Advertisement

Kambala Kalarava: ಇತಿಹಾಸ ಪ್ರಸಿದ್ಧವಾದ ಹಂದಾಡಿ ಕಂಬಳ ಬಗ್ಗೆ ಗೊತ್ತಾ?

01:39 AM Dec 08, 2024 | Team Udayavani |

ಬ್ರಹ್ಮಾವರ: ಇಲ್ಲಿನ ಹಂದಾಡಿ ನಾಲ್ಕು ಮನೆಯ ಪೈಕಿ ಪಳ್ತಮನೆಯಲ್ಲಿ ಗ್ರಾಮಸ್ಥರ ಸಹಕಾರದಿಂದ ನಡೆಯುವ ಕಂಬಳವು ಡಿ.8ರಂದು ಮಧ್ಯಾಹ್ನ 1ರಿಂದ ಪ್ರಾರಂಭಗೊಂಡು ಹೊನಲು ಬೆಳಕಿನಲ್ಲಿ ನಡೆಯಲಿದೆ.

Advertisement

ಕಂಬಳ ದಿನ ಮಧ್ಯಾಹ್ನ ಕುಟುಂಬದ ಮನೆಯಲ್ಲಿ ಮನೆದೇವರು, ಗ್ರಾಮದೇವರನ್ನು ಪ್ರಾರ್ಥಿಸಲಾಗುತ್ತದೆ. ಫಲವನ್ನು ತೆಗೆದಿಟ್ಟು ತುಳಸಿಕಟ್ಟೆಯ ಎದುರು ಮನೆಯ ಕೋಣಗಳನ್ನು ಸಿಂಗರಿಸಿ ಪ್ರಸಾದ ಹಚ್ಚಿ ಮೆರವಣಿಗೆಯಲ್ಲಿ ದೊಡ್ಡಮನೆ ಹೆಬ್ಟಾಗಿಲು ಮೂಲಕ ಸಾಗಿ ನಾಗ ಬೊಬ್ಬರ್ಯ ದೇವರಿಗೆ ಪೂಜೆ ಸಲ್ಲಿಸಲಾಗುವುದು. ಬಳಿಕ ಕಂಬಳ ಗದ್ದೆಗೆ 1 ಸುತ್ತು ಹಾಕಿ ಮನೆ ಕೋಣಗಳನ್ನು ಗದ್ದೆಗೆ ಇಳಿಸಲಾಗುತ್ತದೆ.

ಶತಮಾನದ ಇತಿಹಾಸ
ಈ ಕಂಬಳಕ್ಕೆ ಶತಮಾನದ ಇತಿಹಾಸವಿದ್ದು, ಮಧ್ಯದಲ್ಲಿ ಕಾರಣಾಂತರದಿಂದ ನಿಂತಿತ್ತು. ಅನಂತರ ಕಂಬಳವನ್ನು ಮತ್ತೆ ಆರಂಭಿಸಬೇಕು ಎಂದು ಪ್ರಶ್ನೆಯಲ್ಲಿ ತಿಳಿದುಬಂದ ಪ್ರಕಾರ ಪಳ್ತಮನೆ ದಿ| ಭುಜಂಗ ಶೆಟ್ಟಿಯವರು ಕುಟುಂಬಸ್ಥರು ಹಾಗೂ ಊರವರ ಸಹಕಾರದಿಂದ 1974ರಿಂದ ಪುನರಾರಂಭ ಮಾಡಿದ್ದರು.

ಕಂಬಳಕ್ಕೆ ಹಿಂದಿನ ವೃಶ್ಚಿಕ ಸಂಕ್ರಮಣದಂದು ಗರಡಿಯಲ್ಲಿ ಬಂಟ ಶಿವರಾಯರ ಸನ್ನಿಧಿಯಲ್ಲಿ ದರ್ಶನ ಸೇವೆ ಮೂಲಕ ಪ್ರಸಾದ ತೆಗೆದು ಕಂಬಳಕ್ಕೆ ದಿನ ನಿಗದಿ ಮಾಡುವುದು ವಾಡಿಕೆ. ಕಂಬಳಕ್ಕೆ ದಿನ ನಿಗದಿಯಾದ ಬಳಿಕ ಗರಡಿಯ ಹಾಲಬ್ಬಕ್ಕೆ ದಿನ ನಿಗದಿ ಮಾಡುತ್ತಾರೆ. ಸಂಪ್ರದಾಯದ ಜತೆಗೆ ವಿವಿಧ ವಿಭಾಗಗಳ ಸ್ಪರ್ಧೆಯೂ ನಡೆಯುತ್ತದೆ.

