Advertisement

ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ ಮುಗಿದ ಅಧ್ಯಾಯ​​​​​​​

06:15 AM Sep 25, 2018 | Team Udayavani |

ಚಿತ್ರದುರ್ಗ: ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ರಾಜಕೀಯ ಗೊಂದಲಗಳು ಮೂಲೆ ಸೇರಿದ್ದು, ಸರ್ಕಾರ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌ ತಿಳಿಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಮತ್ತು  ಕಾಂಗ್ರೆಸ್‌ ಪಕ್ಷಗಳಲ್ಲಿ ಯಾವುದೇ ಗೊಂದಲಗಳಿಲ್ಲ. ಕೆಲವು ಮಾಧ್ಯಮಗಳು ಗೊಂದಲ ಸೃಷ್ಟಿಸಿವೆ. ಸುಳ್ಳನ್ನೇ ದೊಡ್ಡದನ್ನಾಗಿಸುವ ಮೂಲಕ ಇಷ್ಟೆಲ್ಲ ಗೊಂದಲಗಳ ಸೃಷ್ಟಿಗೆ ಕಾರಣವಾದವು ಎಂದು ಹರಿಹಾಯ್ದರು.

ಶಾಸಕರಾದ ಸುಧಾಕರ್‌, ನಾಗರಾಜ್‌ ಸೇರಿದಂತೆ ಯಾರೂ ಎಲ್ಲಿಯೂ ಹೋಗಿಲ್ಲ. ಮನೆಯ ಯಜಮಾನ ಬೆತ್ತ ಹಿಡಿದು ಹುಷಾರ್‌ ಎಂದು ಮಕ್ಕಳಿಗೆ ಬೆದರಿಸುವ ರೀತಿಯಲ್ಲಿ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರು ಶಾಸಕರಿಗೆ ಎಚ್ಚರಿಕೆ ಕೊಟ್ಟಿದ್ದಾರಷ್ಟೇ. ಸಮನ್ವಯ ಸಮಿತಿಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಎರಡೂ ಪಕ್ಷಗಳ ಅಧ್ಯಕ್ಷರು ಇರಬೇಕು. ಇಲ್ಲದಿದ್ದರೆ ಸಮಿತಿಯೇ ಅಪೂರ್ಣವಾಗಲಿದೆ ಎನ್ನುವುದು ನನ್ನ ಅಭಿಪ್ರಾಯ ಎಂದ ವಿಶ್ವನಾಥ್‌, ಲೋಕಸಭೆ ಚುನಾವಣೆಗೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಒಟ್ಟಾಗಿ ಹೋಗಲಿದೆ. ಇದರಲ್ಲಿ ಅನುಮಾನ ಬೇಡ ಎಂದು ಹೇಳಿದರು.

ರೈತರ ರಾಷ್ಟ್ರೀಕೃತ ಬ್ಯಾಂಕ್‌ ಸಾಲ ಮನ್ನಾ ವಿಚಾರದಲ್ಲಿ ಬಿಜೆಪಿ ಅಡ್ಡಗಾಲು ಹಾಕುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಒನ್‌ಟೈಂ ಸೆಟಲ್‌ ಮೆಂಟ್‌ಗೆ ಒಪ್ಪುತ್ತಿಲ್ಲ. ಸಾಲ ಮನ್ನಾ ಆದರೆ ಬಿಜೆಪಿಗೆ ತೊಂದರೆಯಾಗಲಿದೆ ಎನ್ನುವ ಭಾವನೆ ಆ ಪಕ್ಷದವರಿಗೆ ಇದ್ದಂತೆ ಕಾಣುತ್ತದೆ.ಅದಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಅಡ್ಡಗಾಲು ಹಾಕುತ್ತಿದೆ. ಆದರೆ ಮಲ್ಯರಂಥವರ ಸಾವಿರಾರು ಕೋಟಿ ಸಾಲಕ್ಕೆ ಒನ್‌ಟೈಂ ಸೆಟಲ್‌ಮೆಂಟ್‌ಗೆ ಒಪ್ಪಿಕೊಂಡಿರುವ ಬ್ಯಾಂಕ್‌ಗಳು ರೈತರ ಸಾಲ ಮನ್ನಾ ವಿಚಾರದಲ್ಲಿ ಹಿಂದೇಟು ಹಾಕುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪ್ರಜಾತಾಂತ್ರಿಕವಾಗಿ ರಚನೆಯಾಗಿರುವ ಸರ್ಕಾರವನ್ನು ಕೆಡವಲು ನಿತ್ಯ ಪ್ರಯತ್ನಿಸುತ್ತಿರುವ ಬಿಜೆಪಿ ವಿರೋಧ ಪಕ್ಷವಾಗಿ ಸಂಪೂರ್ಣ ವಿಫಲವಾಗಿದೆ. ಸಮ್ಮಿಶ್ರ ಸರ್ಕಾರ ರಚನೆ ಆದ ಮೊದಲ ದಿನದಿಂದಲೇ ಬಿಜೆಪಿ ಅಪಸ್ವರ ಎತ್ತುತ್ತಾ ಬಂದಿದೆ. ಅಪವಿತ್ರ ಮೈತ್ರಿ ಎಂದು ಬೊಬ್ಬೆ ಹಾಕಲಾಯಿತು. ಹಾಗಾದರೆ ಹಿಂದೆ ಬಿಜೆಪಿಯವರು ಮಾಡಿಕೊಂಡಿದ್ದ ಮೈತ್ರಿ ಅಪವಿತ್ರವಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

