ಪುಣೆ : ಬಾಲಿವುಡ್ ನಟಿ ಪಾಯಲ್ ರೋಹಟಗಿ ಅವರಿಗೆ ಕಾನೂನು ಕಂಠಕ ಎದುರಾಗಿದೆ. ಈ ನಟಿಯ ವಿರುದ್ಧ ಪುಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಪ್ರಧಾನಿ ನೆಹರು-ಗಾಂಧಿ ಕುಟುಂಬದ ಕುರಿತು ಅವಹೇಳನಕಾರಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪ ಈ ನಟಿಯ ಮೇಲೆ ಕೇಳಿ ಬಂದಿದೆ. ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಪೊಲೀಸರು ಐಪಿಸಿಯ ಸೆಕ್ಷನ್ 153(ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 500(ಮಾನನಷ್ಟಕ್ಕೆ ಶಿಕ್ಷೆ), 505(2)(ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆಗಳು) ಅಡಿಯಲ್ಲಿ ನಟಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.
ಏನಿದು ಆರೋಪ ?
ನಟಿ ಪಾಯಲ್ ಅವರು ಅಪರಿಚಿತ ವ್ಯಕ್ತಿಯೊಂದಿಗೆ ಮಹಾತ್ಮ ಗಾಂಧಿ, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಗಾಂಧಿ ಕುಟುಂಬದ ಇತರ ಸದಸ್ಯರ ಬಗ್ಗೆ ಅವಹೇಳನಕಾರಿ ವೀಡಿಯೊವನ್ನು ರಚಿಸಿದ್ದಾರೆ ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಿಡಿಯೋವನ್ನು ಗಮನಿಸಿ, ಕಾಂಗ್ರೆಸ್ ನಾಯಕಿ ಸಂಗೀತಾ ತಿವಾರಿ ಮತ್ತು ಪಕ್ಷದ ಪುಣೆ ನಗರ ಘಟಕದ ಪದಾಧಿಕಾರಿಗಳು ರೋಹಟಗಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿ ಪೊಲೀಸರನ್ನು ಸಂಪರ್ಕಿಸಿದರು.