ಮುಂಬೈ: ಬಾಲಿವುಡ್ ನಲ್ಲಿ ತಾರಾ ಸಮರ ತಾರಕಕ್ಕೇರಿದ್ದು, ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿರುವ ಬಾಲಿವುಡ್ ನಟಿ ಇದೀಗ ಅನುರಾಗ್ ಕಶ್ಯಪ್ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಕುರಿತು ನಟಿಯ ವಕೀಲರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, “ಐಪಿಸಿ ಸೆಕ್ಷನ್ 376, 354, 341, 342 ರ ಅಡಿಯಲ್ಲಿ ಅತ್ಯಾಚಾರ, ಸಂಯಮ ಮೀರಿ ವರ್ತನೆ, ಮಹಿಳೆಯರ ನಮ್ರತೆಯನ್ನು ಮೀರಿದ ಅಪರಾಧಕ್ಕಾಗಿ ಲಿಖಿತ ದೂರು ದಾಖಲಿಸಲಾಗಿದೆ ಎಂದಿದ್ದಾರೆ.
ಅನುರಾಗ್ ಕಶ್ಯಪ್ ಈ ಹಿಂದೆ ತಮ್ಮ ವಿರುದ್ಧದ ಲೈಂಗಿಕ ದುರ್ನಡತೆ ಆರೋಪಗಳನ್ನು ಸರಣಿ ಟ್ವೀಟ್ಗಳಲ್ಲಿ ನಿರಾಕರಿಸಿದ್ದರು. ನಂತರ, ಕಶ್ಯಪ್ ತಮ್ಮ ವಕೀಲೆ ಪ್ರಿಯಾಂಕಾ ಖಿಮಾನಿ ಮೂಲಕ ನೀಡಿದ ಹೇಳಿಕೆಯಲ್ಲಿ, ಆರೋಪಗಳನ್ನು ‘ಸುಳ್ಳು, ದುರುದ್ದೇಶಪೂರಿತ ಮತ್ತು ಅಪ್ರಾಮಾಣಿಕ’ ಎಂದು ಕರೆದಿದ್ದರು.
” ಅನುರಾಗ್ ಕಶ್ಯಪ್ ಅವರು ಇತ್ತೀಚೆಗೆ ಅವರ ವಿರುದ್ಧದ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪಗಳಿಂದ ತೀವ್ರವಾಗಿ ನೋವು ಅನುಭವಿಸಿದ್ದಾರೆ. ಈ ಆರೋಪಗಳು ಸಂಪೂರ್ಣವಾಗಿ ಸುಳ್ಳು, ದುರುದ್ದೇಶಪೂರಿತ ಮತ್ತು ಅಪ್ರಾಮಾಣಿಕವಾಗಿವೆ. #metoo ಆಂದೋಲನವನ್ನು ಇಲ್ಲಿ ದುರುಪಯೋಗಪಡಿಸಲಾಗಿದೆ ಎಂದು ವಕಿಲೇ ಪ್ರಿಯಾಂಕಾ ಖಿಮಾನಿ ತಿಳಿಸಿದ್ದಾರೆ.
#MeToo ಆರೋಪಗಳು ಕೇಳಿಬಂದ ಬೆನ್ನಲ್ಲೇ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಅನುರಾಗ್ ಕಶ್ಯಪ್ ಅವರನ್ನು ಬೆಂಬಲಕ್ಕೆ ನಿಂತಿದ್ದಾರೆ. ತಾಪ್ಸೀ ಪನ್ನು, ಸೈಯಾಮಿ ಖೇರ್, ರಾಮ್ ಗೋಪಾಲ್ ವರ್ಮಾ, ಅನುಭವ್ ಸಿನ್ಹಾ ಕೂಡ ಇದರ ವಿರುದ್ಧ ದ್ವನಿಯೆತ್ತಿದ್ದು #MeToo ಚಳವಳಿಯ ಪಾವಿತ್ರ್ಯತೆಯನ್ನು ಕಾಪಾಡಬೇಕು ಮತ್ತು ಅದನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ವಾದಿಸಿದ್ದಾರೆ.