Advertisement

ಮಯೂರಿ ಎಂದರೆ ಎಲ್ರಿಗೂ ಗೊತ್ತುರೀ!

09:47 AM Jun 17, 2018 | |

ಕನ್ನಡದಲ್ಲಿ ಇವತ್ತು ಅತ್ಯಂತ ಬಿಝಿ ನಟಿ ಯಾರು ಎಂದು ಹುಡುಕುತ್ತ ಹೊರಟರೆ, ಸಿಗುವ ಮೊದಲ ಹೆಸರು ಮಯೂರಿಯದು. ಅಶ್ವಿ‌ನಿ ನಕ್ಷತ್ರ ಧಾರಾವಾಹಿಯ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟ ಮಯೂರಿ, ನಂತರದ ದಿನಗಳಲ್ಲಿ  ಕೃಷ್ಣಲೀಲಾ  ಚಿತ್ರದ ಮೂಲಕ ನಾಯಕಿಯಾಗಿ ಹಿರಿತೆರೆಗೆ ಬಂದರು. ಆ ನಂತರ  ಕರಿಯ 2,  ನಟರಾಜ ಸರ್ವೀಸ್‌, ಇಷ್ಟಕಾಮ್ಯ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಆ ಯಾವ ಚಿತ್ರಗಳೂ ದೊಡ್ಡ ಹಿಟ್‌ ಆಗದಿದ್ದರೂ, ಆ ಚಿತ್ರಗಳ ಸೋಲಿನಿಂದ ಮಯೂರಿಗೆ ಯಾವ ಸಮಸ್ಯೆಯೂ ಆಗಲಿಲ್ಲ ಎನ್ನುವುದು ವಿಶೇಷ. ಚಿತ್ರಗಳು ಸೋತರೂ, ಮಯೂರಿಗೆ ಹಲವು ಅವಕಾಶಗಳು ಹುಡುಕಿಕೊಂಡು ಬಂದು, ಸದ್ಯ ಅವರ ಕೈಯಲ್ಲಿ ಆರು ಸಿನಿಮಾಗಳಿವೆ. ಆರು ಸಿನಿಮಾಗಳಷ್ಟೇ ಅಲ್ಲ, ಆರರಲ್ಲೂ ವಿಭಿನ್ನವಾದ ಪಾತ್ರಗಳು ಅವರಿಗೆ ಸಿಕ್ಕಿವೆಯಂತೆ. ಇದೆಲ್ಲದರಿಂದ ಹುಬ್ಬಳ್ಳಿ ಹುಡುಗಿ ಮಯೂರಿ ಖುಷಿಯಾಗಿರೋದಂತೂ ಸುಳ್ಳಲ್ಲ.

Advertisement

ಈ ಕುರಿತು ಮಾತನಾಡುವ ಅವರು, “ಬಹಳ ಖುಷಿಯಾಗಿದ್ದೇನೆ. ಚಿತ್ರರಂಗ ನನ್ನನ್ನು ಗುರುತಿಸಿದೆ. ಒಳ್ಳೆಯ ಅವಕಾಶಗಳನ್ನು ನೀಡುತ್ತಿದೆ. ಹುಬ್ಬಳ್ಳಿಯಿಂದ ಬಂದ ಹುಡುಗಿ ನಾನು. ಕನ್ನಡ ಸಿನಿಮಾಗಳನ್ನು ಪ್ರೀತಿಸುವವರ ಸಂಖ್ಯೆ ಅಲ್ಲಿ ಹೆಚ್ಚಿದೆ. ಈಗ ನನಗೂ ಚಿತ್ರರಂಗದಲ್ಲಿ ಬೆಳೆಯುವ ಅವಕಾಶ ಸಿಕ್ಕಿರೋದು ಖುಷಿಕೊಟ್ಟಿದೆ. ಸಾಮಾನ್ಯವಾಗಿ ಕಿರುತೆರೆಯಿಂದ ಬಂದವರಿಗೆ ಹಿರಿತೆರೆಯಲ್ಲಿ ಅವಕಾಶಗಳು ಸಿಗುವುದಿಲ್ಲ ಎಂಬ ಮಾತಿದೆ. ಆ ಮಾತನ್ನು ನಾನು ಒಪ್ಪಲ್ಲ. ನಾನು ಕೂಡಾ ಕಿರುತೆರೆಯಿಂದಲೇ ಬಂದವಳು. ನನಗೆ ಕೈ ತುಂಬಾ ಅವಕಾಶಗಳಿವೆ’ ಎನ್ನುತ್ತಾರೆ ಅವರು.

