Advertisement

ಚಿತ್ರನಟ ಸದಾಶಿವ ಬ್ರಹ್ಮಾವರ ಬೈಲಹೊಂಗಲ ಬಾಂಧವ್ಯ

03:28 PM Sep 21, 2018 | |

ಬೈಲಹೊಂಗಲ: ಬುಧವಾರ ನಿಧನರಾಗಿರುವ ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ ಅವರು ಬೈಲಹೊಂಗಲದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಹಿರಿಯ ನಟ. ಮೂಲತಃ ಬ್ರಹ್ಮಾವರದವರಾದರೂ ಇಲ್ಲಿ ತಮ್ಮ ಪುತ್ರನೊಂದಿಗೆ ವಾಸಿಸುತ್ತ ಸ್ಥಳೀಯರಿಗೆ ಚಿರಪರಿಚಿತರಾಗಿದ್ದರು. ಪಟ್ಟಣದ ಎಲ್‌ಐಸಿಯ ಉದ್ಯೋಗಿಯಾಗಿರುವ ರವೀಂದ್ರ ಬ್ರಹ್ಮಾವರ ಸದಾಶಿವ ಅವರು ಪುತ್ರ. ಇಲ್ಲಿಯ ಪ್ರಭುನಗರದಲ್ಲಿ ಅವರ ಮನೆ. ಬೆಂಗಳೂರಿನಲ್ಲಿ ಸೆ. 19ರಂದು ಮಧ್ಯಾಹ್ನ ಸದಾಶಿವ ಬ್ರಹ್ಮಾವರ ನಿಧನ ಹೊಂದಿದ್ದರೂ ಪಟ್ಟಣದ ನಿವಾಸಿಗಳಿಗೆ ಸುದ್ದಿ ಗೊತ್ತಾಗಿಲ್ಲ. ಆದರೆ ಅವರ ಪುತ್ರ ಬುಧವಾರ ರಾತ್ರಿ ಬೆಂಗಳೂರಿಗೆ ತೆರಳಿದ್ದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ವಿಷಯ ಗೊತ್ತಾಗಿದೆ.

Advertisement

ನಟ ಬ್ರಹ್ಮಾವರ ಸಾವಿನ ಸುದ್ದಿ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಹಿರಿಯ ನಟನ ಸಾವಿನಿಂದ ಅಭಿಮಾನಿ ಬಳಗದಲ್ಲಿ ದುಃಖ ಮಡುಗಟ್ಟಿತ್ತು. ಅವರೊಂದಿಗೆ ಕಳೆದ 25 ವರ್ಷಗಳಿಂದ ಒಡನಾಟ ಹೊಂದಿದ ಚಿತ್ರನಟ ಶಿವರಂಜನ್‌ ಮೃತ ನಟನೊಂದಿಗಿನ ಬಾಂಧವ್ಯ ಮೆಲುಕು ಹಾಕಿದರು. ಚಲನಚಿತ್ರಗಳಾದ ಅಮೃತಸಿಂಧು, ರಾಜಾರಾಣಿ, ಕನಸೆಂಬ ಕುದುರೆಯನ್ನೇರಿ, ಕಿರುಚಿತ್ರ ಸಂಗೊಳ್ಳಿ ರಾಯಣ್ಣ, ಕಿತ್ತೂರ ಚನ್ನಮ್ಮ, ಸಂಪೂರ್ಣ ಸ್ವಚ್ಛ ಭಾರತ ಅಭಿಯಾನದಲ್ಲಿ ಅವರೊಂದಿಗೆ ನಟಿಸಿದ್ದ ಅನುಭವ ಅನನ್ಯ ಎಂದರು.

ಹಿರಿಯ ರಂಗಭೂಮಿ ಕಲಾವಿದ ಏಣಗಿ ಬಾಳಪ್ಪ ಅವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಚಿತ್ರನಟ ಸದಾಶಿವ ಬ್ರಹ್ಮಾವರ ಅವರೊಂದಿಗೆ ರಂಗಭೂಮಿಯಲ್ಲಿ ಕೆಲಸ ನಿರ್ವಹಿಸಿದ್ದರು. ರಂಗಕರ್ಮಿ, ಚಿತ್ರನಟ ಸಿ.ಕೆ. ಮೆಕ್ಕೇದ ಅವರೊಂದಿಗೆ ಸಂಗೊಳ್ಳಿ ರಾಯಣ್ಣ ಮೊದಲಾದ ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿದ್ದರು.

