“ತೋತಾಪುರಿ’, “ಆಪರೇಷನ್ ನಕ್ಷತ್ರ’, “ಸಿಂಗ’, “ರಂಗನಾಯಕಿ’, “ಬ್ರಹ್ಮಚಾರಿ’…
– ಇದು ಅದಿತಿ ಪ್ರಭುದೇವ ಎಂಬ ನವನಟಿ ಕೈಯಲ್ಲಿರುವ ಸಿನಿಮಾ. ಅದಿತಿ ಚಿತ್ರರಂಗಕ್ಕೆ ಬಂದಿದ್ದು “ಧೈರ್ಯಂ’ ಚಿತ್ರದ ಮೂಲಕ. ಈಗ ಅದಿತಿ ಕೈ ತುಂಬಾ ಸಿನಿಮಾವಿದೆ. ಅದಿತಿಯ ಮತ್ತೂಂದು ಚಿತ್ರ “ಬಜಾರ್’ ಬಿಡುಗಡೆಯಾದ ಬೆನ್ನಲ್ಲೇ, ಸಾಲು ಸಾಲು ಸಿನಿಮಾಗಳು ಅದಿತಿಯವರನ್ನು ಹುಡುಕಿಕೊಂಡು ಬಂದಿದೆ.
ಅದಕ್ಕೆ ಸರಿಯಾಗಿ ಅದಿತಿ ಕೂಡಾ ತಮಗೆ ಇಷ್ಟವಾದ ಸಿನಿಮಾಗಳನ್ನೆಲ್ಲಾ ಒಪ್ಪಿಕೊಂಡಿದ್ದಾರೆ. ಅದಕ್ಕೆ ಕಾರಣ ಪಾತ್ರ. ಒಂದಕ್ಕಿಂತ ಒಂದು ಚಿತ್ರದ ಪಾತ್ರ ಭಿನ್ನವಾದ ಕಾರಣ, ಅದಿತಿ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಗಾಂಧಿನಗರದಲ್ಲೊಂದು ಮಾತಿದೆ, ಕನ್ನಡದ ನಟಿಯರಿಗೆ ಅವಕಾಶವಿಲ್ಲ ಎಂದು. ಆದರೆ, ಅದಿತಿ ವಿಚಾರದಲ್ಲಿ ಆ ಮಾತು ಸುಳ್ಳಾಗಿದೆ. “ತೋತಾಪುರಿ’ಯಲ್ಲಿ ಮುಸ್ಲಿಂ ಹುಡುಗಿಯಾಗಿ ಕಾಣಿಸಿಕೊಂಡರೆ, “ಆಪರೇಷನ್ ನಕ್ಷತ್ರ’ದಲ್ಲಿ ಥ್ರಿಲ್ಲರ್ ಪಾತ್ರ ಸಿಕ್ಕಿದೆ. ಇನ್ನು “ಸಿಂಗ’ದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ಈ ನಡುವೆಯೇ ಅದಿತಿಗೆ ಪರಭಾಷೆಯಿಂದಲೂ ಅವಕಾಶ ಬರುತ್ತಿವೆಯಂತೆ. ಆದರೆ, ಅದಿತಿ ಮಾತ್ರ, “ನಮ್ಮ ಮನೆಯಲ್ಲೇ ಖುಷಿ ಇದೆ. ಪಕ್ಕದ್ಮನೆಗೆ ಹೋಗಿ ಎಷ್ಟು ಖುಷಿಯಾಗಿರಲು ಸಾಧ್ಯ ಹೇಳಿ? ಅಲ್ಲಿಗೆ ಹೋದರೆ ಸಿನಿಮಾ ಸಿಗುತ್ತೆ, ಹೆಚ್ಚೆಂದರೆ ಹಣ ಸಿಗುತ್ತೆ. ಅದೇ ಇಲ್ಲೇ ಇದ್ದರೆ ಎರಡೂ ಸಿಗುತ್ತೆ. ನನಗೆ ಕನ್ನಡವೇ ಕಂಫರ್ಟ್ ಎನ್ನುವ ಅದಿತಿ, “ನಾನು ಯಾವುದೇ ನಟನೆ ತರಬೇತಿ ಪಡೆದಿಲ್ಲ. ಧಾರಾವಾಹಿಯಲ್ಲಿ ನಟಿಸುವಾಗಲೇ ಒಂದೊಂದನ್ನೇ ಕಲಿತಿದ್ದೇನೆ. ಇಲ್ಲಿ ನಿತ್ಯವೂ ಕಲಿಯುತ್ತಿರಬೇಕು’ ಎನ್ನುತ್ತಾರೆ.
ಎಲ್ಲಾ ಸರಿ, ಅದಿತಿ ನಟನೆ ಬಿಟ್ಟು ಬೇರೇನು ಮಾಡ್ತಾರೆ ಎಂದು ನೀವು ಕೇಳಬಹುದು. ಅದಕ್ಕೂ ಅದಿತಿ ಉತ್ತರಿಸುತ್ತಾರೆ. “ನನಗೆ ಡ್ಯಾನ್ಸ್ ಗೊತ್ತು. ಕಾಲೇಜು ದಿನಗಳಲ್ಲೇ ಮಾಡುತ್ತಿದ್ದೆ. ಅದು ಬಿಟ್ಟರೆ, ಪುಸ್ತಕ ಓದುವುದೆಂದರೆ ನನಗಿಷ್ಟ. ಸಾಕಷ್ಟು ಕಾದಂಬರಿ, ಕಥೆ ಓದುತ್ತೇನೆ. ಶೂಟಿಂಗ್ ಇದ್ದರೆ ಹೋಗ್ತೀನಿ, ಕೆಲಸ ಮುಗಿದ ಕೂಡಲೇ ನೇರ ಮನೆಗೆ ಬರ್ತೀನಿ, ನಾನೆಲ್ಲೂ ಹೊರಗೆ ಹೋಗಲ್ಲ. ಯಾವ ಬರ್ತ್ ಡೇ ಕಾರ್ಯಕ್ರಮಕ್ಕೂ ಹೋದವಳಲ್ಲ.
ಮನೆಗೆ ಬಂದರೆ, ಪುಸ್ತಕ ಓದೋದಷ್ಟೇ ನನ್ನ ಕೆಲಸ. ಇನ್ನು, ಸಂಭಾವನೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ನನಗೆ ಕಥೆ, ಪಾತ್ರ, ತಂಡ ಇಷ್ಟವಾದರೆ ಸಾಕು ಸಂಭಾವನೆ ಡಿಮ್ಯಾಂಡ್ ಮಾಡೋದೇ ಇಲ್ಲ. ಆದರೂ, ನನಗೆ ನನ್ನದೇ ಆದ ಖರ್ಚು-ವೆಚ್ಚ ಇರುತ್ತೆ. ಮೊದಲಿನಿಂದಲೂ ನಾನು ಸೇವಿಂಗ್ಸ್ ಮಾಡುತ್ತಿದ್ದೇನೆ. ನನ್ನ ಕೆಲ ಕಮಿಟ್‌ಮೆಂಟ್‌ಗೆ ಆಗುವಷ್ಟಾದರೂ ಸಂಭಾವನೆ ಬೇಕಲ್ಲವೇ?’ ಎನ್ನುತ್ತಾರೆ ಅದಿತಿ.