ಹಿರಿಯ ನಿರ್ಮಾಪಕ, ನಿರ್ದೇಶಕ ಶಂಕರ್ ಸಿಂಗ್ ಅವರ ಮೊಮ್ಮಕ್ಕಳು ಸಿನಿಮಾಗೆ ಬಂದಿರೋದು ಎಲ್ಲರಿಗೂ ಗೊತ್ತು. ಆದರೆ, ಜೈಜಗದೀಶ್ ದಂಪತಿಯ ಮೂವರು ಪುತ್ರಿಯರು ತಮ್ಮ ನಿರ್ಮಾಣದ ಚಿತ್ರದಲ್ಲಿ ಸಣ್ಣಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ನಾಯಕಿಯರಾಗಿ ಗುರುತಿಸಿಕೊಂಡಿರಲಿಲ್ಲ. ಈಗ ಅಪ್ಪನ ನಿರ್ಮಾಣ, ಅಮ್ಮನ ನಿರ್ದೇಶನದ “ಯಾನ’ ಮೂಲಕ ಮೊದಲ ಸಲ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಹಾಡುಗಳನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ ಚಿತ್ರತಂಡ.
ಈ ತಂಡದಲ್ಲಿ ಒಂದು ಹೊಸ ಬದಲಾವಣೆಯಾಗಿದೆ. ಅದು ನಿರ್ಮಾಪಕ ಹರೀಶ್ ಶೇರಿಗಾರ್. ಹೌದು, ಆರಂಭದಲ್ಲಿ ಜೈ ಜಗದೀಶ್ ನಿರ್ಮಾಣದಲ್ಲಿ “ಯಾನ’ ಶುರುವಾಗಿತ್ತು. ಕಥೆ ಚೆನ್ನಾಗಿದೆ ಅಂತ ಗೊತ್ತಾದ ಮೇಲೆ, ಸ್ವತಃ ಹರೀಶ್ ಶೇರಿಗಾರ್ ಅವರೇ, ಈ ಚಿತ್ರದಲ್ಲಿ ಪಾಲುದಾರ ನಿರ್ಮಾಪಕರಾಗಿ ಸೇರಿಕೊಂಡಿದ್ದಾರೆ. ಅಂದಹಾಗೆ, ಇತ್ತೀಚೆಗೆ ಚಿತ್ರದ ಪ್ರಚಾರಕ್ಕೊಂದು ವಿಶೇಷ ಹಾಡನ್ನು ಚಿತ್ರೀಕರಿಸಿದ್ದ ಚಿತ್ರತಂಡ, ಅದನ್ನು ಸುದೀಪ್ ಅವರಿಂದ ಬಿಡುಗಡೆ ಮಾಡಿಸಿತು.
ಚಿತ್ರದ ಪ್ರಚಾರಕ್ಕಾಗಿಯೇ ಡಿಗ್ಲಾಮರಸ್ ಆಗಿ ಮೂವರು ನಾಯಕಿಯರು ಇಲ್ಲಿ ಮಾಯ, ಅಂಜಲಿ ಮತ್ತು ನಂದಿನಿ ಹೆಸರಿನ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆ ಹಾಡನ್ನು ವೀಕ್ಷಿಸಿದ ಸುದೀಪ್, ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
