ನವದೆಹಲಿ: ಜನಪ್ರಿಯ ಧಾರಾವಾಹಿ ‘ಭಾಬಿಜಿ ಘರ್ ಪರ್ ಹೈ’ ನಲ್ಲಿ ಮಲ್ಖಾನ್ ಪಾತ್ರದಲ್ಲಿ ಹೆಸರುವಾಸಿಯಾಗಿದ್ದ ಕಿರುತೆರೆ ನಟ ದೀಪೇಶ್ ಭಾನ್ ಶನಿವಾರ ಬೆಳಿಗ್ಗೆ ನಿಧನರಾದರು.
41 ವರ್ಷ ಪ್ರಾಯದ ನಟ ದೀಪೇಶ್ ತಮ್ಮ ಕಿರುತೆರೆ ವೃತ್ತಿಜೀವನದಲ್ಲಿ ಹಲವಾರು ಹಾಸ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರ ಅಭಿಮಾನಿಗಳು ಮತ್ತು ಗಣ್ಯರು ಸಾಮಾಜಿಕ ಮಾಧ್ಯಮದಲ್ಲಿ ನಿಧನರಾದ ನಟನ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
ದೀಪೇಶ್ ಬೆಳಗ್ಗೆ ಕ್ರಿಕೆಟ್ ಆಡುತ್ತಿದ್ದಾಗ ಕುಸಿದು ಬಿದ್ದರು. ನಂತರ ಅವರನ್ನು ವೈದ್ಯರ ಬಳಿಗೆ ಕರೆದೊಯ್ದರೂ ಅವರನ್ನು ಉಳಿಸಿಕೊಳ್ಳಲಾಗಿಲ್ಲ ಎಂದು ವರದಿ ತಿಳಿಸಿದೆ.
“ನನಗೆ ಇನ್ನೂ ನಂಬಲಾಗುತ್ತಿಲ್ಲ. ನಾನು ನಿನ್ನೆಯಷ್ಟೇ ಅವರನ್ನು ಭೇಟಿ ಮಾಡಿದ್ದೇನೆ ಮತ್ತು ಅವರು ಚೆನ್ನಾಗಿದ್ದರು. ನಾವು ಒಟ್ಟಿಗೆ ಕೆಲವು ರೀಲ್ ವೀಡಿಯೊಗಳನ್ನು ಮಾಡಿದ್ದೇವೆ. ನಾನು ಅವರನ್ನು ಎಂಟು ವರ್ಷಗಳಿಂದ ಬಲ್ಲೆ. ಸೆಟ್‌ಗಳಲ್ಲಿ ನನಗೆ ತುಂಬಾ ಹತ್ತಿರವಾಗಿದ್ದರು. ನಾವು ಒಟ್ಟಿಗೆ ಊಟ ಮಾಡುತ್ತಿದ್ದೆವು. ಪ್ರತಿಭಾನ್ವಿತ ನಟನ ಹೊರತಾಗಿ ಅವರು ಅದ್ಭುತ ಮನುಷ್ಯರೂ ಆಗಿದ್ದರು. ಅವರು ನನಗೆ ಮಾರ್ಗದರ್ಶನ ನೀಡುತ್ತಿದ್ದರು. ನಾವು ಒಬ್ಬ ಅದ್ಭುತ ಮನುಷ್ಯ ಮತ್ತು ನಟನನ್ನು ಕಳೆದುಕೊಂಡಿದ್ದೇವೆ” ಎಂದು ಸಹ ನಟಿ ಚಾರ್ರುಲ್ ಮಲಿಕ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ವಿಮಾನದಲ್ಲಿ ಐಪಿಎಸ್ ಅಧಿಕಾರಿಯ ಜೀವ ಉಳಿಸಿದ ತೆಲಂಗಾಣ ರಾಜ್ಯಪಾಲೆ
ದೀಪೇಶ್ ಅವರು ಪ್ರಸಿದ್ಧ ಧಾರವಾಹಿ ‘ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ’ ಮತ್ತು ‘ಮೇ ಐ ಕಮ್ ಇನ್ ಮೇಡಂ’ ಮುಂತಾದ ಧಾರಾವಾಹಿಗಳಲ್ಲೂ ಕೆಲಸ ಮಾಡಿದ್ದರು. ಅವರು ಪತ್ನಿ ಮತ್ತು ಮಗುವನ್ನು ಅಗಲಿದ್ದಾರೆ.