Advertisement

ಸಂಖ್ಯೆಗಿಂತ ಭಿನ್ನ ಪಾತ್ರಗಳೇ ಮುಖ್ಯ

05:12 PM Nov 20, 2020 | Suhan S |

ಇತ್ತೀಚಿನ ವರ್ಷಗಳಲ್ಲಿ, ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಸಿನಿಮಾಗಳು ಮತ್ತು ಪಾತ್ರಗಳ ಮೂಲಕವೇ ಗುರುತಿಸಿಕೊಂಡಿರುವ ಕೆಲವೇ ಕೆಲವು ನಟಿಯರ ಪೈಕಿ ಯಜ್ಞಾ ಶೆಟ್ಟಿ ಕೂಡ ಒಬ್ಬರು. ಯಜ್ಞಾ ಶೆಟ್ಟಿ ಅಭಿನಯಿಸಿದ ಸಿನಿಮಾಗಳ ಸಂಖ್ಯೆ ಕಡಿಮೆಯಿದ್ದರೂ, ಅವರು ನಿರ್ವಹಿಸಿರುವ ಪಾತ್ರಗಳು, ಅವರಿಗೆ ಸಾಕಷ್ಟು ಹೆಸರು, ಜನಪ್ರಿಯತೆ ಎಲ್ಲವನ್ನೂ ತಂದುಕೊಟ್ಟಿವೆ. ಸದ್ಯ ಯಜ್ಞಾ ಶೆಟ್ಟಿ ಅಭಿನಯಿಸಿರುವ ಅಂಥದ್ದೇ ಒಂದು ಚಿತ್ರ “ಆಕ್ಟ್-1978′ ಈ ವಾರ ಬಿಡುಗಡೆಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಚಿತ್ರದಲ್ಲಿ ಕೂಡ ಯಜ್ಞಾ ಶೆಟ್ಟಿ ಮತ್ತೂಂದು ವಿಭಿನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ. “ಆಕ್ಟ್-1978′ ಬಿಡುಗಡೆ ವೇಳೆ “ಉದಯವಾಣಿ’ ಜೊತೆ ಮಾತಿಗೆ ಸಿಕ್ಕಯಜ್ಞಾ ಶೆಟ್ಟಿ, ತಮ್ಮ ಹೊಸಚಿತ್ರ ಮತ್ತು ಪಾತ್ರದ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.

Advertisement

“ಆಕ್ಟ್-1978′ ಚಿತ್ರ, ಪಾತ್ರದ ಬಗ್ಗೆ ಏನು ಹೇಳುತ್ತೀರಿ? :

ನೀವು ಈಗಾಗಲೇ “ಆಕ್ಟ್-1978′ ಸಿನಿಮಾದ ಪೋಸ್ಟರ್‌, ಟ್ರೇಲರ್‌ನಲ್ಲಿ ನೋಡಿರಬಹುದು. ಇದರಲ್ಲಿ ನಾನು ಒಂಬತ್ತು ತಿಂಗಳ ತುಂಬು ಗರ್ಭಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಮ್ಮ ವ್ಯವಸ್ಥೆಯ ಬಗ್ಗೆ ರೋಸಿ ಹೋದ ಮಹಿಳೆಯೊಬ್ಬಳು, ಈ ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದರೆ, ಏನು ಮಾಡಬಹುದು ಅನ್ನೋದು ನನ್ನ ಪಾತ್ರ. ತುಂಬ ಗಂಭೀರವಾದ ಪಾತ್ರ ಇದಾಗಿದ್ದು, ಇಡೀ ಚಿತ್ರ ಈ ಪಾತ್ರದ ಸುತ್ತ ನಡೆಯುತ್ತದೆ.

