Advertisement

ನಟ ರಕ್ಷಿತ್‌ ಶೆಟ್ಟಿ ರೆಡ್‌ಕ್ರಾಸ್‌ ಸಂಸ್ಥೆ ರಾಯಭಾರಿ

12:43 PM Oct 01, 2018 | Team Udayavani |

ಕೆಂಗೇರಿ: ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ರಾಜ್ಯ ಘಟಕದ (ಬ್ರಾಂಡ್‌ ಅಂಭಾಸೆಡರ್‌) ರಾಯಭಾರಿಯಾಗಿ ನಟ ರಕ್ಷಿತ್‌ ಶೆಟ್ಟಿಯವರನ್ನು ನೇಮಿಸಲಾಯಿತು.

Advertisement

ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಭವನದಲ್ಲಿ ರಾಜ್ಯ ರೆಡ್‌ ಕ್ರಾಸ್‌ ಸೊಸೈಟಿಯು ಅಯೋಜಿಸಿದ್ದ ರಾಷ್ಟ್ರೀಯ ವಾಲೆಂಟರಿ ಬ್ಲಿಡ್‌ ಡೋನೇಷನ್‌ ಡೇ-2018ರ ಕಾರ್ಯಕ್ರಮದಲ್ಲಿ ರಾಜ್ಯ ರೆಡ್‌ ಕ್ರಾಸ್‌ ಸೊಸೈಟಿಯ ಅಧ್ಯಕ್ಷ ಬಸರೂರು ರಾಜೀವ್‌ ಶೆಟ್ಟಿ ಅವರು ನಟ ರಕ್ಷಿತ್‌ ಶೆಟ್ಟಿಯವರು ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ರಾಜ್ಯ ಘಟಕದ ರಾಯಭಾರಿಯಾಗಿ ನೇಮಕಗೊಡಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದರು.

ಸಮಾರಂಭದಲ್ಲಿ ಸ್ವತಃ ನಟ ರಕ್ಷಿತ್‌ ಶೆಟ್ಟಿಯವರು ರಕ್ತದಾನವನ್ನು ಮಾಡಿ, ಮಾತನಾಡಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸ್ವಲ್ಪ ಸಮಯವನ್ನಾದರು ಸಮಾಜ ಸೇವೆಗಾಗಿ ಮೀಸಲಾಗಿಡಬೇಕು. ಈ ನಿಟ್ಟಿನಲ್ಲಿ ರೆಡ್‌ಕ್ರಾಸ್‌ ಸಂಸ್ಥೆಯು ಮತ್ತು ಎನ್‌ಎಸ್‌ಎಸ್‌ ಉತ್ತಮ ಕಾರ್ಯವನ್ನು ಮಾಡುತ್ತಿದ್ದು ಸಾವಿರಾರು ಯುನಿಟ್‌ ರಕ್ತವನ್ನು ಸಂಗ್ರಹಿಸಿ ಅವಶ್ಯಕತೆ ಇರುವವರಿಗೆ ಅದನ್ನು ನೀಡುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿಯ ರಾಜ್ಯ ಘಟಕದ ಚೊಚ್ಚಲ ರಾಯಭಾರಿಯಾಗಿ ತಮ್ಮನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತ ದಾನಕ್ಕೆ ಮುಂದಾಗಬೇಕು ಎಂದು ಹೇಳಿದರು. ರಕ್ತ ದಾನಕ್ಕೆ ಮಹಿಳೆಯರಿಂದ ಅಗತ್ಯ ಸ್ಪಂದನೆ ದೊರಕುತ್ತಿಲ್ಲ.

ಶೇ.0.6ರಷ್ಟು ಮಹಿಳೆಯರು ಮಾತ್ರ ರಕ್ತದಾನ ಪ್ರಕ್ರಿಯೆಯಲ್ಲಿ ಕೈ ಜೋಡಿಸಿದ್ದಾರೆ. ಎಲ್ಲಾ ರಂಗಗಳಲ್ಲಿ ಪಾರಮ್ಯ ಸಾಧಿಸಿರುವ ಮಹಿಳೆಯರು ರಕ್ತ ದಾನಕ್ಕೂ ಮುಂದಾಗಬೇಕು. ರಕ್ತ ದಾನವೊಂದೆ ರಕ್ತ ಸಂಗ್ರಹಣೆಗೆ ಇರುವ ಏಕೈಕ ಮಾರ್ಗ. ರಕ್ತ ದಾನ‌ದಿಂದ ಹೃದಯ ಬೇನೆ ಸೇರಿದಂತೆ ಇನ್ನಿತರ ಕಾಯಿಲೆಗಳ ಸಂಭವನೀಯತೆಯು ಇಳಿ ಮುಖವಾಗಲಿದೆ ಎಂದು ರೆಡ್‌ ಕ್ರಾಸ್‌ ರಾಜ್ಯ ಘಟಕದ ಸಭಾಪತಿ ಬಸೂರ್‌ ರಾಜೀವ ಶೆಟ್ಟಿ ಹೇಳಿದರು.

Advertisement

ಬೆಂವಿವಿ ಕಮ್ಯೂನಿಕೇಷನ್‌ ಮುಖ್ಯಸ್ಥ ಪ್ರೊ,ಡಾ.ಅಶೋಕ್‌ ಕುಮಾರ್‌ ಮಾತನಾಡಿ ವಿಶ್ವವಿದ್ಯಾಲಯವು ರೆಡ್‌ಕ್ರಾಸ್‌ ಸಂಸ್ಥೆಯೊಡಗೂಡಿ ಎನ್‌ಎಸ್‌ಎಸ್‌ ಸ್ವಯಂ ಸೇವಕರ ಜತೆ ಪ್ರತಿ ವರ್ಷ ನಗರದ ಹಲವಾರು ಕಾಲೇಜುಗಳಲ್ಲಿ ರಕ್ತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ ರಕ್ತವನ್ನು ಸಂಗ್ರಹಿಸಿ ಕೊಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು. ಇದೇ ವೇಳೆ ಅವರು ರೆಡ್‌ ಕ್ರಾಸ್‌ ಸಂಸ್ಥೆಯ ನೂತನ ಘೋಷಣಾ ವಾಕ್ಯ ”ರಕ್ತದಾನದಿಂದ ಸಂತೋಷ” ಫ‌ಲಕ ಬಿಡುಗಡೆ ಮಾಡಿದರು.

ಸಮಾರಂಭದಲ್ಲಿ ಸುಮಾರು ಇನ್ನೂರೈವತ್ತಕ್ಕೂ ಹೆಚ್ಚು ಯುನಿಟ್‌ ರಕ್ತ ಸಂಗ್ರಹವಾಯಿತು. ರಕ್ತದಾನದ ಉಪಸಮಿತಿಯ ಕನ್‌ವೀನರ್‌ ಡಾ. ಶಾಮ್‌ ಸುಂದರ್‌, ರಾಜ್ಯ ಸಂಯೋಜನಾದಿಕಾರಿ ಬಾಲಕೃಷ್ಣಶೆಟ್ಟಿ, ಕಾರ್ಯದರ್ಶಿ ಅಶೊಕ್‌ ಕುಮಾರ್‌ ಶೆಟ್ಟಿ, ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ.ಆರ್‌.ಶ್ರೀನಿವಾಸ್‌, ರಾಜೀವ್‌ ಚಂದ್ರಶೇಖರ್‌, ಜಯರಾಮ್‌ ಶೆಟ್ಟಿ ಸೇರಿದಂತೆ ನೂರಾರು ಎನ್‌ಎಸ್‌ಎಸ್‌ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next