ಬೆಂಗಳೂರು:ಜಿಮ್ ತರಬೇತುದಾರ ಮಾರುತಿಗೌಡ ಎಂಬಾತನನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದುನಿಯಾ ವಿಜಯ್ ಸೋಮವಾರ ಜಾಮೀನು ಆಧಾರದಲ್ಲಿ ಬಿಡುಗಡೆಗೊಂಡಿದ್ದಾರೆ.
ಪ್ರಕರಣದ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಮಾನ್ಯ ಮಾಡಿದ ಸೆಷನ್ಸ್ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ, ವಿಜಯ್, ಪ್ರಸಾದ್, ಮಣಿ, ಕಾರು ಚಾಲಕ ಪ್ರಸಾದ್‌ನನ್ನು ಎಂಟು ದಿನಗಳ ಬಳಿಕ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಳಿಸಲಾಗಿದೆ.
ಸೋಮವಾರ ರಾತ್ರಿ 8-20ರ ಸುಮಾರಿಗೆ ಜೈಲಿನಿಂದ ಹೊರಬಂದ ವಿಜಯ್ ಅವರನ್ನು ಎರಡನೇ ಪತ್ನಿ ಕೀರ್ತಿ ಪಟ್ವಾಡಿ ಬರಮಾಡಿಕೊಂಡರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ನಟ ವಿಜಯ್ “” ನಾನು ಯಾವುದೇ ತಪ್ಪು ಮಾಡಿಲ್ಲ. ರೌಡಿಶೀಟರ್ ಕೂಡ ಅಲ್ಲ. ಪ್ರಕರಣದಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗಗೊಳಿಸುತ್ತೇನೆ. ಜತೆಗೆ, ಪಾನಿಪೂರಿ ಕಿಟ್ಟಿ ಮೇಲೆಯೂ ನನಗೆ ಯಾವುದೇ ದ್ವೇಷವಿಲ್ಲ ಎಂದಿದ್ದಾರೆ.
ಅಂಬೇಡ್ಕರ್ ಭವನದಲ್ಲಿ ಸೆ.22ರಂದು ನಡೆದ “32ನೇ ಅಮೇಚೂರ್ ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಪ್, ಮಿಸ್ಟರ್ ಬೆಂಗಳೂರು -2018′ ಸ್ಪರ್ಧೆ ಕಾರ್ಯಕ್ರಮದ ವೇಳೆ ಜಿಮ್ ತರಬೇತುದಾರ ಮಾರುತಿ ಗೌಡ ಜತೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಆತನನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ವಿಜಯ್ , ಪ್ರಸಾದ್, ಮಣಿ, ಪ್ರಸಾದ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ನಾಯಕ ನಟ ಸಮಾಜಕ್ಕೆ ಮಾದರಿಯಾಗಿರಬೇಕು!
ಸಿನಿಮಾಗಳಲ್ಲಿ ನಾಯಕ ನಟನಾಗಿರುವವರು ಸಮಾಜಕ್ಕೆ ಮಾದರಿಯಾಗಿರಬೇಕು. ಜನರು ಅವರನ್ನು ಗಮನಿಸುತ್ತಿರುತ್ತಾರೆ. ಮುಂದೆ ಇಂತಹ ತಪ್ಪುಗಳು ಆಗದಂತೆ ಎಚ್ಚರವಹಿಸುವಂತೆ ನಟ ವಿಜಯ್‌ಗೆ ನ್ಯಾಯಾಧೀಶರು ಮೌಖೀಕ ಸಲಹೆ ನೀಡಿದ್ದಾರೆ.ನಟ ವಿಜಯ್‌ಗೆ ಜಾಮೀನು ನೀಡುವ ವೇಳೆ ನ್ಯಾಯಾಧೀಶರು ಮೌಖೀಕವಾಗಿ ಸಲಹೆಗಳನ್ನು ನೀಡಿದ್ದು ಅವರಿಗೆ ತಿಳಿಸುತ್ತೇನೆ ಎಂದು ವಿಜಯ್ ಪರ ವಕೀಲ ಶಿವಕುಮಾರ್ ಹೇಳಿದ್ದಾರೆ.