Advertisement

8ನೇ ಶತಮಾನದ ಮೂಡುಬೆಟ್ಟು ಕಂಬಳ
ಮಲ್ಪೆ: ಹರಕೆ ರೂಪದಲ್ಲಿ ನಡೆಯುವ ಕಂಬಳಕಟ್ಟದ ಸಿರಿಕುಮಾರ ದೈವಗಳ ಕಂಬಳವು 8ನೇ ಶತಮಾನದಿಂದ ನಡೆದುಕೊಂಡು ಬಂದಿರುವ ಬಗ್ಗೆ ಇತಿಹಾಸ ಇದೆ. ಕೊಡವೂರು ಮೂಡುಬೆಟ್ಟು ಕಂಬಳಮನೆ ಕುಟುಂಬಸ್ಥರು ಗ್ರಾಮಸ್ಥರ ಸಹಕಾರದೊಂದಿಗೆ ಕಂಬಳ ನಡೆಸುತ್ತಿದ್ದು, ಈ ಬಾರಿ ಡಿ. 8ರಂದು ನಡೆಯಲಿದೆ.

ಬಾವಿಯಲ್ಲಿ ಬತ್ತದ ನೀರು
ಸತ್ಯನಾಪುರದ ಸಿರಿ ತನ್ನ ಪುತ್ರ ಕುಮಾರ ನೊಂದಿಗೆ ಇಲ್ಲಿನ ಮನೆಗೆ ಭೇಟಿ ನೀಡಿದ ಕತೆಯಿದ್ದು, ಕುಮಾರನಿಗೆ ಇಲ್ಲಿ ಗುಡಿ ಕಟ್ಟಲಾಗಿದೆ. ಮಗನಿಗೆ ಸ್ನಾನ ಮಾಡಿಸಲು ಸಿರಿ ಮಾಯಾಶಕ್ತಿಯಿಂದ ತನ್ನಲ್ಲಿರುವ ಗೆಜ್ಜೆ ಕತ್ತಿಯಿಂದ ತೋಡಿದ್ದು ಎಂದು ನಂಬಲಾಗಿರುವ ಬಾವಿ ಈಗಲೂ ಇದೆ. ಈ ಬಾವಿಯಲ್ಲಿರುವ ನೀರು ಯಾವ ಸಂದರ್ಭದಲ್ಲೂ ಬತ್ತಿಲ್ಲ ಹಾಗೂ ಇದರಲ್ಲಿ ಈ ವರೆಗೆ ಕಪ್ಪೆಯೂ ಕಂಡುಬಂದಿಲ್ಲ.

ಗಂಧ ಪ್ರಸಾದ
ಸಂಪ್ರದಾಯಬದ್ಧವಾದ ಕಂಬಳವಾದ್ದರಿಂದ ಬಹು ಮಾನ, ಗೌರವಧನ ನೀಡಲಾಗುತ್ತಿಲ್ಲ. ಇವರಿಗೆ ಗಂಧ ಪ್ರಸಾದ ನೀಡಿ ಹರಸಲಾಗುತ್ತದೆ. ಬ್ರಿಟಿಷರ ಕಾಲದಲ್ಲಿ ಈ ಕಂಬಳಕ್ಕೆ ತಸ್ತೀಕು ಬರುತ್ತಿದ್ದುದಕ್ಕೆ ಲಿಖೀತ ದಾಖಲೆ ಇದೆ.

ಕಲ್ಲಾದ ಕೋಣಗಳು
ಇಲ್ಲಿನ ಕಂಬಳವನ್ನು ಅಪಹಾಸ್ಯ ಮಾಡಿದವರ ಕೋಣಗಳು ಕಲ್ಲಾಗಿವೆ ಎಂಬುದನ್ನು ಸಮೀಪದ ಪುತ್ತೂರಿನ ಎರು ಮಾಯಾಗುಂಡಿ ಎಂಬಲ್ಲಿ ಕಾಣ ಬಹುದು. ಅಲ್ಲಿಯೂ ಸಿರಿಯ ಸಾನ್ನಿಧ್ಯದ ಅಂಶ ಇರುವುದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಿದೆ. ಪ್ರಸ್ತುತ ಕಂಬಳ ಮನೆಯ ಯಜಮಾನ ಜಗದೀಶ ಶೆಟ್ಟಿ ಅವರು ಕಂಬಳದ ನೇತೃತ್ವ ವಹಿಸಿಕೊಂಡಿದ್ದಾರೆ.

