Advertisement

ಬಿಸಿಲು ಕುದುರೆ ಮೇಲೆ ಮಿತ್ರ ಸವಾರಿ

09:49 AM Apr 05, 2019 | Nagendra Trasi |

ನಟ ಮಿತ್ರ ಅವರೀಗ ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಹಾಗಂತ, ಆ ಚಿತ್ರದಲ್ಲಿ ಅವರದು ಪೋಷಕ ಪಾತ್ರ ಅಂದುಕೊಳ್ಳುವಂತಿಲ್ಲ. “ರಾಗ’ ಬಳಿಕ ಅವರು ಹಲವು ಚಿತ್ರಗಳಲ್ಲಿ ಪೋಷಕ ಪಾತ್ರ ನಿರ್ವಹಿಸುತ್ತಲೇ, “ಪರಸಂಗ’ ಎಂಬ ಚಿತ್ರದಲ್ಲೂ ಪ್ರಧಾನ ಪಾತ್ರ ಮಾಡಿ ಸೈ ಎನಿಸಿಕೊಂಡವರು. ಇದೀಗ “ಬಿಸಿಲು ಕುದುರೆ’ ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರವನ್ನು ಸ್ಯಾಮ್ಯುಯಲ್‌ ಟೋನಿ ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಇನ್ನು, ಅವರ ಗೆಳೆಯರೊಬ್ಬರು ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.

Advertisement

“ಬಿಸಿಲು ಕುದುರೆ’ ಶೀರ್ಷಿಕೆ ಕೇಳಿದೊಡನೆ ಇದು ಕಲಾತ್ಮಕ ಚಿತ್ರವೇ ಅಥವಾ ಕಮರ್ಷಿಯಲ್‌ ಚಿತ್ರವೇ ಎಂಬ ಸಣ್ಣ ಪ್ರಶ್ನೆ ಎದುರಾಗುವುದು ಸಹಜ. ಅದಕ್ಕೆ ಉತ್ತರ, ಇದೊ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಚಿತ್ರ ಎಂಬುದು ಮಿತ್ರ ಅವರ ಮಾತು.

ಇಡೀ ಚಿತ್ರ ಮನರಂಜನೆಯಲ್ಲೇ ಸಾಗಲಿದೆ ಎನ್ನುವ ಮಿತ್ರ, ಚಾರಿಚಾಪ್ಲಿನ್‌ ಅವರ ಶೇಡ್‌ನ‌ಲ್ಲೇ ಚಿತ್ರ ಸಾಗಲಿದೆ. ಹಾಗಂತ ಇಲ್ಲಿ ವ್ಯಥೆ ಎಂಬುದಿಲ್ಲ. ಒಳ್ಳೆಯ ಕಥೆಯೊಂದಿಗೆ ಅಪ್ಪಟ ಹಾಸ್ಯಮಯ ಚಿತ್ರ ಇದಾಗಲಿದೆ. ಒಬ್ಬ 45 ವರ್ಷದ ವಯಸ್ಸಿನ ವ್ಯಕ್ತಿಯ ಚಿತ್ರಣ ಇಲ್ಲಿದೆ. ತನ್ನ ಲೈಫ‌ನ್ನು ಎಷ್ಟು ಹ್ಯೂಮರಸ್‌ ಆಗಿ ತೆಗೆದುಕೊಂಡು ಜೀವಿಸುತ್ತಾನೆ ಮತ್ತು ಕಟುವಾದಂತಹ ಸತ್ಯವನ್ನು ಹೇಗೆಲ್ಲಾ ಹಾಸ್ಯ ರೂಪದಲ್ಲಿ ಹೇಳುವ ಮೂಲಕ ರಂಜಿಸುತ್ತಾನೆ ಎಂಬುದೇ ಚಿತ್ರದ ಒನ್‌ಲೈನ್‌ ಸ್ಟೋರಿ.