Advertisement

ವಿಶ್ವನಾಥ್‌ ಬೇರೆ, ಸಿದ್ದರಾಮಯ್ಯನವರೇ ಬೇರೆ. ಹಾಗಾಗಿ ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ ಎಂದು ವಿಶ್ವನಾಥ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.

ಜೆಡಿಎಸ್‌ ಘಟಕಗಳ ಪುನರ್‌ ರಚನೆ:
ಜೆಡಿಎಸ್‌ ಪಕ್ಷದ ಬಲವರ್ಧನೆಗಾಗಿ ಎಲ್ಲ ಘಟಕಗಳನ್ನು ವಿಸರ್ಜಿಸಿ ಪುನರ್‌ ರಚನೆ ಮಾಡಲಾಗುತ್ತದೆ. ರಾಜ್ಯ, ಜಿಲ್ಲೆ ಮತ್ತು ಬ್ಲಾಕ್‌ ಮಟ್ಟದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಹೊಸ ಸಮಿತಿ ರಚಿಸಲು ಉದ್ದೇಶಿಸಲಾಗಿದೆ. ರಾಜ್ಯ ಸಮಿತಿಯನ್ನು ಈಗಾಗಲೇ ರಚಿಸಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಜಿಲ್ಲಾ ಮತ್ತು ತಾಲೂಕು ಘಟಕಗಳನ್ನು ವಿಸರ್ಜಿಸಿ ಯುವ ತಂಡವನ್ನು ನೇಮಕ ಮಾಡಲಾಗುತ್ತದೆ. ರಾಜ್ಯ, ಜಿಲ್ಲಾ ಮತ್ತು ತಾಲೂಕು ಸಮಿತಿಗಳ ರಚನೆ ಸಂದರ್ಭದಲ್ಲಿ ಎಲ್ಲ ಜಾತಿ, ಸಮುದಾಯ, ಧರ್ಮಗಳ ಮುಖಂಡರನ್ನು ನೇಮಕ ಮಾಡಲಾಗುತ್ತದೆ. ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡುವುದಾಗಿ ಹೇಳಿದರು.

ನಾನು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾಗಿ 14 ತಿಂಗಳಾಯಿತು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ನನ್ನ ರಾಜಕೀಯ ಗುರು. ಜೆಡಿಎಸ್‌ ಪಕ್ಷ ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಹುಣಸೂರಿನಿಂದ ಶಾಸಕನನ್ನಾಗಿ ಮಾಡಿದೆ. ಆದ್ದರಿಂದ ಆಶ್ರಯ ನೀಡಿದ ಪಕ್ಷಕ್ಕೆ ಸದಾ ಕೃತಜ್ಞನಾಗಿರುತ್ತೇನೆ.
– ಎಚ್‌. ವಿಶ್ವನಾಥ್‌, ಜೆಡಿಎಸ್‌ ರಾಜ್ಯಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next