ಈ ಥರದ ಪಾತ್ರವಿರುವ ಚಿತ್ರ ಒಪ್ಪಿಕೊಳ್ಳಲು ಕಾರಣ? :

ಈ ಸಿನಿಮಾದ ಕಥೆ ಮತ್ತು ಅದರ ಪಾತ್ರ. ಇದೊಂದು ಸಂಪೂರ್ಣ ಮಹಿಳಾ ಕೇಂದ್ರಿತ ಕಥೆ. ಕಾನ್ಸೆಪ್ಟ್ ತುಂಬಚೆನ್ನಾಗಿದೆ. ನಾನು ಇಲ್ಲಿಯವರೆಗೆ ಮಾಡಿದಪಾತ್ರಗಳಿಗಿಂತ, ತುಂಬ ವಿಭಿನ್ನವಾದಂಥ ಪಾತ್ರ ಈ ಸಿನಿಮಾದಲ್ಲಿದೆ. ಅಭಿನಯಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದ್ದ ಪಾತ್ರ. ನಿರ್ದೇಶಕ ಮಂಸೋರೆ ಹೇಳಿದ ಕಥೆ ಮತ್ತು ಪಾತ್ರ ಎರಡೂ ಇಷ್ಟವಾಯ್ತು. ಅದೇ ಈ ಸಿನಿಮಾ ಒಪ್ಪಿಕೊಳ್ಳೋದಕ್ಕೆಕಾರಣವಾಯ್ತು.

Advertisement

ಚಿತ್ರದ ಪಾತ್ರಕ್ಕೆ ತಯಾರಿ ಹೇಗಿತ್ತು? :  ತುಂಬು ಗರ್ಭಿಣಿಯೊಬ್ಬಳು ಹೇಗೆ ಇರುತ್ತಾಳೆ ಅನ್ನೋದನ್ನ ಸೂಕ್ಷ್ಮವಾಗಿ ಗಮನಿಸಿ ಈ ಪಾತ್ರ ಮಾಡಬೇಕಿತ್ತು. ಆದಷ್ಟು ನೈಜವಾಗಿ ಪಾತ್ರ ಬರಬೇಕಿತ್ತು. ಹಾಗಾಗಿ ಗರ್ಭಿಣಿ ಮಹಿಳೆಯರು ಹೇಗೆ ನಡೆಯುತ್ತಾರೆ, ಹೇಗೆ ಮಾತನಾಡುತ್ತಾರೆ ಅನ್ನೋದನ್ನ ಒಂದಷ್ಟು ಸ್ಟಡಿ ಮಾಡಿಕೊಳ್ಳ ಬೇಕಾಯ್ತು. ಪಾತ್ರ ಚೆನ್ನಾಗಿ ಬರಬೇಕೆಂಬ ಕಾರಣಕ್ಕಾಗಿ ಶೂಟಿಂಗ್‌ಗೂ ಮೊದಲು ಒಂದಷ್ಟು ಹೋಮ್‌ ವರ್ಕ್‌ ಮಾಡಿಕೊಂಡಿದ್ದೆ. ಟೀಮ್‌ ಜೊತೆಗೆ ವರ್ಕ್‌ಶಾಪ್‌ ಕೂಡ ಮಾಡಿದ್ದೆವು.

