ಗುಂಡ್ಲುಪೇಟೆ (ಚಾಮರಾಜನಗರ): ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರನಟ ಧನ್ವೀರ್ ರಾತ್ರಿ ಸಫಾರಿ ಮಾಡಿಲ್ಲ ಎಂದು ಬಂಡೀಪುರ ಅರಣ್ಯದ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ಅವರು ಶನಿವಾರ ಬೆಳಗ್ಗೆ ಚಿತ್ರನಟ ಧನ್ವೀರ್ ಅವರನ್ನು ವಿಚಾರಣೆಗೆ ಬರುವಂತೆ ಸೂಚಿಸಲಾಗಿತ್ತು. ಅದರಂತೆ ಅವರು ಮೇಲುಕಾಮನಹಳ್ಳಿ ಅರಣ್ಯ ಕಚೇರಿಗೆ ಹಾಜರಾಗಿ ತಾವು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿರುವ ಸಫಾರಿಯ ದೃಶ್ಯವನ್ನು ತೋರಿಸಿದ್ದಾರೆ. ಈ ವೀಡಿಯೋವನ್ನು ಸಂಜೆ 6.25 ರಿಂದ 6.31ರವರೆಗೆ ತೆಗೆಯಲಾಗಿದೆ.
ಧನ್ವೀರ್ ಮಾಮೂಲಿಯಂತೆಯೇ ಸಫಾರಿ ಕೌಂಟರ್ ನಲ್ಲಿ ಟಿಕೆಟ್ ಪಡೆದು ಅವರು ಮತ್ತು ಅವರ ಸ್ನೇಹಿತರೊಬ್ಬರು ಸಫಾರಿಯ ಜೀಪ್ ನಲ್ಲಿ ತೆರಳಿ ಸಂಜೆ 6.40 ಕ್ಕೆ ವಾಪಸ್ ಬಂದಿದ್ದಾರೆ. ಅವರು ಜಾಲತಾಣದಲ್ಲಿ ಹಾಕುವಾಗ ಸಂಜೆ ಎಂದು ಹಾಕುವ ಬದಲು ರಾತ್ರಿ ಎಂದು ಹಾಕಿರುವುದು ತಪ್ಪಾಗಿದೆ.
ನಮ್ಮಲ್ಲಿ ಯಾರಿಗೇ ಆದರೂ ಸಹ ರಾತ್ರಿ ಸಫಾರಿಗೆ ಅವಕಾಶ ನೀಡುವುದಿಲ್ಲ. ಸಂಜೆ ಬೇಗನೇ ಕತ್ತಲಾಗುವುದರಿಂದ ಈ ಗೊಂದಲ ಉಂಟಾಗಿತ್ತು. ಇದರಲ್ಲಿ ಧನ್ವೀರ್ ಅವರದು ಯಾವುದೇ ತಪ್ಪಿಲ್ಲ ಎಂದು ಅರಣ್ಯಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