“ನಾನು ಜೈ ಜಗದೀಶ್ ಅವರನ್ನು ಮೊದಲಿನಿಮದಲೂ ಮಾಮ ಅಂತಾನೆ ಕರೆಯುತ್ತೇನೆ. ಅವರು ನಾಯಕರಾಗಿದ್ದ “ಪವಿತ್ರ ಪಾಪಿ’ ಎಂಬ ಚಿತ್ರವನ್ನು ನಮ್ಮ ತಂದೆ ನಿರ್ಮಿಸಿದ್ದರು. ನನ್ನ ಅನೇಕ ಚಿತ್ರಗಳ ಕಾರ್ಯಕ್ರಮಕ್ಕೆ ಜೈಜಗದೀಶ್ ದಂಪತಿ ಬಂದಿದ್ದಾರೆ. ಈಗ ಅವರ ಸಿನಿಮಾ, ನನ್ನ ಸಿನಿಮಾ ಅಂದುಕೊಂಡು ಬಂದಿದ್ದೇನೆ. ಇನ್ನು, ಎಲ್ಲರ ಬದುಕಿನಲ್ಲೂ ಒಂದು ಪ್ರಯಾಣ ಬಂದು ಹೋಗುತ್ತೆ. ಇದು ಕೂಡ ಅಂಥದ್ದೇ “ಯಾನ’. ಮೂವರು ನಾಯಕಿಯರಿಗೆ ಒಳ್ಳೆಯ ಯಶಸ್ಸು ಸಿಗಲಿ. ಅವರ ಸಿನಿಮಾ “ಯಾನ’ ಈ ಮೂಲಕ ಗಟ್ಟಿಯಾಗಲಿ. ಸಂಗೀತ ನಿರ್ದೇಶಕ ಸಿದ್ಧಾರ್ಥ್ ವಿಶೇಷ ಗೀತೆ ರಚಿಸಿ, ಸಂಗೀತ ನೀಡಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ’ ಅಂತ ಶುಭ ಹಾರೈಸಿದರು ಸುದೀಪ್.
ನಾಯಕಿಯರಾದ ವೈಭವಿ, ವೈನಿಧಿ ಹಾಗು ವೈಸಿರಿ ಅವರು ಸುದೀಪ್ ಚಿತ್ರಗಳನ್ನು ನೋಡಿ ಬೆಳೆದವರಂತೆ. “ಸಿನಿಮಾ ಕುಟುಂಬದ ಹಿನ್ನೆಲೆ ಇದ್ದರೂ, ಈ ಕುರಿತು ಹೆಚ್ಚು ಮಾಹಿತಿ ಇರಲಿಲ್ಲ. ಆದರೆ, ಕ್ಯಾಮೆರಾ ಮುಂದೆ ನಿಂತಾಗ ಎಷ್ಟೆಲ್ಲಾ ಕಷ್ಟಗಳಿರುತ್ತವೆ ಅನ್ನೋದು ಗೊತ್ತಾಯ್ತು’ ಎಂದು ಅನುಭವ ಹಂಚಿಕೊಂಡರು ಅವರು.
ನಿರ್ಮಾಣದಲ್ಲಿ ಸಾಥ್ ಕೊಟ್ಟಿರುವ ಹರೀಶ್ ಶೇರಿಗಾರ್ ಅವರಿಗೆ ಕಥೆ ಇಷ್ಟವಾಗಿದ್ದರಿಂದ ಅವರೂ “ಯಾನ’ದ ಪಾಲುಗಾರರಾಗಿದ್ದಾರೆಂತೆ. “ನಮ್ಮ ಕುಟುಂಬ ಸಿನಿಮಾ ರಂಗಕ್ಕೆ ಬಂದು 75 ವರ್ಷ ಕಳೆದಿದೆ. “ಯಾನ’ ಪ್ರಯಾಣ ನಮ್ಮ ಕುಟುಂಬದ 100ರ ಆಸುಪಾಸಿನ ಚಿತ್ರ’ ಅಂತ ವಿವರ ಕೊಟ್ಟರು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು. ಈ ವೇಳೆ ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್, ಪ್ರತಿಮಾದೇವಿ, ಜೈ ಜಗದೀಶ್, ಸಂಕಲನಕಾರ ಕೆಂಪರಾಜ ಅರಸು, ಸಂಗೀತ ನಿರ್ದೇಶಕ ಜೋಶ್ವಾ ಶ್ರೀಧರ್, ಛಾಯಗ್ರಾಹಕ ಕರಂಚಾವ್ಲಾ ಇದ್ದರು.