Advertisement

ಪ್ರತ್ಯೇಕ ರಾಜ್ಯ ನಿಲುವು ಅಚಲ: ಕತ್ತಿ

03:45 AM Feb 19, 2017 | Team Udayavani |

ಬೆಳಗಾವಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಚಿಂತನೆ ಮತ್ತು ಹೋರಾಟವನ್ನು ತಾವು ಎಂದಿಗೂ ಕೈ ಬಿಡುವುದಿಲ್ಲ. ಈ ಭಾಗಕ್ಕೆ ಅನ್ಯಾಯವಾದಾಗ ಸುಮ್ಮನೆ ಕೂರುವುದಿಲ್ಲ ಎಂದು ಮಾಜಿ ಸಚಿವ ಉಮೇಶ ಕತ್ತಿ ಪುನರುಚ್ಚರಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಪ್ರತ್ಯೇಕ ರಾಜ್ಯ ಚಿಂತನೆಯ ನಿರ್ಧಾರ ಅಚಲ. ಸುಮ್ಮನೆ ಕೂರುವ ಜಾಯಮಾನದವರು ನಾವಲ್ಲ. ಮುಲಾಜಿಲ್ಲದೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಧುಮುಕಲಿದ್ದೇವೆ. ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಇದಕ್ಕೆ ಜನ ಬೆಂಬಲ ಅಗತ್ಯವಿದೆ. ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಉತ್ತರ ಕರ್ನಾಟಕದವರು ಕೈ ಜೋಡಿಸಿದರೆ ಇನ್ನೂ ಈ ಹೋರಾಟ ಗಟ್ಟಿಯಾಗಲಿದೆ ಎಂದು ಹೇಳಿದರು.

ಹೈಕಮಾಂಡ್‌ಗೆ ಸಾವಿರ ಕೋಟಿ ರೂ. ನೀಡಿರುವ ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಫೆ. 20ರಂದು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ಕಾಂಗ್ರೆಸ್‌ ಹೈಕಮಾಂಡ್‌ಗೆ ಸಾವಿರ ಕೋಟಿ ರೂ. ನೀಡಿ ಕುರ್ಚಿ ಉಳಿಸಿಕೊಂಡಿದ್ದಾರೆ. ಆದರೆ ಇದನ್ನು ಒಪ್ಪಿಕೊಳ್ಳಲು ಅಥವಾ ನಿರಾಕರಿಸಲೂ ಮುಖ್ಯಮಂತ್ರಿಯಿಂದ ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.

ಅಪನಗದೀಕರಣ ಬಳಿಕ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಸಚಿವ ರಮೇಶ ಜಾರಕಿಹೊಳಿ ಹಾಗೂ ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳಕರ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಇದರಲ್ಲಿ 162 ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ. ನೈತಿಕವಾಗಿ ಹೊಣೆ ಹೊತ್ತು ಸಚಿವ ರಮೇಶ ಜಾರಕಿಹೊಳಿ ರಾಜೀನಾಮೆ ನೀಡಬೇಕು ಎಂದು ಉಮೇಶ ಕತ್ತಿ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next