ಇಡೀ ಚಿತ್ರದಲ್ಲಿ ಮನರಂಜನೆಗೆ ಕೊರತೆ ಇಲ್ಲ ಎನ್ನುವ ಮಿತ್ರ, ಇಲ್ಲಿ ಮನರಂಜನೆ ಜೊತೆಯಲ್ಲಿ ಸಂದೇಶ ಕೂಡ ಇದೆ. ಅದೇ ಸಿನಿಮಾದ ಹೈಲೈಟ್‌. ಸದ್ಯಕ್ಕೆ “ಬಿಸಿಲು ಕುದುರೆ’ ಚಿತ್ರಕ್ಕೆ ತಯಾರಿ ನಡೆಯುತ್ತಿದೆ. ಆ ಪಾತ್ರಕ್ಕೆ ಒಂದಷ್ಟು ದಪ್ಪ ಆಗಬೇಕಿದ್ದು, ಅದಕ್ಕಾಗಿ ಸಾಕಷ್ಟು ವರ್ಕೌಟ್ ಮಾಡುತ್ತಿದ್ದೇನೆ. ಇದೊಂದು ಹೊಸ ಪ್ರಯೋಗವಾಗಿರುವುದರಿಂದ ಎಲ್ಲವನ್ನೂ ನೈಜತೆ ಎಂಬಂತೆಯೇ ತೋರಿಸಬೇಕಾಗಿದೆ.

ಹಾಗಾಗಿ, ನಿರ್ದೇಶಕರು ಸ್ಕ್ರಿಪ್ಟ್ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್‌ ವೇಳೆಗೆ ಚಿತ್ರಕ್ಕೆ ಚಾಲನೆ ಸಿಗಲಿದೆ. ನಾಗೇಶ್‌ ಆಚಾರ್ಯ ಛಾಯಾಗ್ರಹಣ ಮಾಡಿದರೆ, “ಪರಸಂಗ’ ಚಿತ್ರಕ್ಕೆ ಸಂಗೀತ ನೀಡಿದ್ದ ಹರ್ಷವರ್ಧನ್‌ ರಾಜ್‌ “ಬಿಸಿಲು ಕುದುರೆ’ ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ. ಮೈಸೂರು, ಮಂಗಳೂರು ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂಬುದು ಮಿತ್ರ ಹೇಳಿಕೆ.

Advertisement

ಚಿತ್ರದ ನಾಯಕಿ ಸೇರಿದಂತೆ ಇತರೆ ಕಲಾವಿದರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಇಲ್ಲಿ ನಾಯಕಿಯ ಜೊತೆಗೆ ಇನ್ನೂ ಒಂದು ಪ್ರಮುಖ ಪಾತ್ರವಿದೆ. ಅದು ‘ಬೆಳದಿಂಗಳ ಬಾಲೆ’ ರೀತಿಯಂತಹ ಪಾತ್ರ ಎನ್ನುತ್ತಾರೆ ಮಿತ್ರ. ಅಂದಹಾಗೆ, ಮಿತ್ರ ಅಭಿನಯಿಸಿ, ನಿರ್ಮಿಸಿದ್ದ “ರಾಗ’ ತಮಿಳು ಭಾಷೆಗೆ ಡಬ್‌ ಆಗಿದ್ದು, ಏಪ್ರಿಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ತಮಿಳಿನಲ್ಲಿ “ರಾಗಂ’ ಹೆಸರಲ್ಲಿ ತೆರೆಗೆ ಬರುತ್ತಿದೆ. ಅತ್ತ, ಮಿತ್ರ ಕೂಡ ಹಲವು ಚಿತ್ರಗಳಲ್ಲಿ ಪೋಷಕ ಕಲಾವಿದರಾಗಿಯೂ ಬಿಜಿಯಾಗಿದ್ದಾರೆ. “ಮುತ್ತು ಕುಮಾರ’, “ಸಾರ್ವಜನಿಕರಿಗೆ ಸುವರ್ಣಾವಕಾಶ’, ‘ರಾಮಾರ್ಜುನ’,”ದಮಯಂತಿ’ ಸೇರಿದಂತೆ ಇತರೆ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next