ಮೊದಲೇ ಹೇಳಿದಂತೆ ಮಯೂರಿ ಆರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 8 ಎಂಎಂ, ನನ್ನ ಪ್ರಕಾರ, ಆಟಕ್ಕುಂಟು ಲೆಕ್ಕಕ್ಕಿಲ್ಲ, ರುಸ್ತುಂ, ಮೌನಂ ಹಾಗೂ ಸಿಗ್ನೇಚರ್‌ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಈಗಾಗಲೇ ನನ್ನ ಪ್ರಕಾರ, 8 ಎಂಎಂ, ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರಗಳ ಚಿತ್ರೀಕರಣ ಮುಗಿದಿದೆ. ರುಸ್ತುಂ, ಮೌನಂ ಹಾಗೂ ಸಿಗ್ನೇಚರ್‌ ಚಿತ್ರಗಳು ಆರಂಭವಾಗಿವೆ. ಕಳೆದ ವರ್ಷ ಮಯೂರಿ ಅಭಿನಯದ ಒಂದೇ ಒಂದು ಚಿತ್ರ ಬಿಡುಗಡೆಯಾಗಿತ್ತು. ಆದರೆ, ಈ ವರ್ಷ ನಾಲ್ಕೈದು ಸಿನೆಮಾಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. “ಕಳೆದ ವರ್ಷ ಕರಿಯ -2 ಬಿಟ್ಟರೆ ಬೇರೆ ಯಾವ ಸಿನೆಮಾಗಳು ಬಿಡುಗಡೆಯಾಗಿರಲಿಲ್ಲ. ಆದರೆ, ಈ ವರ್ಷ ಹಾಗಾಗುವುದಿಲ್ಲ. 8 ಎಂಎಂ, ಆಟಕ್ಕುಂಟು ಲೆಕ್ಕಕ್ಕಿಲ್ಲ, ನನ್ನ ಪ್ರಕಾರ ಚಿತ್ರಗಳು ಈ ವರ್ಷವೇ ತೆರೆಕಾಣಲಿವೆ’ ಎಂದು ಸ್ಪಷ್ಟಪಡಿಸುತ್ತಾರೆ ಅವರು.

ಈ ಆರು ಚಿತ್ರಗಳನ್ನು ಒಪ್ಪಿಕೊಂಡ ಕುರಿತು ಮಾತನಾಡುವ ಅವರು, “ಅಭಿನಯಕ್ಕೆ ಅವಕಾಶವಿರುವ ಪಾತ್ರಗಳೇ ಹುಡುಕಿಕೊಂಡು ಬರುತ್ತಿವೆ. ನನ್ನ ಬಳಿ ಬರುವ ಬಹುತೇಕ ನಿರ್ದೇಶಕರು- ನಿಮ್ಮ ಈ ಹಿಂದಿನ ಸಿನೆಮಾ ನೋಡಿ ನಿಮ್ಮನ್ನು ಆಯ್ಕೆ ಮಾಡಿಕೊಂಡೆವು-ಎನ್ನುತ್ತಾರೆ. ಕಥೆ ಹಾಗೂ ನನ್ನ ಪಾತ್ರ ಇಷ್ಟವಾದರೆ ಮಾತ್ರ ಒಪ್ಪುತ್ತೇನೆ. ಒಮ್ಮೆ ಈ ಅವಕಾಶವನ್ನು ಮಿಸ್‌ ಮಾಡಿದರೆ ಮತ್ತೆ ಸಿಗುತ್ತೋ ಗೊತ್ತಿಲ್ಲ” ಎನ್ನುವುದು ಮಯೂರಿ ಅಭಿಪ್ರಾಯ.

ಇನ್ನು ಮಯೂರಿ ಒಪ್ಪಿರುವ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದರಲ್ಲಿ ಒಬ್ಬರಿಗಿಂತ ಜಾಸ್ತಿ ಹೀರೋಯಿನ್‌ಗಳಿರುವುದು ಗಮನಕ್ಕೆ ಬರುತ್ತದೆ. ಆದರೆ, ಈ ಬಗ್ಗೆ ಮಯೂರಿಗೆ ಯಾವುದೇ ಬೇಸರವಿಲ್ಲ. “ನನಗೆ ಕಥೆ ಹಾಗೂ ನನ್ನ ಪಾತ್ರ ಅಷ್ಟೇ ಮುಖ್ಯ. ಮತ್ತೂಬ್ಬ ನಾಯಕಿ ಇದ್ದರೂ, ಅವರ್ಯಾರು, ಅವರ ಪಾತ್ರವೇನು ಎಂಬುದನ್ನು ಕೇಳ್ಳೋಕೆ ಹೋಗುವುದಿಲ್ಲ. ನನಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುವುದಷ್ಟೇ ನನ್ನ ಕೆಲಸ’ ಎಂದು ಸ್ಪಷ್ಟಪಡಿಸುತ್ತಾರೆ.

Advertisement

ಈ ಮ‚ಧ್ಯೆ ಕಿರುತೆರೆಯಿಂದ ಅವರಿಗೆ ಸಾಕಷ್ಟು ಅವಕಾಶಗಳು ಬರುತ್ತಿವೆಯಂತೆ. ಅದರಲ್ಲೂ ಹಿಂದಿ ಹಾಗೂ ತೆಲುಗು ಧಾರಾವಾಹಿಗಳಿಂದಲೂ ಕರೆ ಬಂದಿವೆಯಂತೆ. ಆದರೆ, ಬಿಝಿ ಇರುವ ಕಾರಣ ಒಪ್ಪಲಾಗುತ್ತಿಲ್ಲ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next