Advertisement
“ಸಿನಿಮಾ ಮಾಡದಿರಬಹುದು. ಆದರೆ, ಬಹಳ ಬಿಝಿ ಇದ್ದೆ’ ಥಟ್ಟಂತ ಹೇಳಿದರು ಪ್ರೇಮ. ಅವರು ಮಾತಿಗೆ ಸಿಕ್ಕಿ ಅದ್ಯಾವ ಕಾಲವಾಗಿತ್ತೋ ನೆನಪಿಲ್ಲ. ಅದೊಂದು ದಿನ “ಫಸ್ಟ್ ಲವ್’ ಎಂಬ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಕ್ಕೆ ಚಾಮುಂಡೇಶ್ವರಿ ಸ್ಟುಡಿಯೋಗೆ ಪ್ರೇಮ ಬಂದಿದ್ದರು. ಟ್ರೇಲರ್ ಬಿಡುಗಡೆ ಮಾಡಿ, ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ಶುಭ ಕೋರಿದರು. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿ ವೇದಿಕೆ ಇಳಿದರು. ಪ್ರೇಮ ಮಾತಾಡಿದ್ದು ಆಗಲೇ. ಮೊದಲೇ ಹೇಳಿದಂತೆ ಅವರು ಮಾತಿಗೆ ಸಿಕ್ಕಿ ಬಹಳ ದಿನಗಳಾಗಿತ್ತು. ಈ ಗ್ಯಾಪ್‌ನಲ್ಲಿ ಅವರು ಏನು ಮಾಡುತ್ತಿದ್ದರು, ಯಾಕೆ ಚಿತ್ರರಂಗದಿಂದ ದೂರವಿದ್ದರು, ಅವರಿಗೆ ಅವಕಾಶಗಳು ಬರುತಿತ್ತಾ …? ಹೀಗೆ ಅವರನ್ನು ಕೇಳ್ಳೋಕೆ ಹಲವಾರು ಪ್ರಶ್ನೆಗಳು ಇದ್ದವು. ಸರಿ ಒಂದೊಂದನ್ನೇ ಅವರೆದುರು ಇಡಲಾಯಿತು.
“ನಂಗೆ ಒಂದೇ ತರಹದ ಚಿತ್ರಗಳನ್ನ, ಪಾತ್ರಗಳನ್ನ ಮಾಡೋಕೆ ಇಷ್ಟವಿಲ್ಲ. ವಿಭಿನ್ನವಾದ ಸಿನಿಮಾಗಳು ಮಾಡಬೇಕು ಅಂತ ಆಸೆ. ಆಗ ನನಗೆ ಅಂತಹ ಪಾತ್ರಗಳೇ ಸಿಗೋದು; ಇಷ್ಟವಾಗೋದು. ಅದಕ್ಕೇ ಕಂಟಿನ್ಯೂಸ್ ಆಗಿ ಮಾಡುತ್ತಿದ್ದೆ. ಈಗಲೂ ವಿಭಿನ್ನ ಪಾತ್ರಗಳು ಬಂದರೆ, ಅಭಿನಯಿಸೋಕೆ ನಾನು ಸಿದ್ಧ. ಜನ ದುಡ್ಡು ಕೊಟ್ಟು ಚಿತ್ರಮಂದಿರಕ್ಕೆ ಬಂದಾಗ, ಅವರಿಗೂ ಏನೋ ನಿರೀಕ್ಷೆ ಇರುತ್ತೆ. ಅವರ ಆಸೆಗೆ ಭಂಗ ತರೋಕೆ ನನಗೆ ಇಷ್ಟವಿಲ್ಲ. ಮಾಡಿದರೆ ವಿಭಿನ್ನವಾಗಿ ಏನಾದರೂ ಮಾಡಬೇಕು. ಅದೇ ನನ್ನ ಆಸೆ. ಈಗ ನೋಡಿ ಹಿಂದಿಯಲ್ಲಿ ಕಾಜೋಲ್, ಶ್ರೀದೇವಿ ಅವರೆಲ್ಲಾ ಎಷ್ಟು ವಿಭಿನ್ನವಾದ ಪಾತ್ರಗಳನ್ನು ಆಯ್ಕೆ ಮಾಡುತ್ತಿದ್ದಾರೆ. ನನಗೂ ಅದೇ ತರಹದ ಆಸೆ ಇದೆ. ಒಳ್ಳೆಯ ಪಾತ್ರ ಮಾಡಬೇಕು, ಆ ಪಾತ್ರಕ್ಕೆ ಜೀವ ತುಂಬಬೇಕು ಅಂತ. ಅಂತಹ ಪಾತ್ರ ಬಂದರೆ ಖಂಡಿತಾ ಮಾಡುತ್ತೀನಿ’ ಎನ್ನುವುದು ಅವರ ಅಭಿಪ್ರಾಯ.
