ದರ್ಶನ್ ನಾಯಕರಾಗಿರುವ “ಕಾಟೇರ’ ಚಿತ್ರ 100 ದಿನಗಳ ಚಿತ್ರೀಕರಣ ಪೂರೈಸಿದೆ. ದರ್ಶನ್ 71ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಬೃಹತ್ ತಾರಾಬಳಗವಿರುವ ಈ ಸಿನಿಮಾದ ಕುರಿತಾಗಿ ದರ್ಶನ್ ಮಾತನಾಡಿದ್ದಾರೆ. ಅದು ಅವರ ಮಾತುಗಳಲ್ಲೇ..
ನಾನು ಒಂದು ಸಿನಿಮಾಕ್ಕೆ 85 ದಿನ ಕಾಲ್‌ಶೀಟ್ ನೀಡುತ್ತೇನೆ. “ಕಾಟೇರ’ ಚಿತ್ರಕ್ಕೂ ಅಷ್ಟೇ ನೀಡಿದ್ದೇನೆ. ಸಿನಿಮಾ ನೂರು ದಿನ ಚಿತ್ರೀಕರಣ ವಾಗಿದೆ. ಆದರೆ ನಾನು 71 ದಿನ ಭಾಗಿಯಾಗಿ ದ್ದೇನೆ. ಉಳಿದ 14 ದಿನಗಳಲ್ಲಿ ಮೂರು ಹಾಡುಗಳ ಚಿತ್ರೀಕರಣ ಮಾಡಬೇಕು. ಅಲ್ಲಿಗೆ ನನ್ನ ಕಾಲ್‌ಶೀಟ್ ಮುಗಿಯುತ್ತದೆ. ನನ್ನ ಕಾಲ್‌ಶೀಟ್ ಪ್ಲಾನಿಂಗ್ ಬಗ್ಗೆ ನಿರ್ದೆಶಕ ತರುಣ್ ಅವರಿಗೆ ತುಂಬಾ ಚೆನ್ನಾಗಿ ಗೊತ್ತಿದೆ.
ಚಿತ್ರದಲ್ಲಿ ಹಿರಿಯರಾದ ಅವಿನಾಶ್, ಕುಮಾರ್ ಗೋವಿಂದ್, ಮಾಲಾಶ್ರೀ, ವಿನೋದ್ ಆಳ್ವ ಅವರೆಲ್ಲ ನಟಿಸಿದ್ದು, ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿ¨ªಾರೆ. ಹಿರಿಯರು ಅಷ್ಟು ಹೇಳಿದರೆ, ನಮ್ಮ ಬೆನ್ನು ತಟ್ಟಿದ ಹಾಗೆ..
”ಕಾಟೇರ’ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಮುಗಿದಿದೆ. ಈಗಾಗಲೇ ಬಹುತೇಕ ಡಬ್ಬಿಂಗ್ ಕೂಡಾ ಪೂರ್ಣಗೊಂಡಿದೆ. ಪೋಸ್ಟ್ ಪೊ›ಡಕ್ಷನ್ ನಡೆಯುತ್ತಿದೆ. ಇನ್ನು ಮೂರು ಹಾಡುಗಳ ಚಿತ್ರೀಕರಣ ಮುಗಿದರೆ, ಚಿತ್ರ ಸಂಪೂರ್ಣವಾದಂತೆ. ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರುತ್ತೇವೆ.
ಎಲ್ಲರೂ ಇದೊಂದು ದೊಡ್ಡ ಪ್ರೊಡಕ್ಷನ್ ಅಂತ ಹೇಳುತ್ತಿದ್ದಾರೆ. ಹೌದು, ರಾಕ್‌ಲೈನ್ ಪ್ರೊಡಕ್ಷನ್ ಸಂಸ್ಥೆ ದೊಡ್ಡದೇ. ಆದರೆ, ಯಾವುದೇ ನಿರ್ಮಾಣ ಸಂಸ್ಥೆ ಇರಬಹುದು, ನಟರಿರಬಹುದು. ಎಲ್ಲಕ್ಕಿಂತ ದೊಡ್ಡದು ಸಿನಿಮಾ. ಇಡೀ ಸಿನಿಮಾ ಎಲ್ಲರನ್ನೂ ಮುನ್ನಡೆಸುತ್ತದೆ. ಎಲ್ಲರ ಜೊತೆಗೆ ಕೆಲಸ ಮಾಡಿದ್ದು ಒಂದು ಅದ್ಭುತ ಅನುಭವ. ತೆಲುಗು ನಟ ಜಗಪತಿ ಬಾಬು ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯುವಾಗ ಅವರು ತಮ್ಮ ಮನೆಯಿಂದ ನಮ್ಮೆಲ್ಲರಿಗೂ ಅಡುಗೆ ಮಾಡಿಸಿಕೊಂಡು ಬಂದಿದ್ದರು. ಊಟ ಮಾಡಿ ಕೆಲಸ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಎಲ್ಲಿ ಪ್ರೀತಿ ಇರುತ್ತದೋ, ಎಲ್ಲಿ ನಾವೆಲ್ಲ ಒಂದು ಎಂದು ಕೆಲಸ ಮಾಡುತ್ತೇವೆಯೋ ಆಗ ಸಿನಿಮಾ ಚೆನ್ನಾಗಿ ಬರುತ್ತದೆ. ಕ್ಯಾರವಾನ್ ಬಿಟ್ಟು ಚೇರ್ ಹಾಕಿಕೊಂಡು ಕುಳಿತಾಗಲೇ ಬಾಂಧವ್ಯ ಬೆಳೆಯೋದು.
ಚಿತ್ರರಂಗದಲ್ಲಿ ಭವಿಷ್ಯವಿದೆ: ನಾಯಕಿ ಆರಾಧನಾ ಅವರಿಗೆ ಇದು ಮೊದಲ ಚಿತ್ರ. ತುಂಬಾ ಚೆನ್ನಾಗಿ ನಟಿಸಿದ್ದಾರೆ. ನಾನು ಅದಕ್ಕೆ ಹೇಳುತ್ತಿದ್ದೆ, ಬೆರಳು ತೋರಿಸಿದರೆ ಹಸ್ತ ನುಂಗುತ್ತಾರೆ ಎಂದು. ಖಂಡಿತಾ ಅವರಿಗೆ ಚಿತ್ರರಂಗದಲ್ಲಿ ಭವಿಷ್ಯವಿದೆ. ಚಿತ್ರರಂಗ ದಲ್ಲಿ ಒಂದಷ್ಟು ವರ್ಷ ನೆಲೆ ನಿಲ್ಲುತ್ತಾರೆ.
ನಿರ್ದೇಶಕ ತರುಣ್ ಸುಧೀರ್ ಕೂಡಾ ಸಿನಿಮಾ ಹುಟ್ಟಿಕೊಂಡ ರೀತಿ, ತಂಡದ ಪ್ರೋತ್ಸಾಹ ಸೇರಿದಂತೆ ಸಿನಿಮಾದ ಬಗ್ಗೆ ಮಾತನಾಡಿದರು. ಇಡೀ ಸಿನಮಾ 70ರ ದಶಕದ ಹಿನ್ನೆಲೆಯಲ್ಲಿ ನಡೆಯುವುದರಿಂದ ಅದಕ್ಕಾಗಿ ಒಂದು ಹಳ್ಳಿಯನ್ನೇ ಸೃಷ್ಟಿಸಿದ್ದಾಗಿ ಹೇಳಿಕೊಂಡರು ತರುಣ್.