ ಮಾಹಿತಿಯಾಧಾರಿತ ಅತ್ಯಂತ ಸಮಗ್ರವಾದ ಸಂಪುಟವಾಗಲಿದ್ದು, ಲೇಖಕರು ವಿಶೇಷ ಕಾಳಜಿಯೊಂದಿಗೆ ಮತ್ತಷ್ಟು ವಿಸ್ಕೃತವಾಗಿ ರಚನೆ ಮಾಡಬೇಕೆಂದರು.
ಸಂಪುಟ ರಚಿಸಿ: ಜಿಲ್ಲಾ ಗ್ಯಾಸೆಟಿಯರ್ ಕೇವಲ ಪುಸ್ತಕವಾಗಿರದೇ ಕೆಎಎಸ್, ಐಎಎಸ್, ಐಪಿಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ಮಾಹಿತಿ ಒದಗಿಸಲಿದೆ. ಆಡಳಿತಾತ್ಮಕವಾಗಿಯೂ ಹೆಚ್ಚು ಸಹಕಾರಿಯಾಗಲಿದ್ದು, ಮುಂದಿನ ಪೀಳಿಗೆಗೆ ದಾಖಲೆಯಾಗಿ ನಿಲ್ಲಲಿದೆ. ಹಾಗಾಗಿ ಜಿಲ್ಲಾ ಗ್ಯಾಸೆಟಿಯರ್ ರಚನೆ ಮಾಡುವ ಲೇಖಕರು, ಸಂಪಾದಕರು ಶ್ರದ್ಧೆ ಹಾಗೂ ಪಾರದರ್ಶಕತೆಯಿಂದ ಸಂಪುಟಗಳನ್ನು ರಚನೆ ಮಾಡಬೇಕೆಂದರು.
ಕನ್ನಡ ಭಾಷೆಗೆ ಅನುವಾದ: ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯ ಹಿರಿಯ ಸಂಪಾದಕ ಬೆಟ್ಟೇಗೌಡ ಮಾತನಾಡಿ, 1958 ರಲ್ಲಿ ಗ್ಯಾಸೆಟಿಯರ್ ಇಲಾಖೆ ಆರಂಭಗೊಂಡಿತು. ಈವರೆಗೆ 20 ಜಿಲ್ಲೆಗಳ ಗ್ಯಾಸೆಟಿಯರ್‌ಗಳನ್ನು ಆಂಗ್ಲ ಭಾಷೆಯಲ್ಲಿ ರಚಿಸಲಾಗಿದ್ದು, 1990 ರಿಂದ ಅವುಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲಾಗಿದೆ ಎಂದರು.
ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದಗೌಡ ಬೆಲ್ಕದ್ರಿ, ಚಿಂತಾಮಣಿ ಸರ್ಕಾರಿ ಮಹಿಳಾ ಪದವಿ ಮತ್ತು ಸ್ನಾತಕೋತ್ತರ ಕಾಲೇಜಿನ ಇತಿಹಾಸ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಎನ್.ರಘು, ಶಿಕ್ಷಣ ತಜ್ಞರಾದ ಡಾ.ಕೋಡಿರಂಗಪ್ಪ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಗ್ಯಾಸೆಟಿಯರ್ ರಚನಾಕಾರರು, ಲೇಖಕರು ಉಪಸ್ಥಿತರಿದ್ದರು.