Advertisement

ನಟ ಉಪೇಂದ್ರ ಮುಖ್ಯಮಂತ್ರಿ ಆದ್ರೆ ವಿಧಾನಸೌಧವನ್ನು ವಿವಿ ಮಾಡ್ತಾರಂತೆ!

11:44 PM Jun 03, 2019 | Lakshmi GovindaRaj |

ಬೆಂಗಳೂರು: ನಟ ಉಪೇಂದ್ರ ಭಾಗವಹಿಸುವ ಯಾವುದೇ ಸಭೆ, ಸಮಾರಂಭಗಳಿರಲಿ ಅಲ್ಲಿ ಅವರ “ಪ್ರಜಾಕೀಯ’ದ ಕುರಿತಾಗಿ ಒಂದಷ್ಟು ಮಾತುಗಳು ಇದ್ದೇ ಇರುತ್ತವೆ. ಒಂದು ವೇಳೆ, ಉಪೇಂದ್ರ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಿಬಿಟ್ಟರೆ, ಅವರು ಏನೆಲ್ಲಾ ಮಾಡಬಹುದು?

Advertisement

ಇಂಥದ್ದೊಂದು ಪ್ರಶ್ನೆಗೆ ಸ್ವತಃ ಉಪೇಂದ್ರ ಕೊಟ್ಟ ಉತ್ತರವೇನು ಗೊತ್ತಾ?
“ನಾನೇನಾದರೂ ಮುಖ್ಯಮಂತ್ರಿ ಆಗಿಬಿಟ್ಟರೆ, ಆಗ ಯಾವುದೇ ಜನಪ್ರತಿನಿಧಿಗಳ ಸಭೆ-ಸಮಾರಂಭಗಳು ಇರುವುದೇ ಇಲ್ಲ. ಎಲ್ಲರನ್ನೂ ವಿಧಾನಸೌಧಕ್ಕೆ ಕಳುಹಿಸದೆ ಅವರವರ ಕ್ಷೇತ್ರದ ಅಭಿವೃದ್ಧಿಗಾಗಿ ಆಯಾ ಭಾಗದ ಜನರ ಬಳಿ ಕಳುಹಿಸುತ್ತೇನೆ. ಕಚೇರಿ ವೇಳೆಯಂತೆ ಅವರು ಕೆಲಸ ಮಾಡಬೇಕು’ ಎನ್ನುತ್ತಾರೆ ಉಪೇಂದ್ರ.

ಹಾಗಾದರೆ, “ಈಗಿರುವ ವಿಧಾನಸೌಧವನ್ನು ಏನು ಮಾಡಬೇಕು?’
ಈ ಪ್ರಶ್ನೆಗೂ ಉತ್ತರಿಸುವ ಉಪೇಂದ್ರ, “ಅದನ್ನ ವಿಶ್ವವಿದ್ಯಾಲಯ ಮಾಡೋಣ. ಇಲ್ಲವೆ ಸಾಂಸ್ಕೃತಿಕ ಕೇಂದ್ರವನ್ನಾಗಿ ಪರಿವರ್ತಿಸಿ, ರಜಾ ದಿನಗಳಲ್ಲಿ ಅಲ್ಲಿ ಒಂದಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ. ಜನರು ಕೂಡ ಅದನ್ನು ನೋಡಲು ಬರುತ್ತಾರೆ. ಬೇರೆ ಬೇರೆ ದೇಶಗಳಲ್ಲಿ ಮೈಕ್ರೋ ಲೆವಲ್‌ನಿಂದ ಕೆಲಸಗಳು ನಡೆಯುತ್ತಿವೆ.

ಆದರೆ ನಮ್ಮಲ್ಲಿ ಅದು ಆಗುತ್ತಿಲ್ಲ. ಆಡಳಿತವನ್ನು ವ್ಯಾಪಾರ ದೃಷ್ಟಿಯಿಂದ ನೋಡುತ್ತಿರುವುದರಿಂದ ನಾಯಕರು ಅದೇ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಶಕ್ತಿ ಕೇಂದ್ರವನ್ನು ಕಟ್ಟಿದ ನಾವುಗಳು ಅದರ ಮುಂದೆ ಸೆಲ್ಫಿ ತೆಗೆದುಕೊಂಡರೆ, ಏನೂ ಮಾಡದವರು ಒಳಗಡೆ ನಾಯಕರಾಗುತ್ತಿದ್ದಾರೆ’ ಎಂಬುದು ಉಪೇಂದ್ರ ಅವರ ಮಾತು.

ಅದೇನೆ ಇರಲಿ, ಉಪೇಂದ್ರ ಅವರು ವಿಧಾನಸೌಧವನ್ನು ವಿಶ್ವವಿದ್ಯಾಲಯ ಮಾಡೋಣ ಅಂತ ಹೇಳಿರುವುದರಲ್ಲಿ ಎಷ್ಟು ಸರಿ, ತಪ್ಪು ಇದೆಯೋ ಗೊತ್ತಿಲ್ಲ. ಆದರೆ, ಅದೆಲ್ಲಾ ಸಾಧ್ಯನಾ? ಈ ಪ್ರಶ್ನೆ ಸದ್ಯಕ್ಕೆ ಪ್ರಶ್ನೆಯಾಗಿಯೇ ಉಳಿದಿದೆ.

Advertisement

ಅಂದಹಾಗೆ, ಇಂಥದ್ದೊಂದು ಮಾತುಗಳಿಗೆ ವೇದಿಕೆಯಾಗಿದ್ದು, ಕನ್ನಡ ಸಿನಿಮಾ-ಟಿವಿ ಡೈರೆಕ್ಟರಿ ಬಿಡುಗಡೆ ಸಮಾರಂಭ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಉಪೇಂದ್ರ ವೇದಿಕೆಯಲ್ಲಿ ಸಿಕ್ಕ ಸಣ್ಣ ಗ್ಯಾಪ್‌ನಲ್ಲಿಯೇ ತಮ್ಮ “ಪ್ರಜಾಕೀಯ’ ಭವಿಷ್ಯದ ಯೋಚನೆ ಮತ್ತು ಯೋಜನೆಗಳ ಬಗ್ಗೆ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next