Advertisement

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

11:01 PM Apr 30, 2024 | Team Udayavani |

ಬೆಂಗಳೂರು: ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿ “ಮತಯಾತ್ರೆ’ ಮುಗಿಸಿ ರಾಜಕೀಯ ಪಕ್ಷಗಳು “ಉತ್ತರ’ದ ದಂಡ ಯಾತ್ರೆಗೆ ಹೊರಡುತ್ತಿದ್ದಂತೆ ಚುನಾವಣಾ ಆಯೋಗ ತನ್ನ ಕಾರ್ಯಕ್ಷೇತ್ರವನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸಿದೆ.

Advertisement

ಹದಿನಾಲ್ಕು ಕ್ಷೇತ್ರಗಳಲ್ಲಿ ಏಪ್ರಿಲ್‌ 26ರಂದು ನಡೆದ ಮೊದಲ ಹಂತದ ಮತದಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಚುನಾವಣಾ ಆಯೋಗ ಇದೀಗ ಮೇ 7ರಂದು ಚುನಾವಣೆ ನಡೆಯಲಿರುವ 14 ಕ್ಷೇತ್ರಗಳಲ್ಲಿ ಮತದಾನಕ್ಕೆ ತನ್ನನ್ನು ಸನ್ನದ್ಧಗೊಳಿಸಿದೆ. ಈ ಮಧ್ಯೆ ಉತ್ತರ ಕರ್ನಾಟಕ ಭಾಗದ ಸುಡು ಬಿಸಿಲು ಚುನಾವಣಾ ಆಯೋಗಕ್ಕೆ ಸವಾಲಾಗಿ ಪರಿಣಮಿಸಿದೆ.

ಈಗಾಗಲೇ ಮತದಾನಕ್ಕೆ ಬೇಕಾಗುವ ಇವಿಎಂಗಳನ್ನು ಸಜ್ಜುಗೊಳಿಸಿಕೊಳ್ಳಲಾಗಿದೆ. ಚುನಾವಣಾ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದ್ದು ನಿಯೋಜನೆ ಕಾರ್ಯ ನಡೆದಿದೆ. ಇದಲ್ಲದೆ ಚುನಾವಣಾ ಆಯೋಗದಿಂದ ಮನೆ ಮನೆಗೆ ಮತದಾರರ ಚೀಟಿ ಹಂಚುವ ಕಾರ್ಯ ನಡೆದಿದೆ. ಇದರ ಜೊತೆಗೆ ಚುನಾವಣಾ ಅಕ್ರಮಗಳ ಮೇಲೆ ನಿಗಾ ಇಡಲು ಪೊಲೀಸ್‌, ಅಬಕಾರಿ, ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕೇಂದ್ರದಿಂದ ನಿಯೋಜನೆಗೊಂಡಿರುವ ಚುನಾವಣಾ ವೀಕ್ಷಕರು ಆಯಾ ಕ್ಷೇತ್ರಗಳಲ್ಲೇ ಬೀಡು ಬಿಟ್ಟಿದ್ದಾರೆ. ಇದಲ್ಲದೇ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೆಲವು ಹಿರಿಯ ಅಧಿಕಾರಿಗಳು ಉತ್ತರ ಕರ್ನಾಟಕ ಭಾಗದಲ್ಲಿ ಠಿಕಾಣಿ ಹೂಡಲಿದ್ದಾರೆಂದು ಹೇಳಲಾಗಿದೆ.

ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ:
ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿ ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಗಡಿ ಭಾಗಕ್ಕೆ ಹೊಂದಿಕೊಂಡಿರುವ ರಾಯಚೂರು, ಬಳ್ಳಾರಿ, ಬೀದರ್‌, ಬೆಳಗಾವಿ, ಉತ್ತರ ಕನ್ನಡ ಹಾಗೂ ವಿಜಯಪುರ ಕ್ಷೇತ್ರಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕಕ್ಕೆ ಹೊಂದಿಕೊಂಡ ಗಡಿ ರಾಜ್ಯದ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀತಿ ಸಂಹಿತೆ ಜಾರಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ. ಈಗಾಗಲೇ ರಾಜ್ಯಕ್ಕೆ ಪ್ರವೇಶಿಸುವ ಗಡಿಗಳಲ್ಲಿ ಪೊಲೀಸ್‌ ನಾಕಾಗಳನ್ನು ಸ್ಥಾಪಿಸಲಾಗಿದ್ದು ಮದ್ಯ ಹಾಗೂ ಹಣದ ಸಾಗಣೆ ತಡೆಗಟ್ಟಲು ಅಬಕಾರಿ ಮತ್ತು ಐಟಿ ಅಧಿಕಾರಿಗಳ ತಂಡಗಳನ್ನು ನಿಯೋಜಿಸಲಾಗಿದೆ. ಇವರಿಗೆ ಪೊಲೀಸ್‌ ಅಧಿಕಾರಿಗಳು ಸಹ ಸಾಥ್‌ ನೀಡಲಿದ್ದಾರೆ. ಅಲ್ಲದೇ ಬೆಂಗಳೂರಿನಿಂದ ಚುನಾವಣೆ ನಡೆಯಲಿರುವ ಜಿಲ್ಲೆಗಳಿಗೆ ಪ್ರವೇಶಿಸುವ ರಸ್ತೆಗಳಲ್ಲಿಯೂ ವಿಶೇಷ ನಿಗಾ ಇಡಲಾಗುತ್ತಿದೆ ಎಂದು ಆಯೋಗದ ಮೂಲಗಳು ಹೇಳಿವೆ.

ಬಿಸಿಲು ನಿರ್ವಹಣೆಗೆ ಕ್ರಮ
ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ಚುನಾವಣಾ ಪ್ರಕ್ರಿಯೆ ಅದರಲ್ಲೂ ವಿಶೇಷವಾಗಿ ಮತದಾನದ ದಿನ ಬಿಸಿಲಿನ ನಿರ್ವಹಣೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಮತಗಟ್ಟೆಗಳಲ್ಲಿ ಕುಡಿಯುವ ನೀರು, ಅಗತ್ಯವಿರುವ ಕಡೆ ನೆರಳಿನ ವ್ಯವಸ್ಥೆಯೂ ಮಾಡುವ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ. ಬಿಸಿಲು ಏರುವ ಮೊದಲೇ ಮತದಾನ ಮಾಡುವುದು ಒಳ್ಳೆಯದು ಎಂಬ ಸಂದೇಶ, ಜಾಗೃತಿಯನ್ನು ಸ್ಥಳೀಯ ಮಟ್ಟದಲ್ಲಿ ನೀಡಲಾಗುತ್ತದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಎರಡನೇ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ನಡೆಯುವ ಮತದಾನಕ್ಕೆ ಚುನಾವಣಾ ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಚುನಾವಣೆ ನಡೆದು, ಅತಿ ಹೆಚ್ಚು ಮತದಾನವಾಗುವ ನಿರೀಕ್ಷೆಯಿದೆ.
-ಮನೋಜ್‌ ಕುಮಾರ್‌ ಮೀನಾ, ರಾಜ್ಯ ಮುಖ್ಯ ಚುನಾವಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next