7 ಶತಮಾನಗಳ ತೋನ್ಸೆ ಪಡುಮನೆ ಕಂಬಳ
ಮಲ್ಪೆ: ಸುಮಾರು 17ನೇ ಶತಮಾನದಿಂದ ತೋನ್ಸೆ ಪ್ರದೇಶದ ಸುತ್ತಮುತ್ತಲಿನ ಪ್ರದೇಶ ಜೈನರ ಆಡಳಿತದಲ್ಲಿತ್ತು. ಮಕ್ಕಳಿಲ್ಲದ ಕಾರಣ ಜೈನರು ತಮ್ಮ ಆಸ್ತಿ, ದೈವ -ದೇವರಿಗೆ ವಾರಸುದಾರರಾಗಿ ಮೂಡುತೋನ್ಸೆಯ ಮಹಾಬಲ ಶೆಟ್ಟಿ ಅವರನ್ನು ನೇಮಿಸಿ ತೀರ್ಥಯಾತ್ರೆಗೆ ಹೋದರು ಎನ್ನಲಾಗಿದೆ. ಇಂದಿಗೂ ಇಲ್ಲಿನ ಮಹಾಬಲ- ಪೂವಮ್ಮನವರು ಹಾಕಿಕೊಟ್ಟ ದಾರಿಯಲ್ಲಿ ಕಂಬಳ, ಭೂತಾರಾಧನೆ, ಶಿಸ್ತುಬದ್ಧವಾಗಿ ನಡೆಯುತ್ತಿದೆ. ಈ ಬಾರಿ ಡಿ. 8ರಂದು ಜರಗಲಿದೆ.

ಹಿರಿಯರು ಹೇಳುವ ಪ್ರಕಾರ ಇಲ್ಲಿನ ಕಂಬಳವು ಸುಮಾರು 700 ವರ್ಷಗಳಿಂದ ಗ್ರಾಮದ ದೈವ ಬೊಬ್ಬರ್ಯನ ಶ್ರೀರಕ್ಷೆ ಹಾಗೂ ಕುಲದೇವರಾದ ಗಣಪತಿಯ ಅನುಗ್ರಹದಿಂದ ಸಾಂಗವಾಗಿ ನಡೆದುಕೊಂಡು ಬಂದಿದೆ. ಇಲ್ಲಿನ ಕಂಬಳದ ಉದ್ದೇಶ ಜನರನ್ನು ಒಗ್ಗೂಡಿಸುವ, ಏಕಮತ, ಮನೋರಂಜನೆ, ದೈವ – ದೇವರ ಆರಾಧನೆಯಾಗಿದೆ.

ಬೇಸಾಯಕ್ಕೆ ಉಪಯುಕ್ತವಾದ ಕೋಣ ವನ್ನು ಚಳಿಗಾಲದಲ್ಲಿ ಕಡಲ ಸೀಮೆಯ ಜನರ ಮನೋರಂಜನೆ, ಸಂಪ್ರದಾಯಕ್ಕೆ ಅನುಗುಣ ವಾಗಿ ಊರ ಮನೆತನದವರು ಕಂಬಳವನ್ನು ನಡೆಸಿಕೊಂಡು ಬಂದಿದ್ದಾರೆ. ಕೋಣಗಳನ್ನು ಮಕ್ಕಳಂತೆ ಸಾಕಿ, ಚೆನ್ನಾಗಿ ಪಳಗಿಸಿ ಮುಗ್ಧ ಪ್ರಾಣಿಗಳೂ ಮನುಷ್ಯ ಜನಾಂಗಕ್ಕಿಂತ ಕಮ್ಮಿಯಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

ಇಲ್ಲಿನ ಕಂಬಳದಲ್ಲಿ ಕೋಣಗಳ ಸ್ಪರ್ಧೆ ಯಾದರೂ ಇದು ಊರಿನ ಜನರ ಏಕತೆಯ ಸಂಕೇತ. ತೋನ್ಸೆ ಪಡುಮನೆಯ ಕಂಬಳವು ಪಡುಮನೆಯವರು ಧಾರ್ಮಿಕವಾಗಿ ನಡೆಸಿ ಕೊಂಡು ಬಂದರೂ, ಈ ಕಂಬಳ ಊರಿನ ಜನರಿಗೆ ಹಬ್ಬವಾಗಿದೆ.

