ಮುಂಬೈ: ಬಿಹಾರದಾದ್ಯಂತ ವಿವಿಧ ಸೆಕ್ಟರ್ ಗಳಲ್ಲಿ ಸುಮಾರು 8,700 ಕೋಟಿ ರೂಪಾಯಿ ಬಂಡವಾಳ ಹೂಡಲು ಅದಾನಿ ಗ್ರೂಫ್ ಯೋಜನೆ ಸಿದ್ಧಪಡಿಸಿದ್ದು, ಈ ಮೂಲಕ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಂದಾಜು 10,000 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅದಾನಿ ಎಂಟರ್ ಪ್ರೈಸಸ್ ನಿರ್ದೇಶಕ ಪ್ರಣವ್ ಅದಾನಿ ಗುರುವಾರ (ಡಿ.14) ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Parliament; ಅಶಿಸ್ತಿನ ನಡವಳಿಕೆ: ಲೋಕಸಭೆಯಿಂದ ಐವರು ಕಾಂಗ್ರೆಸ್ ಸಂಸದರು ಅಮಾನತು
ಬಿಹಾರ ಬ್ಯುಸಿನೆಸ್ ಕನೆಕ್ಟ್ 2023ರ ಯೋಜನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅದಾನಿ, ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಬಂಡವಾಳ ಹೂಡಲು ಉದ್ಯಮಿಗಳನ್ನು ಆಹ್ವಾನಿಸಿದ್ದು, ಈ ಮೂಲಕ ಹಿಂದುಳಿದ ರಾಜ್ಯದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಭರವಸೆಯನ್ನು ಈಡೇರಿಸಲು ಮುಂದಾಗಿದ್ದಾರೆಂದು ಹೇಳಿದರು.
ಬಿಹಾರ ಈಗ ಬಂಡವಾಳ ಹೂಡಿಕೆಯ ಆಕರ್ಷಣೆಯ ಸ್ಥಳವಾಗಿದೆ. ಬಿಹಾರದಲ್ಲಿನ ಬದಲಾವಣೆ ಕಾಣಿಸುತ್ತಿದೆ. ಸಾಮಾಜಿಕ ಬದಲಾವಣೆ, ಕಾನೂನು ಸುವ್ಯವಸ್ಥೆ, ಸಾಕ್ಷರತೆ ಮತ್ತು ಮಹಿಳಾ ಸಬಲೀಕರಣ ಪ್ರಮುಖವಾಗಿದೆ ಎಂದರು.
ಬಿಹಾರದ ಅಭಿವೃದ್ಧಿ ಪಥದ ನಿತೀಶ್ ಕುಮಾರ್ ಅವರ ಯೋಜನೆಗೆ ಅದಾನಿ ಗ್ರೂಪ್ ಕೈಜೋಡಿಸುತ್ತದೆ. ಈಗಾಗಲೇ ಬಿಹಾರದಲ್ಲಿ ಲಾಜಿಸ್ಟಿಕ್ಸ್ ಮತ್ತು ಗ್ಯಾಸ್ ವಿತರಣೆ ಸೆಕ್ಟರ್ ನಲ್ಲಿ 850 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಈ ಮೂಲಕ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 3,000 ಉದ್ಯೋಗಾವಕಾಶ ಲಭ್ಯವಾಗಲಿದೆ.
ನಾವೀಗ ಬಿಹಾರದಲ್ಲಿ ಹತ್ತು ಪಟ್ಟು ಬಂಡವಾಳ ಹೂಡಿಕೆ ಮಾಡಲು ಬಯಸಿದ್ದು, ಈ ಹಿನ್ನೆಲೆಯಲ್ಲಿ ಸುಮಾರು 8,700 ಕೋಟಿ ರೂಪಾಯಿ ಬಂಡವಾಳ ಹೂಡಲು ಯೋಜನೆ ಸಿದ್ದಪಡಿಸಿದ್ದೇವೆ ಎಂದು ಅದಾನಿ ತಿಳಿಸಿದ್ದಾರೆ.