ಇದನ್ನೂ ಓದಿ:ಲಾಕ್‌ಡೌನ್‌ ಬಳಿಕ ಹೊಸ ಚಿತ್ರದತ್ತ ಸೆಂಚುರಿ ಸ್ಟಾರ್ : ‌ಶಿವಪ್ಪನಾದ ಶಿವಣ್ಣ

ಚಿತ್ರೀಕರಣದ ಅನುಭವದ ಬಗ್ಗೆ ಏನು ಹೇಳುತ್ತೀರಿ? :  ನಾನು ಇಲ್ಲಿಯವರೆಗೆ ಮಾಡಿದ ಸಿನಿಮಾಗಳದ್ದು ಒಂದು ಥರದ ಅನುಭವ ಆಗಿದ್ದರೆ, ಈ ಸಿನಿಮಾ ಮತ್ತೂಂದು ಥರದ ಅನುಭವ. ಇದೊಂದು ಸೂಕ್ಷ್ಮ ವಿಷಯವನ್ನು ಇಟ್ಟುಕೊಂಡು ಮಾಡಿದ ಸಿನಿಮಾ. ನಿರ್ದೇಶಕ ಮಂಸೋರೆ ತುಂಬ ಚೆನ್ನಾಗಿ ಸಿನಿಮಾವನ್ನುಕಟ್ಟಿಕೊಟ್ಟಿದ್ದಾರೆ. ಪ್ರತಿಯೊಬ್ಬರು ತುಂಬ ಬದ್ಧತೆಯಿಂದ ಈ ಸಿನಿಮಾ ಮಾಡಿದ್ದಾರೆ. ಪ್ರತಿಯೊಂದು ಪಾತ್ರಗಳಿಗೂ ಅದರದ್ದೇ ಆದ ಮಹತ್ವವಿದೆ. ತುಂಬ ವೃತ್ತಿಪರವಾಗಿ ಕೆಲಸ ಮಾಡಿದ ಅನುಭವ ಈ ಸಿನಿಮಾದಲ್ಲಿ ಸಿಕ್ಕಿದೆ. ನಟಿಯಾಗಿ ಪಾತ್ರ ತುಂಬ ಖುಷಿ ಕೊಟ್ಟಿದೆ.

“ಆಕ್ಟ್-1978′ ನಲ್ಲಿ ನಿಮ್ಮ ಲುಕ್‌ಗೆ ರೆಸ್ಪಾನ್ಸ್‌ ಹೇಗಿದೆ? : ಇದೊಂದು ಅಪರೂಪದ ಪಾತ್ರ. ಹಾಗಾಗಿ ಸಿನಿಮಾದಲ್ಲಿ ನನ್ನ ಗೆಟಪ್‌ಕೂಡ ಅದಕ್ಕೆ ತಕ್ಕಂತೆ ಇದೆ. ಈಗಾಗಲೇಪೋಸ್ಟರ್‌, ಟ್ರೇಲರ್‌ನಲ್ಲಿ ನನ್ನ ಲುಕ್‌, ಗೆಟಪ್‌ನೋಡಿದವರು ಎಲ್ಲರೂ ತುಂಬ ಖುಷಿಪಡುತ್ತಿದ್ದಾರೆ.ಸಿನಿಮಾದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ.ಇಂಥದ್ದೊಂದು ಪಾತ್ರದ ಬಗ್ಗೆ, ಗೆಟಪ್‌ ಬಗ್ಗೆ ನನಗೂ ನಿರೀಕ್ಷೆ ಇದೆ. ಪ್ರೇಕ್ಷಕರಿಗೆ ಸಿನಿಮಾ, ನನ್ನ ಪಾತ್ರ ಇಷ್ಟವಾಗುವುದೆಂಬ ಭರವಸೆ ಇದೆ.

ಮುಂದೆ ಯಾವ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೀರಿ? :  ಸದ್ಯಕ್ಕೆ “ಆಕ್ಟ್-1978′ ಸಿನಿಮಾದ ಬಿಡುಗಡೆ ಎದುರು ನೋಡುತ್ತಿದ್ದೇನೆ. ಅದನ್ನು ಬಿಟ್ಟು ಬೇರೆ ಯಾವುದೇ ಸಿನಿಮಾಗಳನ್ನೂ ಒಪ್ಪಿಕೊಂಡಿಲ್ಲ. ನಾನು ಕಥೆ ಮತ್ತು ಪಾತ್ರಕ್ಕೆ ತುಂಬ ಮಹತ್ವ ಕೊಡುತ್ತೇನೆ. ಮುಂದೆ ಕಥೆ ಮತ್ತು ಅಭಿನಯಕ್ಕೆ ಪ್ರಾಮುಖ್ಯತೆ ಇರುವಂಥ ಪಾತ್ರಗಳು ಸಿಕ್ಕರೆ ನೋಡೋಣ. ನನ್ನ ಮದುವೆಗೂ ಮುಂಚೆ ಅಭಿನಯಿಸಿದ ಸಿನಿಮಾ ಇದು. ಮದುವೆಯ ನಂತರ ಬಿಡುಗಡೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next