Advertisement

ಪಾಯಲ್‌ಯಾ!

02:46 PM Jan 12, 2018 | |

ಸಿನೆಮಾ ತಾರೆಯಾಗಬೇಕೆಂಬ ಹಂಬಲದಲ್ಲಿ ನಿತ್ಯ ಹಲವು ಮಂದಿ ಮನೆ ಬಿಟ್ಟು ಮುಂಬಯಿಗೆ ಓಡಿ ಬರುತ್ತಾರೆ. ಆದರೆ, ಈ ಪೈಕಿ ಯಶಸ್ವಿಯಾಗುವವರು ಎಲ್ಲೋ ಒಂದೆರಡು ಮಂದಿ ಮಾತ್ರ. ಉಳಿದವರು ಈ ಮಾಯಾನಗರಿಯಲ್ಲಿ ಕಳೆದು ಹೋಗುತ್ತಾರೆ. ಸಿನೆಮಾ ತಾರೆಯಾಗುವುದು ಬಿಡಿ ಲೈಟ್‌ಬಾಯ್‌ ಆಗುವ ಅವಕಾಶವೂ ಹೆಚ್ಚಿನವರಿಗೆ ಸಿಗುವುದಿಲ್ಲ. ಈ ರೀತಿ ಮನೆ ಬಿಟ್ಟು ಓಡಿ ಬಂದು ಯಶಸ್ವಿಯಾಗಿರುವ ವಿರಳ ನಟಿಯರ ಸಾಲಿಗೆ ಸೇರುವವಳು ಪಾಯಲ್‌ ಘೋಶ್‌. 

Advertisement

ಕೊಲ್ಕತಾದಲ್ಲಿ ಶಾಲೆ ಕಲಿಯುತ್ತಿರುವಾಗಲೇ ಪಾಯಲ್‌ಗೆ ನಟಿಯಾಗಬೇಕೆಂಬ ಹಂಬಲ ಮೊಳಕೆಯೊಡೆದಿತ್ತು. 17ನೆಯ ವರ್ಷದಲ್ಲಿ ಬಿಬಿಸಿಯ ಒಂದು ಟೆಲಿಫಿಲ್ಮ್ನಲ್ಲಿ ನಟಿಸುವ ಅವಕಾಶ ಸಿಕ್ಕಿದ ಬಳಿಕ ಅವಳ ಹಂಬಲ ಇನ್ನಷ್ಟು ಬಲವಾಯಿತು. ಆ ಬಳಿಕ ಕೆನಡಾದ ಒಂದು ಸಿನೆಮಾದಲ್ಲೂ ಚಿಕ್ಕದೊಂದು ಪಾತ್ರ ಸಿಕ್ಕಿತು. ಆದರೆ, ಮನೆಯವರಿಗೆ ಪಾಯಲ್‌ ನಟಿಯಾಗುವುದು ಇಷ್ಟವಿರಲಿಲ್ಲ. ಮನೆಯಲ್ಲೇ ಇದ್ದರೆ ಕನಸು ನನಸಾಗುವುದು ಸಾಧ್ಯವಿಲ್ಲ ಎಂದು ಅರಿವಾದ ಬಳಿಕ ಪಾಯಲ್‌ ಒಂದು ರಾತ್ರಿ ಯಾರಿಗೂ ಹೇಳದೆ ಮುಂಬಯಿಯ ರೈಲೇರಿದಳು. ಹಾಗೇ ಬಂದವಳಿಗೆ ರತ್ನಗಂಬಳಿಯ ಸ್ವಾಗತವೇನೂ ಸಿಗಲಿಲ್ಲ. ಬಹಳಷ್ಟು ಕಷ್ಟಪಟ್ಟ ಬಳಿಕ ದಕ್ಷಿಣದ ನಿರ್ದೇಶಕರ ಕಣ್ಣಿಗೆ ಬಿದ್ದಳು. 