ದೇವರ ಸೇವೆಯ ನಡೂರು ಕಂಬಳ
ಬ್ರಹ್ಮಾವರ: ನಡೂರು ಕಂಬಳಗದ್ದೆ ಮನೆಯಲ್ಲಿ ಅನಾದಿ ಕಾಲದಿಂದಲೂ ಶ್ರೀ ಬ್ರಹ್ಮಾ ಧೀನ ನಂದಿಕೇಶ್ವರ ಚಿಕ್ಕುಸಪರಿವಾರ ಕುಲದೇವರ ಸೇವೆಯಾಗಿ ಕಂಬಳ ನಡೆದು ಬಂದಿದ್ದು, ಈ ಬಾರಿ ಡಿ.8ರಂದು ಜರಗಲಿದೆ.

ಬೆಳಗ್ಗೆ ತುಳಸಿ ಪೂಜೆ, ನಾಗನ ಪೂಜೆ, ಸ್ವಾಮಿ ಪೂಜೆ ನಡೆದು ಮನೆಯ ಕೋಣಗಳನ್ನು ಶೃಂಗರಿಸಿದ ಡೋಲು ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕುಲದೇವರ ಸಾನ್ನಿಧ್ಯಕ್ಕೆ ಹೋಗಿ ಪೂಜೆ ಸಲ್ಲಿಸಲಾಗುವುದು. ಪೂಜೆ ಮುಗಿಸಿ ಕಂಬಳ ಗದ್ದೆಗೆ ಇಳಿಸಲಾಗುವುದು. ಮಧ್ಯಾಹ್ನ 3 ಗಂಟೆಯ ಬಳಿಕ ಇತರ ಕೋಣಗಳನ್ನು ಗದ್ದೆಗೆ ಇಳಿಸಲಾಗುವುದು.

ಕೊನೆಗೆ ಮತ್ತೂಮ್ಮೆ ಮನೆ ಕೋಣಗಳನ್ನು ದೀವಟಿಗೆ ಹಿಡಿದು ಗದ್ದೆಗೆ ಇಳಿಸಲಾಗುವುದು. ಕಂಬಳಕ್ಕೆ ಅಂತಿಮ ತೆರೆ ಬೀಳುವುದು ರಾತ್ರಿ ಸ್ವಾಮಿ ಸನ್ನಿ ಧಿಯ ಅಂಗಳದಲ್ಲಿ ಕಾಲುದೀಪ ಹಚ್ಚಿ ನರ್ತನ ಮುಗಿದ ಬಳಿಕ. ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಈ ಕಂಬಳದಲ್ಲಿ ಈಗ ಕೋಣಗಳ ಸ್ಪರ್ಧೆಯೂ ನಡೆಯುತ್ತಿದೆ. ಇಡೀ ಊರೇ ಜಾತ್ರೆಯಾಗಿ ಸಂಭ್ರಮಿಸುತ್ತದೆ.

ಮಿಯ್ಯಾರು ಕಂಬಳ ಮುಂದೂಡಿಕೆ
ಕಾರ್ಕಳ: ಕಂಬಳ ಕಾಶಿ ಎಂದೇ ಕರೆಯಲ್ಪಡುವ ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ ಜನವರಿಯಲ್ಲಿ ನಡೆಯಬೇಕಿದ್ದ ಲವ – ಕುಶ ಜೋಡುಕರೆ ಕಂಬಳವನ್ನು ಮುಂದೂಡಲಾಗಿದೆ ಎಂದು ಜಿಲ್ಲಾ  ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ತಿಳಿಸಿದ್ದಾರೆ.

2025ರ ಜ. 4ರಂದು ಮಿಯ್ಯಾರಿನಲ್ಲಿ ಕಂಬಳ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯಲಿರುವ ಕಾರಣದಿಂದ ಮುಂದೂಡಲಾಗಿದೆ.

ಹೊಕ್ಕಾಡಿಗೋಳಿ ಕಂಬಳಕ್ಕೆ ಮರು ದಿನಾಂಕ
ಡಿ.7ರಂದು ನಡೆಯಬೇಕಿದ್ದ ಹೊಕ್ಕಾಡಿಗೋಳಿ ಕಂಬಳವು ಮಳೆ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಇದೀಗ ಮಿಯ್ನಾರಿನ ದಿನವಾದ ಜ.4ರಂದು ಹೊಕ್ಕಾಡಿ ಗೋಳಿ ಕಂಬಳ ನಡೆಸಲು ಜಿಲ್ಲಾ ಸಮಿತಿ ಅನುಮತಿ ನೀಡಿದೆ ಎಂದು ದೇವಿಪ್ರಸಾದ್‌ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next