ಉಡುಪಿ: ಅದಮಾರು ಮಠದ ಈಶಪ್ರಿಯ ತೀರ್ಥರು ಉಡುಪಿ ಶ್ರೀ ಕೃಷ್ಣಮಠದಲ್ಲಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಅದಮಾರು ಪರ್ಯಾಯ ಆರಂಭವಾಯಿತು. ಶನಿವಾರ ಮುಂಜಾನೆ 5.57ರ ಸಮಯದಲ್ಲಿ ಈಶಪ್ರಿಯ ತೀರ್ಥರ ಪ್ರಥಮ ಪರ್ಯಾಯ ಆರಂಭವಾಯಿತು.
ಸಂಪ್ರದಾಯದಂತೆ ಮೆರವಣಿಗೆಯ ಮೂಲಕ ಕೃಷ್ಣಮಠ ಪ್ರವೇಶಿಸಿದ ಅದಮಾರು ಶ್ರೀಗಳು ಕನಕನ ಕಿಂಡಿಯಲ್ಲಿ ಕೃಷ್ಣ ದರ್ಶನ ಪಡೆದರು. ನಂತರ ಚಂದ್ರ ಮೌಳೇಶ್ವರ ಮತ್ತು ಅನಂತೇಶ್ವರ ದೇವರ ದರ್ಶನ ಮಾಡಿದರು.
ಬೆಳಿಗ್ಗೆ ಸುಮಾರು 5.30ರ ಸಮಯಕ್ಕೆ ಅದಮಾರು ಈಶಪ್ರಿಯ ತೀರ್ಥರು ಕೃಷ್ಣಮಠ ಪ್ರವೇಶಿಸಿದರು. ನಂತರ 5.57ರ ಶುಭ ಮುಹೂರ್ತದಲ್ಲಿ ಸಂಪ್ರದಾಯದಂತೆ ಅಕ್ಷಯ ಪಾತ್ರೆ, ಸಟ್ಟುಗ ಮತ್ತು ಗರ್ಭಗುಡಿಯ ಕೀಲಿಕೈ ಪಡೆದು ಸರ್ವಜ್ಞ ಪೀಠಾರೋಹಣ ಮಾಡಿದರು. ಇದರೊಂದಿಗೆ ಅದಮಾರು ಶ್ರೀಗಳ ಪ್ರಥಮ ಪರ್ಯಾಯ ಆರಂಭವಾಯಿತು.
ವೈಭವದ ಮೆರವಣಿಗೆ
ರಾತ್ರಿ ಸುಮಾರು 1.15ಕ್ಕೆ ಪರ್ಯಾಯ ಪರಂಪರೆಯಂತೆ ಉಡುಪಿ ಸಮೀಪದ ಕಾಪು ದಂಡತೀರ್ಥದಲ್ಲಿ ಸ್ನಾನ ಮಾಡಿ ದೇವರ ಪೂಜೆ ನಡೆಸಿ ನಂತರ ಉಡುಪಿ ಜೋಡುಕಟ್ಟೆಯ ಮಂಟಪಕ್ಕೆ ಆಗಮಿಸಿದರು. ಎರಡು ಗಂಟೆಯ ವೇಳೆಗೆ ವೈಭವದ ಪರ್ಯಾಯ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮೆರವಣಿಗೆಯಲ್ಲಿ ಪೌರಾಣಿಕ, ಐತಿಹಾಸಿಕ ಸಂದೇಶಗಳನ್ನು ಸಾರುವ ಟ್ಯಾಬ್ಲೋಗಳನ್ನು ಗಮನ ಸೆಳೆದವು. ಭಜನಾ ಮಂಡಳಿಗಳು, ವೇದಘೋಷ, ಲಕ್ಷ್ಮೀ ಶೋಭಾನೆ, ಪೂರ್ಣಕುಂಭ, ಬಿರುದಾವಳಿ, ಗೊಂಬೆ ತಂಡಗಳು, ಚೆಂಡೆ ಬಳಗ, ಪಂಚವಾದ್ಯ, ಕೊಂಬು ವಾದನ ತಂಡ, ಸ್ಯಾಕ್ಸೋಫೋನ್, ಕೋಲಾಟ, ತಮಟೆ, ನಗಾರಿ ತಂಡಗಳು ಮೆರವಣಿಗೆಯಲ್ಲಿ ಗಮನಸೆಳೆದವು.