ತೆಲುಗು ಮತ್ತು ತಮಿಳಿನಲ್ಲಿ ಅವಕಾಶ ಸಿಕ್ಕಿದ್ದೇ ತಡ ಪಾಯಲ್‌ ಅದೃಷ್ಟ ಖುಲಾಯಿಸಿತು. ಕನ್ನಡದಲ್ಲೂ ಎರಡು ಚಿತ್ರಗಳಲ್ಲಿ ನಟಿಸಿದ ಬಳಿಕ ಅವಳಿಗೆ ಬಾಲಿವುಡ್‌ ಬಾಗಿಲು ತೆರೆದಿದೆ. ಫ್ರೀಡಂ ಮತ್ತು ಪಟೇಲ್‌ ಕಿ ಪಂಜಾಬಿ ಶಾದಿ ಎಂಬೆರಡು ಚಿತ್ರಗಳಲ್ಲಿ ಪಾಯಲ್‌ ನಟಿಸುತ್ತಿದ್ದಾಳೆ. ಈ ಪೈಕಿ ಫ್ರೀಡಂ ಶೂಟಿಂಗ್‌ ಮುಗಿದಿದ್ದು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಪಟೇಲ್‌ ಕಿ ಪಂಜಾಬಿ ಶಾದಿಯಲ್ಲಿ ಪರೇಶ್‌ ರಾವಲ್‌ ಮತ್ತು ರಿಷಿ ಕಪೂರ್‌ ಅವರಂತಹ ಹಿರಿಯ ನಟರ ಜತೆಗೆ ನಟಿಸಲು ಅವಕಾಶ ಸಿಕ್ಕಿರುವುದಕ್ಕೆ ಪಾಯಲ್‌ ಫ‌ುಲ್‌ ಖುಷಿಯಾಗಿದ್ದಾಳೆ. ಇದು ಜೀವಮಾನದಲ್ಲಿ ಎಂದೂ ಮರೆಯಲಾಗದ ಅನುಭವ ಎನ್ನುತ್ತಿದ್ದಾಳೆ ಪಾಯಲ್‌. 

ಹಲವು ಭಾಷೆಗಳಲ್ಲಿ ನಟಿಸಿದ್ದರೂ ಪಾಯಲ್‌ಗೆ ಈಗಲೂ ಸ್ಪಷ್ಟವಾಗಿ ಮಾತನಾಡಲು ಗೊತ್ತಿರುವುದು ಬಂಗಾಲಿ ಮಾತ್ರವಂತೆ. ಹಿಂದಿಯಲ್ಲೂ ಹೇಗಾದರೂ ಸುಧಾರಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ತಮಿಳು, ತೆಲುಗು ಮತ್ತು ಕನ್ನಡ ಕಬ್ಬಿಣದ ಕಡಲೆಯಾಯಿತಂತೆ. ಪಟೇಲ್‌ ಕಿ ಪಂಜಾಬಿ ಶಾದಿಯಲ್ಲಿ ಅವಳದ್ದು ಗುಜರಾತಿ ಯುವತಿಯ ಪಾತ್ರ. ಹೀಗಾಗಿ, ಗುಜರಾತಿಯನ್ನು ಕಲಿಯುವುದು ಅನಿವಾರ್ಯವಾಯಿತಂತೆ. ಸಿನೆಮಾ ರಂಗದಲ್ಲಿ ಅದೃಷ್ಟವಿದ್ದರೆ ಮಾತ್ರ ಗೆಲ್ಲಬಹುದು ಎನ್ನುವುದು ಅವಳ ಅನುಭವದ ಮಾತು. ಎಷ್ಟೇ ಪ್ರತಿಭೆ, ಚೆಲುವು ಇರಲಿ, ಅಂತಿಮವಾಗಿ ಅದೃಷ್ಟವಿದ್ದರೆ ಮಾತ್ರ ಅವಕಾಶಗಳು ಸಿಗುತ್ತದೆ ಎನ್ನುವುದನ್ನು ಅವಳು ಕಂಡುಕೊಂಡಿದ್ದಾಳೆ. 

Advertisement

Udayavani is now on Telegram. Click here to join our channel and stay updated with the latest news.

Next