ಇಸ್ಲಾಮಾಬಾದ್ : ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ನಿಂದ ಪಾಕಿಸ್ಥಾನಕ್ಕೆ 3.4 ಬಿಲಿಯ ಡಾಲರ್ ಸಾಲ ದೊರಕಿದೆ ಎಂದು ಪಾಕಿಸ್ಥಾನ, ಸಾಲ ಮಂಜೂರಾಗುವುದಕ್ಕೆ ಮೊದಲೇ ನೀಡಿರುವ ಹೇಳಿಕೆಯಿಂದ ಎಡಿಬಿ ದೂರ ಸರಿದಿದ್ದು, ಇಸ್ಲಾಮಾಬಾದ್ ಗೆ ಇದರಿಂದ ಭಾರೀ ಮುಖಭಂಗವಾಗಿದೆ.
ಪಾಕಿಸ್ಥಾನಕ್ಕೆ ಪ್ರಸ್ತಾವಿತ 3.4 ಬಿಲಿಯ ಡಾಲರ್ ಸಾಲ ನೀಡುವ ಪ್ರಸ್ತಾವವು ಈಗಿನ್ನೂ ಚರ್ಚೆಯ ಹಂತದಲ್ಲೇ ಇದೆ, ಮಂಜೂರಾಗಿಲ್ಲ ಎಂದು ಎಡಿಬಿ ಹೇಳಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಹಣಕಾಸು ಸಲಹೆಗಾರರಾಗಿರುವ ಅಬ್ದುಲ್ ಹಫೀಜ್ ಶೇಖ್ ಮತ್ತು ಕೇಂದ್ರ ಯೋಜನೆ, ಅಭಿವೃದ್ಧಿ ಮತ್ತು ಸುಧಾರಣೆಗಳ ಸಚಿವ ಖುಸ್ರೋ ಬಕ್ತಿಯಾರ್ ಅವರು, “ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಪಾಕಿಸ್ಥಾನಕ್ಕೆ 3.4 ಬಿಲಿಯ ಡಾಲರ್‌ಗಳ ಬಜೆಟ್ ಬೆಂಬಲ ಮೊತ್ತವನ್ನು ನೀಡಲಿದ್ದು ಅದರಲ್ಲಿ 2.1 ಬಿಲಿಯ ಡಾಲರ್ ಮೊತ್ತವನ್ನು ಇನ್ನೊಂದು ವರ್ಷದೊಳಗೆ ಬಿಡುಗಡೆ ಮಾಡಲಿದೆ ಎಂದು ಹೇಳಿದ್ದರು.
ಇದನ್ನು ಅನುಸರಿಸಿ ಎಡಿಬಿ, ಸಾರ್ವಜನಿಕ ರಜಾ ದಿನದಂದು ಯಾವುದೇ ಹೇಳಿಕೆ ನೀಡದಿರುವ ತನ್ನ ವಾಡಿಕೆಯನ್ನು ಮುರಿದು, 3.4 ಬಿಲಿಯ ಡಾಲರ್‌ಗಳ ಪಾಕ್ ಸಾಲ ಪ್ರಸ್ತಾವ ಈಗಿನ್ನೂ ಚರ್ಚೆಯಲ್ಲಿದೆಯೇ ಹೊರತು ಮಂಜೂರಾಗಿಲ್ಲ ಎಂದು ಹೇಳಿರುವುದು ಗಮನಾರ್ಹವಾಗಿದೆ.
ಪಾಕಿಸ್ಥಾನದ ಆರ್ಥಿಕತೆ ವಸ್ತುತಃ ದೀವಾಳಿ ಅಂಚನ್ನು ತಲುಪಿದ್ದು ಅದರ ವಿತ್ತೀಯ ಕೊರತೆ ಭಾರೀ ಮಟ್ಟಕ್ಕೆ ಏರಿದೆ. ಇದರಿಂದ ಪಾರಾಗಲು ಮತ್ತು ಜಾಗತಿಕ ವಾಣಿಜ್ಯ ವಲಯದಲ್ಲಿ ತನ್ನ ಮುಖ ಉಳಿಸಿಕೊಳ್ಳಲು ಎಡಿಬಿ ಸಾಲ ಮಂಜೂರಾತಿಯನ್ನು ತಾನೇ ಮೊದಲಾಗಿ ಪ್ರಕಟಿಸಿದೆ ಎಂದು ವರದಿಗಳು ಹೇಳಿವೆ.