ನಟ ಸದಾಶಿವ ಅವರು ಆಗಾಗ ಮನೆಯಿಂದ ಹೊರಗೆ ಸುತ್ತಾಡಲು ಹೊರಟಾಗ ಅವರನ್ನು ಗುರುತಿಸಿ ಸ್ಥಳೀಯರು ಅವರೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಿದ್ದರು. ಹಲವು ವರ್ಷಗಳ ಹಿಂದೆ ಮನೆ ಬಿಟ್ಟು ಹೊರಗೆ ಹೋದಾಗ ವಯೋಸಹಜ ಮರೆವಿನಿಂದ ಮನೆಗೆ ವಾಪಸಾಗಲು ಸಾಧ್ಯವಾಗದೇ ಎಲ್ಲೆಲ್ಲೋ ಅಲೆಯುತ್ತಿರುವುದನ್ನು ಕಂಡ ಅಭಿಮಾನಿಯೊಬ್ಬರು ಅವರಿಗೆ ಬಸ್‌ ಚಾರ್ಜ್‌ ನೀಡಿ ಮನೆಗೆ ಕಳೆಸಿರುವುದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.

ಮನೆಯಿಂದ ದೂರದ ಊರಿಗೆ ಹೋದಾಗ ಅಲ್ಲಿ ದೇವಸ್ಥಾನ ಕಂಡರೆ ತಮ್ಮ ಬಳಿ ಇದ್ದ ಹಣವನ್ನು ಹುಂಡಿಯಲ್ಲಿ ಹಾಕಿ ಕಿಸೆ ಖಾಲಿ ಮಾಡಿಕೊಂಡು ನಂತರ ಮನೆಗೆ ಮರಳಲಾಗದೇ ಪರದಾಡಿದ್ದೂ ಉಂಟು. ಇಂಥ ಘಟನೆಗಳು ಸಾಕಷ್ಟು ಬಾರಿ ಅವರ ಜೀವನದಲ್ಲಿ ನಡೆದಿವೆ. ಸಂತಾಪ: ಹಿರಿಯ ಚಲನಚಿತ್ರ ನಟ ಸದಾಶಿವ ಬ್ರಹ್ಮಾವರ ನಿಧನಕ್ಕೆ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ, ಮಾಜಿ ಸಚಿವ ಶಿವಾನಂದ ಕೌಜಲಗಿ, ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾ ಬಿಜೆಪಿ ಗ್ರಾಮೀಣ ಅಧ್ಯಕ್ಷ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಚಿತ್ರನಟ ಶಿವರಂಜನ್‌ ಬೊಳನ್ನವರ, ಕಲಾವಿದ ಸಿ.ಕೆ. ಮೆಕ್ಕೇದ, ಕಲಾವಿದ ಮಲ್ಲವ್ವ ಮ್ಯಾಗೇರಿ ಸಂತಾಪ ಸೂಚಿಸಿದ್ದಾರೆ. 

Advertisement

ಶಿವಾನಿ ಹೋಟೆಲ್‌ ನಂಟು
ಪುತ್ರ ರವೀಂದ್ರ ಸದಾಶಿವ ಅವರನ್ನು ಇಲ್ಲಿನ ಶಿವಾನಿ ಹೋಟೆಲ್‌ಗೆ ಪ್ರತಿದಿನ ಬೆಳಗ್ಗೆ ಕರೆದುಕೊಂಡು ಬಂದು ಚಹ, ಉಪಹಾರ ಮಾಡಿಸಿಕೊಂಡು ಹೋಗುತ್ತಿದ್ದರು. ಅಲ್ಲದೇ ಸದಾಶಿವ ತಮ್ಮ ಮನೆಗೆ ಹೋದ ಮೇಲೆ ಸಂಗೀತ ಸಾಧನಗಳನ್ನು ನುಡಿಸುತ್ತ ಹಾಡುಗಳನ್ನು ಹಾಡುವ ಪರಿಪಾಠ ಬೆಳೆಸಿಕೊಂಡಿದ್ದರೆಂದು ಕುಟುಂಬದವರು ನೆನಪಿಸಿಕೊಳ್ಳುತ್ತಾರೆ.

ಸಿ.ವೈ. ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next