Related Articles
“ಐ ನೀಡ್ ಇಂಟಲೆಕುಯಲ್ ಡೈರೆಕ್ಟರ್- ಸಾಧಾರಣ ನಿರ್ದೇಶಕರು ಬೇಡ. ಕಥೆ ಬರೆಯುವಾಗಲೇ, ಈ ಪಾತ್ರವನ್ನ ಪ್ರೇಮ ಅವರೇ ಮಾಡಿದರೆ ಚೆನ್ನ ಅಂತ ಗೊತ್ತಾಗಬೇಕು. ಸುನೀಲ್ ಕುಮಾರ್ ದೇಸಾಯಿ, ಉಪೇಂದ್ರ ಎಲ್ಲರೂ ಪಾತ್ರ ಬರೆಯುವಾಗಲೇ, ಈ ಪಾತ್ರವನ್ನು ಮಾಡಬೇಕು ಎಂದು ನಿರ್ಧರಿಸೋರು. ಅವರಿಗೆ ನಾನು ಪಾತ್ರ ಮಾಡುತ್ತೀನಿ ಎಂಬ ನಂಬಿಕೆ ಇತ್ತು. ಅದೇ ತರಹದ ನಂಬಿಕೆ ಬೇರೆ ನಿರ್ದೇಶಕರಿಗೂ ಇರಬೇಕು. ಉದಾಹರಣೆಗೆ- “ಶಿಶಿರ’ ಕಥೆ ತಗೊಂಡು ಮಂಜು ಸ್ವರಾಜ್ ಬಂದಾಗ, “ನಾನು ಮಾಡಲ್ಲ, ನನಗೆ ಸೆಟ್ ಆಗಲ್ಲ, ಇದು ಹೋಗಲ್ಲ …’ ಅಂತ ಹೇಳಿದ್ದೆ. ಆದರೆ, ಅವರು ಬಿಡಲಿಲ್ಲ. 10 ಸಾರಿ ಬಂದು ಕನ್ವಿನ್ಸ್ ಮಾಡೋಕೆ ಪ್ರಯತ್ನಪಟ್ಟರು. ಅವರಿಗೆ ನಿರಾಶೆ ಮಾಡುವುದಕ್ಕೆ ನನಗೆ ಇಷ್ಟವಿರಲಿಲ್ಲ’ ಹಾಗಾಗಿ ಒಪ್ಪಿಕೊಂಡೆ ಎನ್ನುತ್ತಾರೆ ಪ್ರೇಮ.
Advertisement
ಹಾಗಂತ ದೊಡ್ಡ ನಿರ್ದೇಶಕರ ಚಿತ್ರದಲ್ಲೇ ನಟಿಸಬೇಕು ಎಂಬ ಆಸೆ ಇಲ್ಲ ಎನ್ನುವುದು ಪ್ರೇಮ ಅವರ ಮಾತಿನ ಅರ್ಥ. “ಇಲ್ಲಿ ದೊಡ್ಡವರು, ಚಿಕ್ಕವರು ಎಂಬ ಪ್ರಶ್ನೆ ಬರಲ್ಲ. ಸಿನಿಮಾ ಅನ್ನೋದು ಯಾರು ಬೇಕಾದರೂ ಮಾಡಬಹುದು. ಆದರೆ, ಒಂದೊಳ್ಳೆಯ ಚಿತ್ರಕ್ಕೆ ಟೇಸ್ಟು, ಪ್ಯಾಶನ್ ಎಲ್ಲವೂ ಬೇಕು. ಬರೆಯುವಾಗಲೇ ಏನಾದರೂ ವಿಭಿನ್ನವಾಗಿ ಬರೆದಿರಬೇಕು ಮತ್ತು ಪಾತ್ರ ಕೇಳುತ್ತಿದ್ದಂತೆ, ಇವರೇನೋ ವಿಶೇಷವಾಗಿ ಬರೆದಿದ್ದಾರೆ ಅಂತ ನಮಗೂ ಅನಿಸಬೇಕು. ಅದು ಆಗ್ತಿಲ್ಲ. ಎಷ್ಟೋ ಬಾರಿ ಕಥೆ ಕೇಳುವಾಗಲೇ ಗೊತ್ತಾಗಿಬಿಡುತ್ತದೆ. ಆಗ ನಿರಾಕರಿಸದೆ ಬೇರೆ ದಾರಿಯೇ ಇಲ್ಲ. ಆ ತರಹದ ಅದೆಷ್ಟು ಚಿತ್ರಗಳನ್ನು ನಿರಾಕರಿಸಿದ್ದೀನಿ ಗೊತ್ತಾ?’ ಎಂದು ಪ್ರಶ್ನಿಸಿದರು ಪ್ರೇಮ. ಅದಕ್ಕೆ ಉತ್ತರವಾಗಿ ಅವರೇ ಮಾತು ಮುಂದುವರೆಸಿದರು-
“ಯಾವುದೋ ಕಥೆ ಒಪ್ಪಿಕೊಂಡು, ನಾನು ಈಗಲೂ ಬಿಝಿಯಾಗಬಹುದು. ಅದು ದೊಡ್ಡ ವಿಷಯವೇ ಅಲ್ಲ. ಆದರೆ, ನನಗೆ ಅದು ಇಷ್ಟವಿಲ್ಲ. ವರ್ಷಕ್ಕೆ ಒಂದೇ ಚಿತ್ರ ಮಾಡಿದರೂ, ಒಂದೇ ಕಥೆ ಒಪ್ಪಿದರೂ, ಅದು ಚೆನ್ನಾಗಿರಬೇಕು ಮತ್ತು ತೃಪ್ತಿ ಕೊಡಬೇಕು ಎಂದು ಬಯಸುವವಳು ನಾನು. ಅಮೀರ್ ಖಾನ್ ಎರಡು ವರ್ಷಕ್ಕೊಂದು ಚಿತ್ರ ಮಾಡಿದರೂ, ತಮಗೆ ಖುಷಿಯಾಗುವ ಮತ್ತು ತೃಪ್ತಿಯಾಗುವ ಪಾತ್ರಗಳನ್ನೇ ಯಾಕೆ ಮಾಡುತ್ತಾರೆ. ಎರಡು ಮಕ್ಕಳ ತಾಯಿಯಾಗಿದ್ದರೂ ಕಾಜೋಲ್ ಹೇಗೆ ವಿಭಿನ್ನ ಚಿತ್ರಗಳನ್ನು ಮಾಡುತ್ತಾರೆ? ಇಲ್ಲಿ ಬರವಣಿಗೆ ಮುಖ್ಯ. ಅವರಿಗೋಸ್ಕರ ಪಾತ್ರ ಬರೆಯುವವರು ಇದ್ದಾರೆ… ನಮ್ಮಲ್ಲಿ ಯಾಕೆ ಅದು ಸಾಧ್ಯವಿಲ್ಲ. ವಿಭಿನ್ನ ಅಂದರೆ ಯಾರೂ ಮಾಡದ, ಯಾರೂ ಬರೆಯದ ಪಾತ್ರವನ್ನು ಮಾಡಬೇಕು ಅಂತ ನಾನು ಹೇಳುತ್ತಿಲ್ಲ. ಒಂದು ರೇಂಜ್‌ಗಾದರೂ ವಿಭಿನ್ನತೆ ಇರಬೇಕಲ್ಲವಾ? ನನಗೇನೂ ಸಮಸ್ಯೆ ಇಲ್ಲ. ಒಳ್ಳೆಯ ಪಾತ್ರಕ್ಕೆ ಕಾಯುತ್ತೀನಿ. ಬೇಕಾದರೆ, ಸುಮ್ಮನೆ ಹೀಗೆ ಕೂತಿರ್ತಿನಿ. ಆದರೆ, ಯಾವುದೋ ಒಂದು ಪಾತ್ರ ಆದರೆ ಸಾಕು ಅಂತ ಪಾತ್ರ ಮಾಡುವುದಿಲ್ಲ; ಒಪ್ಪಿಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿ ಹೊರಟರು ಪ್ರೇಮ. ಬರಹ: ಚೇತನ್; ಚಿತ್ರಗಳು: ಮನು ಮತ್ತು ಸಂಗ್ರಹ